ಮಂಡಿ: ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ಗೆ ಕಠಿಣ ಸವಾಲನ್ನು ನೀಡಲು ಮಂಡಿ ಲೋಕಸಭಾ ಕ್ಷೇತ್ರದಿಂದ ವಿಕ್ರಮಾದಿತ್ಯ ಸಿಂಗ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಬಯಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಹಾಲಿ ಮಂಡಿ ಸಂಸದೆ ಪ್ರತಿಭಾ ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ರಾಜ್ಯ ಕಾಂಗ್ರೆಸ್ ಅಧ್ಯಕ್ಷೆಯಾಗಿ ನಾನು ಇಡೀ ರಾಜ್ಯದಲ್ಲಿ ಕೆಲಸ ಮಾಡಲು ಬಯಸುತ್ತೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮಂಡಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಬೇಕಾಗುತ್ತದೆ. ವಿಕ್ರಮಾದಿತ್ಯ ಸಿಂಗ್ ಯುವ ನಾಯಕ, ಯುವಕರೊಂದಿಗೆ ಉತ್ತಮ ಸಂಪರ್ಕ ಹೊಂದಿರುವವರು ಎಂಬುದು ಪಕ್ಷದ ಹಿರಿಯ ನಾಯಕರ ಸಲಹೆಯಾಗಿತ್ತು.ಇದನ್ನು ಪಕ್ಷದ ಹೈಕಮಾಂಡ್ ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಅದರ ಬಗ್ಗೆ ನಿರ್ಧಾರವನ್ನು ಅವರು ಮಾಡಲಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
ಕಂಗನಾ ರಣಾವತ್ ಉಮೇದುವಾರಿಕೆ ಕುರಿತು ಪ್ರತಿಕ್ರಿಯಿಸಿದ ಪ್ರತಿಭಾ ಸಿಂಗ್ “ಅವರು ಏನು ತಿನ್ನುತ್ತಾರೆ ಎನ್ನುವುದು ಸೇರಿ ವೈಯಕ್ತಿಕ ಜೀವನದ ಬಗ್ಗೆ ನಾವು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಾವು ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ನಾವು ಖಂಡಿತವಾಗಿಯೂ ಅಭಿವೃದ್ಧಿ ಮಾಡುತ್ತೇವೆ. ಸಮಸ್ಯೆಗಳ ಮೇಲೆ ಹೋರಾಡಿ ಈ ಸ್ಥಾನವನ್ನು ಗೆಲ್ಲಬೇಕು. ನಿಮ್ಮ ಶತ್ರುವನ್ನು ದುರ್ಬಲ ಎಂದು ನೀವು ಎಂದಿಗೂ ಭಾವಿಸಬಾರದು. ಇದು ರಾಜಕೀಯ ಮುಖಾಮುಖಿಯಾಗಿದೆ ಮತ್ತು ಜನರು ತಮ್ಮ ಸಂಸದರನ್ನು ಆಯ್ಕೆ ಮಾಡುತ್ತಾರೆ” ಎಂದರು.
ಹಿಮಾಚಲ ಪ್ರದೇಶದ ಪಿಡಬ್ಲ್ಯೂಡಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಪ್ರತಿಭಾ ಸಿಂಗ್ ಅವರ ಪುತ್ರ. ಭಾನುವಾರ ದೆಹಲಿಯಲ್ಲಿ ಕಾಂಗ್ರೆಸ್ ಸೋನಿಯಾ ಗಾಂಧಿ ಅವರನ್ನು ಭೇಟಿಯಾದುದು ಊಹಾಪೋಹಗಳಿಗೆ ಕಾರಣವಾಗಿದೆ.
ಹಿಮಾಚಲ ಪ್ರದೇಶದ ಅತ್ಯಂತ ಪ್ರಭಾವಿ ಮನೆತನದ ರಾಜಕಾರಣಿ, 6 ಅವಧಿಗೆ ಮತ್ತು 21 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ದಿವಂಗತ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ತನ್ನದೇ ಆದ ಹಿಡಿತ ಹೊಂದಿದ್ದಾರೆ.