ಚುನಾವಣೆ ದಿನ ಮತದಾನ ಮಾಡದೇ ಸಿಕ್ಕಿರುವ ಸಾಲು ಸಾಲು ರಜೆಗಳನ್ನು ಕಳೆಯಲು ಪ್ರವಾಸ ಬಂದಿರುವವರಿಗೆ ವಸತಿ ಸೌಲಭ್ಯ ನೀಡದಂತೆ ಕ್ರಮವಹಿಸಲು ರಾಜ್ಯದ ಮೈಸೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲಾ ಚುನಾವಣಾಧಿಕಾರಿಗಳು ಮನವಿ ಮಾಡುವ ಜತೆಗೆ ಒತ್ತಾಯಿಸುತ್ತಿದ್ದಾರೆ.
Advertisement
ಸರ್ಕಾರಿ ರಜಾ ದಿನಗಳು ಹಾಗೂ ವಾರಾಂತ್ಯದ ನಡುವೆಯೇ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 17ರಂದು ಮಹಾವೀರ ಜಯಂತಿ, ಏಪ್ರಿಲ್ 18ರಂದು ಗುಡ್‌ಫ್ರೈಡೇ, ಏಪ್ರಿಲ್ 20 ಶನಿವಾರದ ರಜೆ ಇರಲಿದ್ದು, 21ರಂದು ಭಾನುವಾರ ಇದೆ. ಈ ರಜೆಗಳ ನಡುವೆ, ಏಪ್ರಿಲ್ 18ರಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಇನ್ನು 2ನೇ ಹಂತದ ಮತದಾನಕ್ಕೆ ಏಪ್ರಿಲ್ 18 ಹಾಗೂ ಏಪ್ರಿಲ್ 22ರಂದು 2 ದಿನಗಳ ರಜೆ ಪಡೆದರೆ ಸತತ ಸತತ 5 ದಿನ ರಜೆ ಪಡೆದಂತಾಗುತ್ತದೆ.
Related Articles
Advertisement
ವಸತಿ ಗೃಹಗಳಲ್ಲಿ ಜಾಗೃತಿ: ರಾಜ್ಯ ತೋಟಗಾರಿಕೆ ಇಲಾಖೆ ಹಾಗೂ ವನ್ಯ ಜೀವಿಧಾಮಗಳ ವ್ಯಾಪ್ತಿಗೆ ಬರುವ ಎಲ್ಲಾ ಮಾದರಿಯ ಪ್ರವಾಸಿಗರ ವಸತಿ ಗೃಹಗಳಲ್ಲಿ ಈಗಾಗಲೇ ಮತದಾನ ಜಾಗೃತಿ ಮಾಡಲಾಗುತ್ತಿದೆ. ಪ್ರವಾಸಿಗರಿಗೆ ಭಿತ್ತಿಪತ್ರ ಹಾಗೂ ಮತದಾನ ದಿನ ಪ್ರವಾಸ ಕೈಗೊಳ್ಳದೇ ಕಡ್ಡಾಯ ಮತದಾನ ಮಾಡಲು ಮನವಿ ಮಾಡುತ್ತಿದ್ದೇವೆ. ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದರೆ ಅಂದು ವಸತಿ ಗೃಹಗಳನ್ನು ಬಂದ್ ಮಾಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಇವುಗಳ ಜತೆಗೆ ಕರಾವಳಿ ಭಾಗಗಳ ಕೆಲವು ಹೋಟೆಲ್ ಹಾಗೂ ಬೀಚ್ ರೆಸಾರ್ಟ್‌ಗಳಲ್ಲಿ, ಜಂಗಲ್ ಲಾಡ್ಜ್ಗಳಲ್ಲಿಯೂ ಮತದಾನದ ಜಾಗೃತಿಯನ್ನು ಮಾಡಲಾಗುತ್ತಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಪತ್ರಿಕೆ ಜತೆ ಮಾತನಾಡಿ, “ಸರಣಿ ರಜೆಯಿಂದ ಮತದಾನದ ಮೇಲೆ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮತದಾನ ದಿನವಾದ ಏ.18 ಹಾಗೂ 23ರಂದು ಪ್ರವಾಸಿ ತಾಣಗಳಲ್ಲಿ ಕೊಠಡಿ ಕೋರುವ ಪ್ರವಾಸಿಗರು ಹಾಗೂ ಇತರೆಯವರಿಗೆ ಕೊಠಡಿ ಕಾಯ್ದಿರಿಸುವ ಹಾಗೂ ನೀಡುವ ಮೊದಲು ಅವರ ಗುರುತಿನ ಚೀಟಿ ಪಡೆದು ಪರಿಶೀಲನೆ ಮಾಡಬೇಕು. ಒಂದು ವೇಳೆ ಅವರು ಮತದಾನ ನಡೆಯುತ್ತಿರುವ ಕ್ಷೇತ್ರದವರಾಗಿದ್ದರೆ ಕೊಠಡಿ ನಿಡದೇ ಅಥವಾ ಕಾಯ್ದಿರಿಸದೇ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಲು ಸೂಚಿಸಲು ನಿರ್ದೇಶಿಸಿದ್ದೇವೆ. ಜತೆಗೆ ಕೆಲ ಸಂಘಟನೆಗಳು ಮತದಾನ ಬಿಟ್ಟು ಬಂದ ಪ್ರವಾಸಿಗರ ವಿರೋಧಿಸಿ ಪ್ರತಿಭಟನೆ ಮಾಡಲು ಅವಕಾಶ ಕೋರಿ ಮನವಿ ಮಾಡಿದ್ದರು. ಅದನ್ನು ತಪ್ಪಿಸಲು ಈ ರೀತಿ ಕ್ರಮಕೈಗೊಂಡಿದ್ದೇವೆ’ ಎಂದು ಅವರು ತಿಳಿಸಿದರು.
– ಜಯಪ್ರಕಾಶ್ ಬಿರಾದಾರ್