Advertisement

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

12:07 PM Mar 19, 2024 | Team Udayavani |

ಬೆಂಗಳೂರು: ನಗದು ಠೇವಣಿ ಅಥವಾ ಹಿಂಪಡೆಯುವಿಕೆ ಮೊತ್ತ 10 ಲಕ್ಷ ರೂ.ಗಿಂತ ಅಧಿಕವಿದ್ದರೆ ಅಂತಹ ಮಾಹಿತಿಯನ್ನು ಆದಾಯ ತೆರಿಗೆ ಕಾನೂನುಗಳ ಅಡಿಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ಆದಾಯ ತೆರಿಗೆ ಇಲಾಖೆಯ ನೋಡಲ್‌ ಅಧಿಕಾರಿಗೆ ರವಾನಿಸಲಾಗುವುದು ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಹೇಳಿದರು.

Advertisement

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬ್ಯಾಂಕ್‌ ನೋಡಲ್‌ ಅಧಿಕಾರಿಗಳ ಸಭೆ ನಡೆಸಿದರು.

ಯಾವುದೇ ಪೂರ್ವನಿದರ್ಶನವಿಲ್ಲದೆ ಚುನಾವಣಾ ಪ್ರಕ್ರಿಯೆ ಸಮಯದಲ್ಲಿ ಹಲವು ವ್ಯಕ್ತಿಗಳ ಖಾತೆಗಳಿಗೆ ಒಂದು ಬ್ಯಾಂಕ್‌ ಖಾತೆಯಿಂದ ಆರ್‌.ಟಿ.ಜಿ.ಎಸ್‌/ನೆಫ್ಟ್ ಮೂಲಕ ಹೆಚ್ಚು ಹಣ ವರ್ಗಾವಣೆ ಮಾಡುವುದು, ಯಾವುದೇ ನಗದು ಠೇವಣಿ ಅಥವಾ 1 ಲಕ್ಷ ರೂ.ಗಿಂತ ಹೆಚ್ಚಿನ ನಗದು ಹಿಂಪಡೆಯುವಿಕೆ, ಮತದಾರರಿಗೆ ಹಣ ನೀಡಲು ಬಳಸಬಹುದಾದ ಯಾವುದೇ ಅನುಮಾನಾಸ್ಪದ ನಗದು ವಹಿವಾಟುಗಳ ಬಗ್ಗೆ ಚುನಾವಣಾ ವಿಭಾಗಕ್ಕೆ ಶೀಘ್ರ ಮಾಹಿತಿ ನೀಡುವಂತೆ ಬ್ಯಾಂಕ್‌ ನೋಡಲ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹಲವು ಖಾತೆಗಳಿಗೆ ಹಣ ವರ್ಗಾವಣೆ: ಒಂದೇ ಖಾತೆಯಿಂದ ಹಲವು ಖಾತೆಗಳಿಗೆ ಹಣ ವರ್ಗಾವಣೆಯಾದರೆ ಅದರ ಮಾಹಿತಿಯನ್ನು ನಮಗೆ ಕೊಡಬೇಕು. ಮಾಹಿತಿ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ. ಜತೆಗೆ ಚುನಾವಣಾ ಆಯೋಗ ಕೂಡ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅನುಮಾನಾಸ್ಪದ ವಹಿವಾ ಟುಗಳು ನಡೆಯುತ್ತಿರುವುದು ಕಂಡುಬಂದಲ್ಲಿ ಕೂಡಲೆ ಚುನಾವಣಾ ವಿಭಾಗದ ಗಮನಕ್ಕೆ ತರಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ಖಾಸಗಿ ಆಸ್ತಿಗಳಲ್ಲಿ 72 ಗಂಟೆಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಗೂ ಭಾವಚಿತ್ರಗಳನ್ನು ಕಡ್ಡಾಯವಾಗಿ ತೆಗೆಯಬೇಕು. ಇಲ್ಲವಾದಲ್ಲಿ ಚುನಾವಣಾ ಆಯೋಗದಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಈ ವೇಳೆ ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ರಾಮ ಚಂದ್ರ ನಾಯ್ಕ…, ಮುಖ್ಯ ಲೆಕ್ಕಾಧಿಕಾರಿ ಭೀನಾ, ವಿವಿಧ ಬ್ಯಾಂಕ್‌ ಗಳ ನೋಡಲ್‌ ಅಧಿಕಾರಿಗಳು, ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ದಾಖಲೆ ಇಲ್ಲದ ಹಣ ಜಪ್ತಿ  ಮಾಡಲಾಗುವುದು: ಸೆಲ್ವಮಣಿ : 

ಯಾವುದೇ ಬ್ಯಾಂಕ್‌ಗಳಿಂದ ನಗದು ಅಥವಾ ಎಟಿಎಂಗಳಿಂದ ತೆಗೆಯುವ ನಗದನ್ನು ಭದ್ರತಾ ಸಿಬ್ಬಂದಿಯೊಂದಿಗೆ ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಚುನಾವಣಾ ಆಯೋಗದ ನಿಯಮಾನುಸಾರ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ರವಾನೆ ಮಾಡಬೇಕು. ಒಂದು ವೇಳೆ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳದೆ ನಗದು ರವಾನೆ ಮಾಡಿದರೆ. ಅಂತಹ ಹಣವನ್ನು ಸೀಜ್‌ ಮಾಡಿಕೊಂಡು ಕಾನೂನಿನ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ವಿಭಾಗದ ವಿಶೇಷ ಆಯುಕ್ತ‌ ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next