Advertisement

ಮಧ್ಯಪ್ರದೇಶ ಜತೆಗೇ ಲೋಕಸಭಾ ಚುನಾವಣೆ

12:20 PM Feb 28, 2018 | Team Udayavani |

ಭೋಪಾಲ್‌ (ಮಧ್ಯಪ್ರದೇಶ):ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕೇಂದ್ರ ಸರಕಾರದ ಪ್ರಯತ್ನಕ್ಕೆ ಇದೇ ವರ್ಷ ಚಾಲನೆ ಸಿಗುವ ಸಾಧ್ಯತೆ ದಟ್ಟವಾಗಿದ್ದು, ಸದ್ಯದಲ್ಲೇ ನಡೆಯುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಈ ಬಗ್ಗೆ ಅಭಿಪ್ರಾಯ ಕ್ರೋಡೀಕರಿಸಲಾಗುವುದು.

Advertisement

ಇದೇ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿರುವ ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನ ಸಭಾ ಚುನಾವಣೆ ಜತೆಗೆ ಲೋಕಸಭಾ ಚುನಾವಣೆ ನಡೆಸಲು ಕೇಂದ್ರ ಸರಕಾರ ಆಲೋಚಿಸುತ್ತಿದೆ ಎನ್ನಲಾಗಿದೆ. “”ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಧಾನಿ ಮೋದಿ ಅವರ ಪ್ರಯತ್ನಕ್ಕೆ ತಮ್ಮ ಬೆಂಬಲ ಇದೆ. ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಈ ಬಗ್ಗೆ ನನ್ನ ಅಭಿಪ್ರಾಯ ಮಂಡಿಸುತ್ತೇನೆ ” ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದರು.

ಕರ್ನಾಟಕದಿಂದ ಆಗಮಿಸಿದ ಪತ್ರಕರ್ತರ ಜತೆ ಮಾತುಕತೆ ನಡೆಸಿದ ಅವರು,”” ಅಭಿವೃದ್ಧಿ ದೃಷ್ಟಿಯಿಂದ ಒಂದೇ ಕಾಲಕ್ಕೆ ಚುನಾವಣೆ ನಡೆಸುವುದು ಸೂಕ್ತ. ಇಲ್ಲದೆ ಇದ್ದರೆ ಚುನಾವಣೆಗೆ ಸಿದ್ಧತೆ ಮಾಡಿ ಕೊಳ್ಳುವುದೇ ಸರಕಾರಗಳ ಕೆಲಸ ಆಗಿಬಿಡುತ್ತದೆ. ವಿಕಾಸಕ್ಕೆ ಸಮಯವೇ ಇಲ್ಲದಾಗುತ್ತದೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆದು ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಮಧ್ಯಪ್ರದೇಶ ಸರಕಾರ ಸೆಟಲ್‌ ಆಗುವ ಮೊದಲೇ ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಸಿದ್ಧವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಏಕ ಕಾಲಕ್ಕೆ ಚುನಾವಣೆ ಸೂಕ್ತ ” ಎಂದು ಸಮರ್ಥಿಸಿಕೊಂಡರು.

ಮೂರು ಅವಧಿಯ ಬಿಜೆಪಿ ಸರಕಾರಕ್ಕೆ ಯಾವುದೇ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಹೇಳಿ ಕೊಂಡ ಚೌಹಾಣ್‌, ಜನರ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ. ಒಂದು ಕಾಲದಲ್ಲಿ “ಬಿಮಾರು’ ರಾಜ್ಯದ ಪಟ್ಟಿಯಲ್ಲಿ ಸೇರಿದ್ದ ಮಧ್ಯ ಪ್ರದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗಿದೆ. ಇದೆಲ್ಲವೂ ಜನರಿಗೆ ಮನವರಿಕೆಯಾಗಿದೆ ಎಂದರು.

ಮಧ್ಯ ಪ್ರದೇಶ ಸರಕಾರ ಹಲವು ರಂಗದಲ್ಲಿ ಇಂದು ನಂಬರ್‌ ಒನ್‌ ಪಟ್ಟಗಳಿಸಿ ಕೊಂಡಿದೆ. ಕೃಷಿ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಬೆಲೆ ಕುಸಿದಾಗ ನಷ್ಟವನ್ನು ಹೊಂದಿಸಿಕೊಡಲು “ಭಾವಾಂತರ’ ಎಂಬ ಬೆಂಬಲ ಬೆಲೆ ಯೋಜನೆ ಜಾರಿಗೆ ತರಲಾಗಿದೆ. ಕೃಷಿ ಬೆಳವಣಿಗೆ ದರ ಏರು ಮುಖದಲ್ಲಿದ್ದು, ಕೃಷಿ ಕ್ಷೇತ್ರದ ಸಾಧನೆಗೆ ಸತತವಾಗಿ ಕೇಂದ್ರ ಸರಕಾರದಿಂದ ಪ್ರಶಸ್ತಿಗಳು ಬಂದಿವೆ. ನದಿ ಜೋಡಣೆ ಯೋಜನೆಯಲ್ಲಿ ದೇಶದಲ್ಲಿಯೇ ಮಧ್ಯ ಪ್ರದೇಶ ಮುಂದಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಂಬರ್‌ ಒನ್‌ ಆಗಿದೆ ಎಂದು ಹೇಳಿದರು.

Advertisement

ಪ್ರಧಾನಿ ಮೋದಿ ಅವರ ಕನಸಿನ ಕಾರ್ಯಕ್ರಮ ಸ್ವತ್ಛತಾ ಅಭಿಯಾನಕ್ಕೆ ರಾಜ್ಯದ ಕೊಡುಗೆ ಗಣನೀಯವಾಗಿದ್ದು, ದೇಶದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಒಟ್ಟು ನೂರು ಸ್ವತ್ಛ ನಗರಗಳ ಪಟ್ಟಿಯಲ್ಲಿ ಮಧ್ಯ ಪ್ರದೇಶದ 22 ನಗರಗಳು ಗುರುತಿಸಿಕೊಂಡಿರುವುದು ಹೆಗ್ಗಳಿಕೆ ಎಂದರು. ಈಚೆಗೆ ರಾಜ್ಯದಲ್ಲಿ ನದಿ ಸಂರಕ್ಷಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. 144 ದಿನಗಳ ಕಾಲ ನಡೆದ ಈ ಅಭಿಯಾನದಲ್ಲಿ 35 ಲಕ್ಷ ಜನ ಭಾಗವಹಿಸಿದ್ದರು ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next