Advertisement

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

12:05 AM Apr 27, 2024 | Team Udayavani |

ಬೆಂಗಳೂರು: ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ಈಗ ಸಾಧ್ಯಾಸಾಧ್ಯತೆ ಲೆಕ್ಕಾಚಾರ ಆರಂಭಗೊಂಡಿದೆ.

Advertisement

ಚುನಾವಣ ಆಯೋಗ, ಬೂತ್‌ ಏಜೆಂಟರು, ಪೇಜ್‌ ಪ್ರಮುಖರು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಪಟ್ಟಂತೆ ಕ್ಷಣಕ್ಷಣಕ್ಕೆ ನೀಡಿದ ಮಾಹಿತಿ ಆಧಾರದಲ್ಲಿರಾಜಕೀಯ ಪಕ್ಷಗಳು ಫ‌ಲಿತಾಂಶಗಳ ವಿಶ್ಲೇಷಣೆ ನಡೆಸುತ್ತಿವೆ. ಬಹುತೇಕ ಶನಿವಾರದ ಹೊತ್ತಿಗೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಹುರಿಯಾಳುಗಳ ಭವಿಷ್ಯ ಏನೆಂಬುದನ್ನು ನಿರ್ಧರಿಸಲಿದ್ದು, ಮತ ಎಣಿಕೆಗೆ ಮುನ್ನವೇ ಒಂದು ಹಂತದ ಲೆಕ್ಕಾಚಾರಕ್ಕೆ ಬರಲಿವೆ.

ಕೆಲವು ಹೈಪ್ರೊಫೈಲ್‌ ಕ್ಷೇತ್ರಗಳು ಸಹಿತ ಒಟ್ಟಾರೆ 14 ಕ್ಷೇತ್ರಗಳ ಫ‌ಲಿತಾಂಶದ ವಿಚಾರದಲ್ಲಿ ಬಿಜೆಪಿ ಸಕಾರಾತ್ಮಕ ಸ್ಥಿತಿಗೆ ತಲುಪಿದೆ. ಮತ್ತೂಂದೆಡೆ ಕಾಂಗ್ರೆಸ್‌ ಕೂಡ ಮೊದಲ ಹಂತದಲ್ಲಿಯೇ ಕಳೆದ ಬಾರಿಗಿಂತ ಉತ್ತಮ ಸಾಧನೆ ಪ್ರದರ್ಶಿಸುವ ಆತ್ಮವಿಶ್ವಾಸವನ್ನು ಹೊಂದಿದೆ.

ಬೆಟ್ಟಿಂಗ್‌
ಇದೆಲ್ಲದರ ಮಧ್ಯೆ ತುರುಸಿನ ಪೈಪೋಟಿ ಇರುವ ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಕ್ಷೇತ್ರದಲ್ಲಿ ಬೆಟ್ಟಿಂಗ್‌ ಮಹಾಪೂರವೇ ಹರಿದಿವೆ. ಸ್ಮೋಕಿಂಗ್‌ ಝೋನ್‌, ಟೀ ಸ್ಟಾಲ್‌, ವಾಕಿಂಗ್‌ ಏರಿಯಾಗಳಲ್ಲೂ ಚುನಾವಣೆ ವಿಶ್ಲೇಷಣೆ ಪ್ರಾರಂಭವಾಗಿದ್ದು, ಶುಕ್ರವಾರ ಸಾಯಂಕಾಲದ ಹೊತ್ತಿಗೆ ಪ್ರತಿ ಕ್ಷೇತ್ರವೂ ವೀಕ್ಷಕ ವಿವರಣೆಕಾರರ ವ್ಯಾಖ್ಯಾನಕ್ಕೆ ಕಿವಿಯಾಗಿದೆ.

ಉತ್ತರ ಕರ್ನಾಟಕಕ್ಕೆ ದಂಡು
ಮೊದಲ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಪ್ರಮುಖ ನಾಯಕರು ಹಾಗೂ ಸ್ಟಾರ್‌ ಪ್ರಚಾರಕರು ಈಗ ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ. ಈ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ ಊಹೆಗೆ ನಿಲುಕದ ಫ‌ಲಿತಾಂಶ ಬರಲಿದೆ ಎಂಬುದು ಕಾಂಗ್ರೆಸ್‌ನ ವಾದ. ಆದರೆ ಮೋದಿ ಅಲೆಯಲ್ಲಿ ಇದ್ಯಾವುದೂ ನಡೆಯುವುದಿಲ್ಲ ಎಂಬುದು ಬಿಜೆಪಿ ನಿಲುವು. ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ವಿಜಯಪುರ, ಕಲಬುರಗಿಗೆ ತೆರಳಿದ್ದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹಿತ ದಕ್ಷಿಣ ಕರ್ನಾಟಕ ಭಾಗದ ಸಚಿವರು ಉತ್ತರದತ್ತ ಮುಖ ಮಾಡಲಿದ್ದಾರೆ. ಸಚಿವ ರಿಗೆ ಈ ಭಾಗದಲ್ಲೂ ಹೆಚ್ಚುವರಿ ಜವಾ ಬ್ದಾರಿ ನೀಡಲಾಗಿದೆ. ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಜೆಡಿಎಸ್‌ ನೆಲೆ ಗಟ್ಟಿ ಇರುವ ಕಡೆಗಳಲ್ಲಿ ಪ್ರಚಾರ ನಡೆಸಲಿದ್ದು, ದೇವೇಗೌಡರು ಎರಡು ದಿನ ಪ್ರವಾಸ ನಡೆಸುವ ಸಾಧ್ಯತೆ ಇದೆ. ಪ್ರಧಾನಿ ಮೋದಿ, ಅಮಿತ್‌ ಶಾ, ಯೋಗಿ ಆದಿತ್ಯನಾಥ್‌ ಕೂಡ ಆಗಮಿಸಲಿದ್ದಾರೆ. ಪುತ್ರನ ಗೆಲುವಿಗೆ ಲೆಕ್ಕಾಚಾರ ಹಾಕುವುದರ ಜತೆಗೆ ಲಿಂಗಾಯತ ಪಾರುಪತ್ಯದ ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ಯಡಿಯೂರಪ್ಪ ಅವರಿಗೆ ಇದೆ.

Advertisement

ವಿದೇಶ ಪ್ರವಾಸ ಇಲ್ಲ
ಕಳೆದ ಬಾರಿ ಕೆಲವು ನಾಯಕರು ರಾಜ್ಯದಲ್ಲಿ ಚುನಾವಣೆ ಮುಕ್ತಾಯಗೊಳ್ಳು ತ್ತಿದ್ದಂತೆ ವಿದೇಶ ಪ್ರವಾಸ ನಡೆಸಿದ್ದರು. ಆದರೆ ಈ ಬಾರಿ ಕಾಂಗ್ರೆಸ್‌-ಬಿಜೆಪಿ ಪಕ್ಷದ ಮುಂಚೂಣಿ ನಾಯಕರಿಗೆ ಬೇರೆ ರಾಜ್ಯಗಳಿಗೆ ತೆರಳುವಂತೆ ಹೈಕಮಾಂಡ್‌ ಸೂಚನೆ ನೀಡಿದೆ. ಹೀಗಾಗಿ ಚುನಾವಣೋತ್ತರ ಸುಸ್ತು ನಿವಾರಣೆಗೆ ವಿದೇಶ ಪ್ರವಾಸ ಮಾಡುವ ಭಾಗ್ಯದಿಂದ ವಂಚಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next