Advertisement

ಮಾರ್ಚ್‌ ಮೊದಲ ವಾರ ಕೈ ಅಭ್ಯರ್ಥಿಗಳ ಆಯ್ಕೆ?

12:30 AM Feb 19, 2019 | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್‌ ಮಾರ್ಚ್‌ ಮೊದಲ ವಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಸರಣಿ ಸಭೆಗಳಿಗೆ ಚಾಲನೆ ನೀಡಿದೆ.

Advertisement

ಜತೆಗೆ, ಲೋಕಸಭೆ ಚುನಾವಣೆ ಜೆಡಿಎಸ್‌ ಜತೆಗೂಡಿ ಎದುರಿಸಲು ತೀರ್ಮಾನ ಮಾಡಿರುವುದರಿಂದ ಮೈತ್ರಿ ವಿಚಾರದಲ್ಲಿ ಸೀಟು ಹೊಂದಾಣಿಕೆ ಕುರಿತಂತೆ ಜೆಡಿಎಸ್‌ ಪಕ್ಷದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡದಂತೆ ಜಿಲ್ಲಾ ಮುಖಂಡರಿಗೆ ತಾಕೀತು ಮಾಡಲಾಗಿದೆ.

ಸೋಮವಾರ ಚುನಾವಣಾ ಪ್ರಚಾರ, ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ, ಜೆಡಿಎಸ್‌ ಜೊತೆ ಮೈತ್ರಿ,  ಪಕ್ಷ ಮತ್ತು ಸರ್ಕಾರದಲ್ಲಿ ಸಮನ್ವಯತೆ ಕುರಿತು ಮೂರು ಪ್ರತ್ಯೇಕ ಸಭೆಗಳನ್ನು ನಡೆಸಿದ ರಾಜ್ಯ ನಾಯಕರು, ತತಕ್ಷಣದಿಂದಲೇ ಚುನಾವಣೆಗೆ ಸಜ್ಜಾಗುವಂತೆ ಸೂಚನೆ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದ ಚುನಾವಣಾ ಸಮಿತಿ ಸಭೆಯಲ್ಲಿ ಪ್ರಮುಖವಾಗಿ ಜೆಡಿಎಸ್‌ ಜೊತೆಗೆ ಕ್ಷೇತ್ರಗಳ ಹಂಚಿಕೆ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು, ಈ ವಾರಾಂತ್ಯದಲ್ಲಿ ಜೆಡಿಎಸ್‌ ಜೊತೆಗೆ ಸೀಟು ಹಂಚಿಕೆ ಚರ್ಚೆ ಪೂರ್ಣಗೊಳಿಸಿ ಮಾರ್ಚ್‌ ಮೊದಲ ವಾರದ ಕೊನೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು  ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ.

ಜೆಡಿಎಸ್‌ 10 ರಿಂದ 12 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದು, ಅವುಗಳಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದರ ಕ್ಷೇತ್ರಗಳೂ ಸೇರಿದ್ದು ಯಾವುದೇ ಕಾರಣಕ್ಕೂ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟು ಕೊಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವಿಷಯದಲ್ಲಿ ರಾಜ್ಯ ನಾಯಕರು ತೀರ್ಮಾನ ತೆಗೆದುಕೊಳ್ಳದೆ ಹೈಕಮಾಂಡ್‌ ವಿವೇಚನೆಗೆ ಬಿಡಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ಜೆಡಿಎಸ್‌ ಜೊತೆಗೆ ಆದಷ್ಟು ಬೇಗ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯಗೊಳಿಸಿದರೆ, ಪಕ್ಷದ ಅಭ್ಯರ್ಥಿಗಳ ಘೋಷಣೆ ಹಾಗೂ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವನ್ನು ಬಹುತೇಕ ನಾಯಕರು ವ್ಯಕ್ತಪಡಿಸಿದ್ದಾರೆ. ಹಾಸನ ಹಾಗೂ ಮಂಡ್ಯ ಕ್ಷೇತ್ರಗಳ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡದಂತೆಯೂ ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕೆಪಿಸಿಸಿಯಿಂದ ಸಮೀಕ್ಷೆ
ಈಗಾಗಲೇ ಟಿಕೆಟ್‌ ಆಕಾಂಕ್ಷಿಗಳ ಮೊದಲ ಪಟ್ಟಿ ಹೈಕಮಾಂಡ್‌ಗೆ ಸೇರಿರುವುದರಿಂದ ಅದರ ಆಧಾರದಲ್ಲಿ ಹೈಕಮಾಂಡ್‌ ರಾಜ್ಯದಲ್ಲಿ ಸಮೀಕ್ಷೆ ನಡೆಸುತ್ತಿದೆ. ಅದರ ಹೊರತಾಗಿ ಕೆಪಿಸಿಸಿ ಕೂಡ ಪ್ರತ್ಯೇಕ ಸಮೀಕ್ಷೆ ನಡೆಸಲು ಮುಂದಾಗಿದ್ದು ದೆಹಲಿ ಮೂಲದ ಸಂಸ್ಥೆ ಮೂಲಕ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಲಾಗಿದೆ.

ರಾಮಲಿಂಗಾರೆಡ್ಡಿ ನೇತೃತ್ವದ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಮೈತ್ರಿ ಸರ್ಕಾರದ ಗೊಂದಲಗಳ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡದಂತೆ ಸೂಚಿಸಲಾಗಿದೆ. ಸೀಟು ಹಂಚಿಕೆ ವಿಷಯದಲ್ಲಿಯೂ ಯಾವುದೇ ನಾಯಕರು ಬಹಿರಂಗ ಹೇಳಿಕೆ ನೀಡದಂತೆ ನಿರ್ದೇಶನ ನೀಡಲಾಗಿದೆ.

ಈಮಧ್ಯೆ, ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಅಧ್ಯಕ್ಷತೆಯ ಪ್ರಚಾರ ಸಮಿತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲು ಜಿಲ್ಲಾ ಮಟ್ಟದ ಸಮಾವೇಶಗಳನ್ನು ಆಯೋಜಿಸುವುದು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷದ ಪರವಾಗಿ ಉತ್ತಮ ಭಾಷಣಕಾರರನ್ನು ಗುರುತಿಸುವುದು, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಭೆ ನಡೆಸುವುದು, ಟಿವಿ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ಪಕ್ಷದ ಪರವಾಗಿ ನಿರಂತರ ಜಾಹೀರಾತುಗಳನ್ನು ನೀಡುವ ಮೂಲಕ ಬಿಜೆಪಿಯ ಪ್ರಚಾರ ತಂತ್ರಗಳಿಗೆ ತಿರುಗೇಟು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಟಿಕೆಟ್‌ಗೆ ಅರ್ಜಿ ಆಹ್ವಾನ ?
ಟಿಕೆಟ್‌ ಆಕಾಂಕ್ಷಿಗಳ ಕುರಿತಂತೆ ಈಗಾಗಲೇ ಎಐಸಿಸಿ ಕಾರ್ಯದರ್ಶಿಗಳು ಅಭಿಪ್ರಾಯ ಸಂಗ್ರಹಿಸಿ ಪ್ರತಿ ಕ್ಷೇತ್ರದಿಂದ ಗರಿಷ್ಠ ನಾಲ್ಕು ಜನರ ಹೆಸರು ಹೈ ಕಮಾಂಡ್‌ಗೆ ಕಳುಹಿಸಿಕೊಟ್ಟಿರುವುದರಿಂದ ಅವರ ಬದಲು ಕೆಪಿಸಿಸಿ ವತಿಯಿಂದ ಪ್ರತ್ಯೇಕವಾಗಿ ಮತ್ತೂಂದು ಮಾಹಿತಿ ಸಂಗ್ರಹಿಸಬೇಕೋ ಬೇಡವೋ ಎನ್ನುವ ಕುರಿತಂತೆ ರಾಜ್ಯ ನಾಯಕರಲ್ಲಿ ಗೊಂದಲ ಉಂಟಾಗಿದ್ದು, ಆಕಾಂಕ್ಷಿಗಳಿಂದ ಅರ್ಜಿ ಕರೆಯುವ ಕುರಿತಂತೆಯೂ ಚರ್ಚೆಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಈ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

*ಕಾಂಗ್ರೆಸ್‌ನ ಸಾಧನೆ ಹಾಗೂ ಬಿಜೆಪಿಯ ವೈಫ‌ಲ್ಯಗಳ ಬಗ್ಗೆ ಜನರನ್ನು ನೇರವಾಗಿ ಸಂಪರ್ಕಿಸಲು ಅಗತ್ಯವಿರುವ ಪ್ರಚಾರ ತಂತ್ರಗಳ ಬಗ್ಗೆ ಚರ್ಚಿಸಲಾಗಿದೆ. ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಪಕ್ಷದ ಸಂಘಟನೆ ಹಾಗೂ ಪ್ರಚಾರದ ಕುರಿತು ಚರ್ಚಿಸಿದ್ದೇವೆ. ಪ್ರಭಾವಿ ಹಾಗೂ ಪರಿಣಾಮಕಾರಿಯಾಗಿ ಭಾಷಣ ಮಾಡುವ ವಾಗ್ಮಿಗಳು ಹಾಗೂ ಚಿಂತಕರ ಹುಡುಕಾಟ ನಡೆಸಲಿದ್ದೇವೆ. ಸಮಗ್ರತೆ ಮತ್ತು ರಾಷ್ಟ್ರೀಯತೆ ಬಗ್ಗೆ ಅರಿವು ಇರುವವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ.
– ಸಿ.ಎಂ. ಇಬ್ರಾಹಿಂ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

*ಆದಷ್ಟು ಬೇಗ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಲು ನಿರ್ಧರಿಸಿದ್ದೇವೆ. ಆದಷ್ಟು ಬೇಗ ದೇವೇಗೌಡರು ಹಾಗೂ ಕುಮಾರಸ್ವಾಮಿ ಜೊತೆ ಚರ್ಚಿಸಿ ಸೀಟು ಹಂಚಿಕೆ ತೀರ್ಮಾನ ಮಾಡುತ್ತೇವೆ. ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನೂ ಆದಷ್ಟು ಬೇಗ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಬಿಜೆಪಿಯವರ ಅಪಪ್ರಚಾರದ ವಿರುದ್ಧ ಸತ್ಯಾಂಶದ ಮೂಲಕ ತಿರುಗೇಟು ನೀಡುವಂತೆ ನಾಯಕರಿಗೆ ಸೂಚಿಸಲಾಗಿದೆ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ.

ಸೀಟು ಹಂಚಿಕೆ ನೀವೇ ಬಗೆ ಹರಿಸಿಕೊಳ್ಳಿ
ರಾಜ್ಯದಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡು ಕ್ಷೇತ್ರಗಳನ್ನು ನೀವೇ ಚರ್ಚಿಸಿ ಹಂಚಿಕೆ ಮಾಡಿಕೊಳ್ಳುವಂತೆ ರಾಜ್ಯ ನಾಯಕರಿಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಯಾವುದಾದರೂ ಕ್ಷೇತ್ರದ ಬಗ್ಗೆ ಗೊಂದಲ ಉಂಟಾದರೆ ಮಾತ್ರ ತಾವು ಮಧ್ಯ ಪ್ರವೇಶಿಸುವುದಾಗಿ ಹೇಳಿದ್ದಾರೆ.ಆದರೆ, ಜೆಡಿಎಸ್‌ ನಾಯಕರು ರಾಜ್ಯದ ಕಾಂಗ್ರೆಸ್‌ ನಾಯಕರ ಜೊತೆ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಕಾಂಗ್ರೆಸ್‌ ಎಲೆಕ್ಷನ್‌ ಮೀಟಿಂಗ್‌ ಅಂತ ಜೆ ಫೋಲ್ಡರ್‌ನಲ್ಲಿ ಫೋಟೊ ಸೇವ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next