ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಚರ್ಚೆಯಾಗುತ್ತಿರುವ ‘ಅವಧಿಗೆ ಮುನ್ನ ಲೋಕಸಭಾ ಚುನಾವಣೆ’ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟನೆ ನೀಡಿದ್ದಾರೆ. “ಲೋಕಸಭೆ ಚುನಾವಣೆಯನ್ನು ಅವಧಿಗೆ ಮುನ್ನವೇ ನಡೆಸಲು ಕೇಂದ್ರ ಯೋಚಿಸುತ್ತಿಲ್ಲ” ಎಂದು ಹೇಳಿದ್ದಾರೆ.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅವಧಿಯ ಕೊನೆಯ ದಿನದವರೆಗೆ ಜನರ ಸೇವೆ ಮಾಡಲು ಬಯಸುತ್ತಾರೆ ಎಂದು ಇಂಡಿಯಾ ಟುಡೇ ಜತೆಗಿನ ಸಂದರ್ಶನದಲ್ಲಿ ಅನುರಾಗ್ ಠಾಕೂರ್ ಹೇಳಿದ್ದಾರೆ.
ಮುಂಬರುವ ಸುತ್ತಿನ ವಿಧಾನಸಭಾ ಚುನಾವಣೆಗಳನ್ನು ಸಾರ್ವತ್ರಿಕ ಚುನಾವಣೆಯೊಂದಿಗೆ ನಡೆಸಲು ಸರ್ಕಾರವು ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಸಚಿವರು ಹೇಳಿದರು. ಚುನಾವಣೆ ಮೊದಲು ಅಥವಾ ವಿಳಂಬವಾಗಲಿದೆ ಎಂಬ ಎಲ್ಲಾ ಮಾತುಗಳನ್ನು “ಮಾಧ್ಯಮ ಊಹೆ” ಎಂದು ಅವರು ಹೇಳಿದರು.
ಇದನ್ನೂ ಓದಿ:Baby: ಪ್ರೇಕ್ಷಕರ ಮನಗೆದ್ದ ʼಬೇಬಿʼ ಸಿನಿಮಾದ ಸೀಕ್ವೆಲ್ ಗೆ ತೆರೆಮರೆಯಲ್ಲಿ ಸಿದ್ಧತೆ?
“ಸರ್ಕಾರವು ಒಂದು ರಾಷ್ಟ್ರ- ಒಂದು ಚುನಾವಣೆಯ ಕುರಿತು ಸಮಿತಿಯನ್ನು ಸ್ಥಾಪಿಸಿದೆ. ಒಂದು ರಾಷ್ಟ್ರ- ಒಂದು ಚುನಾವಣೆಗೆ ಮಾನದಂಡಗಳನ್ನು ಅಂತಿಮಗೊಳಿಸುವ ಮೊದಲು ಸಮಿತಿಯು ಸಂಬಂಧಿತರೊಂದಿಗೆ ವ್ಯಾಪಕವಾದ ಚರ್ಚೆಗಳನ್ನು ಮಾಡುತ್ತದೆ” ಎಂದು ಕೇಂದ್ರ ಸಚಿವ ಠಾಕೂರ್ ಹೇಳಿದರು.
ಸೆ.18ರಿಂದ ಐದು ದಿನಗಳ ಕಾಲ ನಡೆಯಲಿರುವ ಸಂಸತ್ ನ ವಿಶೇಷ ಅಧಿವೇಶನದಲ್ಲಿ ಸರ್ಕಾರ ದೊಡ್ಡ ಯೋಜನೆ ಹಾಕಿಕೊಂಡಿದೆ ಎಂದು ಠಾಕೂರ್ ಸುಳಿವು ನೀಡಿದರು. ಆದರೆ ಯಾವ ಉದ್ದೇಶಕ್ಕೆ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಅವರು ತುಟಿ ಬಿಚ್ಚಲಿಲ್ಲ.
ವಿಶೇಷ ಅಧಿವೇಶನದ ಅಜೆಂಡಾದ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವರು ಸರಿಯಾದ ಸಮಯದಲ್ಲಿ ಮಾಹಿತಿ ನೀಡಲಿದ್ದಾರೆ ಎಂದರು.