ರಾಯಚೂರು/ಬೀದರ್/ಬಾಗಲಕೋಟೆ:ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಬೆಳಗ್ಗೆಯಿಂದ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಮತ್ತೊಂದೆಡೆ ಮುಧೋಳ ತಾಲೂಕಿನ ಚಿಕ್ಕೂರ ತಾಂಡ, ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಚಿಟ್ಟಿಗಿನಹಾಳ್ ಗ್ರಾಮ, ದಾವಣಗೆರೆ ತಾಲೂಕಿನ ಬೋರಗೊಂಡನಹಳ್ಳಿ, ಬೀದರ್ ದಕ್ಷಿಣ ಕ್ಷೇತ್ರದ ಸುಲ್ತಾನಪುರ ಗ್ರಾಮ ಮತದಾರರು ಮತದಾನ ಬಹಿಷ್ಕರಿಸಿದ ಘಟನೆ ನಡೆದಿದೆ. ಕೆಲವೆಡೆ ಇವಿಎಂ ದೋಷದಿಂದಾಗಿ ಗ್ರಾಮಸ್ಥರು ತಡವಾಗಿ ಮತ ಚಲಾಯಿಸುವಂತಾಗಿದೆ.
ಬೀದರ್ ದಕ್ಷಿಣ ಕ್ಷೇತ್ರದ ಸುಲ್ತಾನಪುರ(ಜೆ) ಗ್ರಾಮದಲ್ಲಿ ಮತದಾನ ಬಹಿಷ್ಕಾರ:
ಬೀದರ್ ದಕ್ಷಿಣ ಕ್ಷೇತ್ರದ ಸುಲ್ತಾನಪುರ(ಜೆ) ಗ್ರಾಮದಲ್ಲಿ ಕಳೆದ ಅನೇಕ ವರ್ಷದಿಂದ ಬೀದರ್ ನಗರದ ಕಸ ಹಾಕುವುದರಿಂದ ಗಂಭೀರ ಸಮಸ್ಯೆ ಉಂಟಾಗುತ್ತಿದೆ. ಅನೇಕ ಬಾರಿಗೆ ಅಧಿಕಾಗಳಿಗೆ ದೂರು ನೀಡಿದರು ಕೂಡ ಯಾರು ಸ್ಪಂದಿಸಿಲ್ಲ. ರಾಜಕಾರಣಿಗಳು ಕೂಡ ಸ್ಪಂದಿನೆ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಒಂದು ಮತ ಕೇಂದ್ರ ಇದ್ದು. ಒಟ್ಟು 929 ಮತದಾರರಿದ್ದಾರೆ, ಈವರೆಗೂ ಯಾರೂ ಮತದಾನ ಮಾಡಿಲ್ಲ.
ದಾವಣಗೆರೆ ತಾಲ್ಲೂಕಿನ ಬೋರಗೊಂಡನಹಳ್ಳಿ:
ಮೂಲಭೂತ ಸೌಲಭ್ಯ ವಂಚಿತ ಹಿನ್ನೆಲೆಯಲ್ಲಿ ದಾವಣಗೆರೆ ತಾಲ್ಲೂಕಿನ ಬೋರಗೊಂಡನಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕಾರಿಸಿದ್ದಾರೆ. ಮತಗಟ್ಟೆ 2 ರಲ್ಲಿ ಮತದಾನ ಬಹಿಷ್ಕರಿಸಿದ್ದು, ಬೋರಗೊಂಡನಹಳ್ಳಿ ಗ್ರಾಮಕ್ಕೆ ಎಸಿ ಕುಮಾರ್ ಸ್ವಾಮಿ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಎಸಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ತದನಂತರ ಎಸಿ ಅವರ ಭರವಸೆ ಹಿನ್ನಲೆಯಲ್ಲಿ ಮತದಾನ ಬಹಿಷ್ಕಾರ ಹಿಂದಕ್ಕೆ ಪಡೆದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ರಾಯಚೂರು: ಕಪ್ಪು ಬಟ್ಟೆಕಟ್ಟಿಕೊಂಡು ಮತದಾನ:
ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಪ್ರತಿಭಟನಾರ್ಥವಾಗಿ ರಾಯಚೂರಿನ ಶಕ್ತಿನಗರದ ಯುವಕರು ಕಪ್ಪು ಬಟ್ಟೆ ಕಟ್ಟಿ ಕೊಂಡು ಮತದಾನ ಮಾಡಿದ ಘಟನೆ ನಡೆದಿದೆ. ಅಲ್ಲದೇ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.
ಬಳ್ಳಾರಿ ಕುರುಗೋಡು ತಾಲೂಕಿನ ಚಿಟ್ಟಿಗನಹಾಳ್ ಗ್ರಾಮದಲ್ಲಿ ಮತದಾನ ಬಹಿಷ್ಕಾರ
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕು ಚಿಟ್ಟಿಗಿನಹಾಳ್ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಚುನಾವಣೆಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ಕೂಡಲೇ ಅಧಿಕಾರಿಗಳ ತಂಡ ದೌಡಾಯಿಸಿ ಮತದಾನ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.
ರಾಯಚೂರು; ಇವಿಎಂ ದೋಷ, ತಡವಾಗಿ ಮತದಾನ:
ರಾಯಚೂರು ದೇವದುರ್ಗ ಪುರಸಭೆ ಮತಗಟ್ಟೆ 40ರಲ್ಲಿ ಯಂತ್ರದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು 40 ನಿಮಿಷ ತಡವಾಗಿ ಮತದಾನ ಆರಂಭವಾಗಿತ್ತು.
ಬಾಗಲಕೋಟೆ; ತಡವಾಗಿ ಆರಂಭವಾದ ಮತದಾನ
ಬಾಗಲಕೋಟೆ ನಗರದ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆಯ ವಾರ್ಡ್ ನಂ 03ರ ಮತಗಟ್ಟೆ ಸಂಖ್ಯೆ 140 ರಲ್ಲಿ ಮತಯಂತ್ರ ಕಂಡು ಬಂದಿತ್ತು. ಸಾಲಿನಲ್ಲಿ ನಿಂತಿದ್ದ ಮತದಾರರು ಬಳಿಕ ಮತಹಾಕದೆ ವಾಪಸ್ ಹೊರಟು ಹೋಗಿದ್ದಾರೆ. ಸುಮಾರು ಒಂದು ಗಂಟೆ ಬಳಿಕ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು.