Advertisement

Lok Sabha Poll 2024: ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಈಗ ಬಿಜೆಪಿ ಪ್ರಾಬಲ್ಯ

01:29 PM Mar 15, 2024 | Team Udayavani |

ಚಾಮರಾಜನಗರ: ಚಾಮರಾಜ ನಗರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರ ಚಾಮರಾಜನಗರ ಜಿಲ್ಲೆಯ ನಾಲ್ಕು ಹಾಗೂ ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಹಾಗೂ ಮೈಸೂರು ಜಿಲ್ಲೆಯ ತಿ.ನರಸೀಪುರ, ನಂಜನಗೂಡು, ಎಚ್‌.ಡಿ. ಕೋಟೆ, ವರುಣಾ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿವೆ.

Advertisement

ಪೂರ್ವದಲ್ಲಿ ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ ಹುಲಿ ರಕ್ಷಿತ ಅರಣ್ಯ, ಪಶ್ಚಿಮದಲ್ಲಿ ಬಂಡೀಪುರ ಹುಲಿ ರಕ್ಷಿತ ಅರಣ್ಯ ಪ್ರದೇಶವನ್ನು ಈ ಕ್ಷೇತ್ರ ಒಳಗೊಂಡಿದೆ. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಎಚ್‌.ಡಿ. ಕೋಟೆ,
ನಂಜನಗೂಡು ಕ್ಷೇತ್ರಗಳು ಅರಣ್ಯದಂಚಿನ ಗ್ರಾಮಗಳನ್ನು ಹೊಂದಿವೆ. ಹೀಗಾಗಿ ಇದೊಂದು ಅರಣ್ಯ ಪ್ರದೇಶವನ್ನು ಹೆಚ್ಚಾಗಿ
ಹೊಂದಿರುವ ಕ್ಷೇತ್ರ ಎನ್ನಬಹುದು. ಕ್ಷೇತ್ರದಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಅಧಿಕ ಸಂಖ್ಯೆಯಲ್ಲಿರುವುದು ವಿಶೇಷ. ಪುರುಷರಿಗಿಂತ 1,872 ಮಹಿಳಾ ಮತದಾರರು ಹೆಚ್ಚಿದ್ದಾರೆ.

ಪ್ರಸ್ತುತ ಚಾಮರಾಜನಗರ ಲೋಕಸಭಾ ಕ್ಷೇತ್ರದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಅಧಿಕಾರದಲ್ಲಿದ್ದಾರೆ. ಚಾ.ನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ 4 ಕಾಂಗ್ರೆಸ್‌, 2 ಬಿಜೆಪಿ ಹಾಗೂ ಬಿಎಸ್‌ಪಿ ಮತ್ತು ಜೆಡಿಎಸ್‌ನ ತಲಾ ಓರ್ವರು ಗೆದ್ದಿದ್ದರು.

ಕ್ಷೇತ್ರದ ಇತಿಹಾಸ ಚಾಮರಾಜನಗರ ಲೋಕಸಭಾ ಕ್ಷೇತ್ರ 1952 ಮತ್ತು 1957ರಲ್ಲಿ ಮೈಸೂರು  ಲೋಕಸಭಾ ದ್ವಿಸದಸ್ಯ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಬಳಿಕ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರವಾಯಿತು. 1962ರಿಂದ ಲೆಕ್ಕ ತೆಗೆದುಕೊಂಡರೆ, ಕಾಂಗ್ರೆಸ್‌ 10 ಬಾರಿ, ಜನತಾದಳ 2 ಬಾರಿ, ಜೆಡಿಯು ಹಾಗೂ ಜೆಡಿಎಸ್‌ ತಲಾ 1 ಬಾರಿ ಗೆದ್ದಿವೆ. 2019ರ ಕಳೆದ ಚುನಾವಣೆಯಲ್ಲಿ ಬಿಜೆಪಿ ಮೊದಲ ಜಯ ದಾಖಲಿಸಿದೆ. ಈ ಪಟ್ಟಿಯನ್ನು ಗಮನಿಸಿದಾಗಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಹೆಚ್ಚು ಬಾರಿ ಗೆದ್ದಿರುವುದು ವೇದ್ಯವಾಗುತ್ತದೆ.

Advertisement

ಎಸ್‌.ಎಂ. ಸಿದ್ದಯ್ಯ ( 3 ಬಾರಿ), ಬಿ. ರಾಚಯ್ಯ (1 ಬಾರಿ), ವಿ. ಶ್ರೀನಿವಾಸ ಪ್ರಸಾದ್‌ (6 ಬಾರಿ) ಎ. ಸಿದ್ದರಾಜು (2 ಬಾರಿ) ಎಂ.
ಶಿವಣ್ಣ (1 ಬಾರಿ) ಆರ್‌. ಧ್ರುವನಾರಾಯಣ (2 ಬಾರಿ) ಈ ಕ್ಷೇತ್ರವನ್ನು ಪ್ರತಿನಿಧಿಸಿದ ಸಂಸದರು.

ಅತಿ ಹೆಚ್ಚು ಬಾರಿ ಗೆದ್ದ ಶ್ರೀನಿವಾಸಪ್ರಸಾದ್‌ ಇದೇ ತಿಂಗಳ 17ರಂದು ರಾಜಕೀಯ ನಿವೃತ್ತಿ ಘೋಷಿಸಿರುವ ಸಂಸದ ಶ್ರೀನಿವಾಸ ಪ್ರಸಾದ್‌ ಅವರು 1980ರಲ್ಲಿ ಮೊದಲ ಬಾರಿ ಕಾಂಗ್ರೆಸ್‌ ಐ ಅಭ್ಯರ್ಥಿಯಾಗಿ ಗೆದ್ದುಬಂದಿದ್ದರು. ಬಳಿಕ 1984, 1989 ಹಾಗೂ 1991ರಲ್ಲಿ ಕಾಂಗ್ರೆಸ್‌ ನಿಂದ, 1999ರಲ್ಲಿ ಜೆಡಿಯುನಿಂದ, 2019ರಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ. ಒಟ್ಟು 6 ಬಾರಿ ಈ ಕ್ಷೇತ್ರದಲ್ಲಿ ಗೆದ್ದ ದಾಖಲೆ ಅವರ ಹೆಸರಿನಲ್ಲಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಮತಗಳು ಮೊದಲ ಸ್ಥಾನದ
ಲ್ಲಿದ್ದು, ಅನಂತರದ ಸ್ಥಾನದಲ್ಲಿ ಲಿಂಗಾಯತ ಮತಗಳಿವೆ. ನಾಯಕ, ಉಪ್ಪಾರ, ಕುರುಬ, ಮುಸ್ಲಿಂ ಮತಗಳು ಬಳಿಕದ ಸ್ಥಾನದಲ್ಲಿವೆ.

ಕ್ಷೇತ್ರದಲ್ಲಿ ಕಳೆದ 2019ರ ವರೆಗೂ ಪರಿಶಿಷ್ಟ ಜಾತಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸುತ್ತಾ ಬಂದಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಶ್ರೀನಿವಾಸಪ್ರಸಾದ್‌ ಸ್ಪರ್ಧಿಸದ ಕಾರಣ, ದಲಿತ ಮತಗಳು 3 ಭಾಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌, ಬಿಜೆಪಿಗೆ, ಮತ್ತು ಮೂರನೆಯದಾಗಿ ಬಿಎಸ್‌ಪಿಗೆ ಹೋದವು. ಲಿಂಗಾಯತರು, ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದರಿಂದ ಪ್ರಸಾದ್‌ ಗೆದ್ದು ಬಂದರು. ಈ ಬಾರಿ ಬಿಜೆಪಿಯಿಂದ ಎಸ್‌.ಬಾಲರಾಜ್‌ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದರ ಮೇಲೆ ದಲಿತರ ಮತಗಳು ನಿರ್ಧಾರವಾಗಲಿವೆ. ಇನ್ನು ಲಿಂಗಾಯತರು, ನಾಯಕ ಸಮಾಜ ಬಿಜೆಪಿಯನ್ನು ಬೆಂಬಲಿಸುತ್ತವೆ. ಉಪ್ಪಾರ, ಕುರುಬ, ಮುಸ್ಲಿಮರನ್ನೊಳಗೊಂಡ ಅಹಿಂದ ಮತಗಳು ಕಾಂಗ್ರೆಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತವೆ. ಏನೇ ಆದರೂ ಅಭ್ಯರ್ಥಿಗಳ
ಆಯ್ಕೆ ಮೇಲೆ ಮತಗಳು ನಿಂತಿವೆ.

ಬಿಜೆಪಿಗೆ ಚೊಚ್ಚಲ ಗೆಲುವು ಕೊಡಿಸಿರುವ ಶ್ರೀನಿವಾಸ ಪ್ರಸಾದ್‌
ಕಾಂಗ್ರೆಸ್‌ ಅನ್ನೇ ಹೆಚ್ಚು ಬೆಂಬಲಿಸಿಕೊಂಡು ಬಂದಿದ್ದ ಈ ಕ್ಷೇತ್ರದಲ್ಲಿ ಶ್ರೀನಿವಾಸ್‌ ಪ್ರಸಾದ್‌ 2 ಬಾರಿ ಬೇರೆ ಪಕ್ಷಕ್ಕೆ ಹೋದಾಗಲೂ ಮತದಾರರು ಅವರನ್ನು ಬೆಂಬಲಿಸಿದ್ದಾರೆ. ಬಿಜೆಪಿಯಲ್ಲಿನ ಅವರ ಗೆಲುವಂತೂ ಪವಾಡ. ಅಭಿವೃದ್ಧಿ ಕೆಲಸಗಳಲ್ಲಿ ರಾಜ್ಯದಲ್ಲೇ ನಂಬರ್‌ 1 ಸಂಸದ ಎಂಬ ಖ್ಯಾತಿ ಗಳಿಸಿದ್ದ ಧ್ರುವನಾರಾಯಣ ಅವರನ್ನು ಸಾಂಪ್ರದಾಯಿಕ ಕಾಂಗ್ರೆಸ್‌ ಮತಗಳೇ ಹೆಚ್ಚಿರುವ ಕ್ಷೇತ್ರದಲ್ಲಿ ಮಣಿಸಿ, ಒಮ್ಮೆಯೂ ಗೆಲುವು ಕಾಣದ ಬಿಜೆಪಿಯನ್ನು ಗೆಲ್ಲಿಸಿದ್ದು ಪ್ರಸಾದ್‌ ಹಿರಿಮೆ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next