ಬೆಂಗಳೂರು: 2ನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ಕಗ್ಗಂಟಾಗಿರುವ ಉಳಿದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಶುಕ್ರವಾರ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಸಿಎಂ, ಡಿಸಿಎಂ ಜತೆ ಚರ್ಚೆ ನಡೆಯಿತು.
ಬಣಗಳ ಗುದ್ದಾಟ, ಪ್ರತಿಷ್ಠೆಗಿಳಿದ ನಾಯಕರು, ಮನವೊಲಿಕೆ ಬಳಿಕವೂ ಕಣಕ್ಕಿಳಿಯಲು ಮನಸ್ಸು ಮಾಡದಿರುವುದು ಸಹಿತ ಹಲವು ಕಾರಣಗಳಿಂದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್‌ನ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ಅಂತಿಮಗೊಳಿಸಲು ಮುಂದಾದರೂ ಕೊನೆಯ ಕ್ಷಣದಲ್ಲಿ ಅದಕ್ಕೆ ಕೊಕ್ಕೆ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ-ಡಿಸಿಎಂ ಜತೆ ಸುಜೇìವಾಲ ಮಾತುಕತೆ ನಡೆಸಿದರು.
ನಗರದ ತಾಜ್ ವೆಸ್ಟ್ ಎಂಡ್‌ನಲ್ಲಿ ನಡೆದ ತ್ರಿಮೂರ್ತಿಗಳ ಸಭೆಯಲ್ಲಿ ಕೋಲಾರದಲ್ಲಿ ಕೆ.ಎಚ್. ಮುನಿಯಪ್ಪ ಮತ್ತು ರಮೇಶ್ ಕುಮಾರ್ ನಡುವಿನ ತಿಕ್ಕಾಟ, ತಮ್ಮ ಬಣದವರಿಗೆ ನೀಡುವಂತೆ ಒತ್ತಡ ಹಾಕುತ್ತಿರುವುದು, ತಮ್ಮ ಅಳಿಯನಿಗೆ ಟಿಕೆಟ್ ನೀಡುವಂತೆ ಮುನಿಯಪ್ಪ ಒತ್ತಾಯ, ಎಲ್ ಹನುಮಂತಯ್ಯ ಪರ ರಮೇಶ್‌ಕುಮಾರ್ ಪ್ರಭಾವ, ಚಾಮರಾಜನಗರದಲ್ಲಿ ಎಚ್.ಸಿ.ಮಹದೇವಪ್ಪ ಪುತ್ರನಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದು ಒಂದೆಡೆಯಾದರೆ, ಸ್ವತಃ ಮಹದೇವಪ್ಪ ಅವರನ್ನೇ ಕಣಕ್ಕಿಳಿಸಲು ವರಿಷ್ಠರ ಲೆಕ್ಕಾಚಾರ, ಬಳ್ಳಾರಿಯಲ್ಲಿ ಶಾಸಕ ತುಕಾರಾಂ ಪುತ್ರಿ ಬದಲು ಸ್ವತಃ ಶಾಸಕರಿಗೇ ನಿಲ್ಲಲು ಮನವೊಲಿಕೆ ಯತ್ನ, ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಪುತ್ರ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡುವಂತೆ ಕೇಳಿಬರುತ್ತಿರುವ ದನಿ, ಈ ನಡುವೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಶಿವಶಂಕರ್ ರೆಡ್ಡಿ ಹೆಸರು ಕೂಡ ಕೇಳಿಬರುತ್ತಿವೆ. ಈ ಎಲ್ಲ ಅಂಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು ಎನ್ನಲಾಗಿದೆ.
ಆದರೆ ನಾಲ್ಕೂ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಮತ್ತೂಂದೆಡೆ ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಕೂಡ ಈ ನಾಲ್ಕರಲ್ಲಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಹಾಗಾಗಿ ಗೊಂದಲದ ನೆಪದಲ್ಲಿ ಕಾದುನೋಡುವ ತಂತ್ರ ಕೂಡ ಇದರ ಹಿಂದಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಮೂರನೇ ಹಂತದ ಪಟ್ಟಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಅಳಿಯನ ಪರ ಮುನಿಯಪ್ಪ ಬ್ಯಾಟಿಂಗ್
ಈ ಮಧ್ಯೆ ಕೋಲಾರ ಟಿಕೆಟ್ ಗೊಂದಲ ವಿಚಾರವಾಗಿ ಸಚಿವ ಕೆ.ಎಚ್. ಮುನಿಯಪ್ಪ ಶುಕ್ರವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸದಾಶಿವ ನಗರದಲ್ಲಿರುವ ಶಿವಕುಮಾರ್ ಅವರ ನಿವಾಸದಲ್ಲಿ ಭೇಟಿಯಾದ ಮುನಿಯಪ್ಪ, ತಮ್ಮ ಅಳಿಯನ ಪರ ಬ್ಯಾಟಿಂಗ್ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಅದೇ ರೀತಿ, ನಾನೂ ಕೇಳುತ್ತಿದ್ದೇನೆ. ಶುಭ ಸುದ್ದಿ ಸಿಗುತ್ತದೆ ಎಂಬ ಆಶಾಭಾವನೆ ಇದೆ. 35-40 ವರ್ಷಗಳಿಂದ ಪಕ್ಷ ಕಟ್ಟಿದ್ದೇನೆ. ಅಕಸ್ಮಾತ್ ಕಳೆದ ಬಾರಿ ನನಗೆ ಸೋಲಾಗಿದೆ. ನನ್ನನ್ನು ಸೋಲಿಸಿದರೂ ನಾನು ಮಾತನಾಡಲಿಲ್ಲ ಎಂದರು.
ದೊಡ್ಡ ಪಕ್ಷ ಎಂದಾಗ ಭಿನ್ನಾಬಿಪ್ರಾಯ ಇರುತ್ತದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದರು. ಡಿ.ಕೆ. ಶಿವಕುಮಾರ್ ಭೇಟಿ ವೇಳೆ ನಂದಿನಿ ಚಿಕ್ಕಪೆದ್ದಣ್ಣ ಇದ್ದರು.