Advertisement

ದ್ವೇಷ ಭಾಷಣ ಮಾಡಿ ಮೈಲೇಜು ಗಿಟ್ಟಿಸುವ ರಾಜಕಾರಣಿಗಳು

12:53 AM Apr 16, 2019 | Team Udayavani |

ದ್ವೇಷದ ಭಾಷಣ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಬಿಎಸ್ಪಿ ನಾಯಕಿ ಮಾಯಾವತಿ ಅವರ ವಿರುದ್ಧ ಚುನಾವಣ ಆಯೋಗ ಕ್ರಮ ಕೈಗೊಂಡಿದ್ದು, ಯೋಗಿ ಅವರನ್ನು 78 ಗಂಟೆ, ಮಾಯಾವತಿ ಅವರನ್ನು 48 ಗಂಟೆ ಭಾಷಣ ಮಾಡ ದಂತೆ ನಿಷೇಧಿಸಿ ಕ್ರಮ ಕೈಗೊಂಡಿದೆ. ಇದರೊಂದಿಗೆ ದ್ವೇಷ ಭಾಷಣ ಕುರಿತಾಗಿ 58 ಸಂಸದರು, ಶಾಸಕರ ವಿರುದ್ಧ ಕೇಸುಗಳಿವೆ ಎಂಬುದು ತಿಳಿದುಬಂದಿದೆ. ಜತೆಗೆ ದ್ವೇಷ ಭಾಷಣಗಳ ವಿರುದ್ಧ ಏನು ಕ್ರಮಕೈಗೊಂಡಿದ್ದೀರಿ ಎಂದು ಕೇಳಿ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

Advertisement

ದ್ವೇಷ ಭಾಷಣ ಯಾಕಾಗಿ?
ಸುಲಭವಾಗಿ ಜನರ ಗಮನ ಸೆಳೆಯು ವುದು, ಒಂದು ಸಮುದಾಯದ ಓಲೈಕೆ ಮತ್ತು ಪ್ರತಿಸ್ಪರ್ಧಿಗಳಿಗೆ ದಿಟ್ಟ ಉತ್ತರ ನೀಡಬೇಕೆಂಬ ಕಾರಣಕ್ಕೆ ದ್ವೇಷ ಭಾಷಣ ಗಳು ಹುಟ್ಟಿಕೊಳ್ಳುತ್ತಿವೆ. ಚುನಾವಣೆ ಸಂದರ್ಭಗಳಲ್ಲೇ ದ್ವೇಷ ಭಾಷಣಗಳು ಹೆಚ್ಚಾಗಿವೆ. ಇತ್ತೀಚಿನ ವರ್ಷಗಳಲ್ಲಿ ಅಂದರೆ 2009ರ ಲೋಕಸಭೆ ಚುನಾವಣೆ ಬಳಿಕ ದ್ವೇಷಭಾಷಣಗಳು ಹೆಚ್ಚಾಗಿದ್ದು, 2014ರ ಬಳಿಕವಂತೂ ಚುನಾವಣ ಆಯೋಗಕ್ಕೆ ಈ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಸ್ಥಳೀಯ ಮಟ್ಟದ ರಾಜಕಾರಣಿಗಳಿಂದ ತೊಡಗಿ ವಿಐಪಿ ರಾಜಕಾರಣಿಗಳವರೆಗೆ ದ್ವೇಷ ಭಾಷಣಗಳನ್ನು ಮಾಡಿದ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಯಾವ ರೀತಿಯ ದ್ವೇಷ ಭಾಷಣ?
ಜಾತಿಗಳ ವಿರುದ್ಧ, ಧರ್ಮದ ವಿರುದ್ಧ, ಪ್ರಚೋದನಕಾರಿ ಮಾತುಗಳು, ದ್ವೇಷದ ಕರೆಗಳನ್ನು ದ್ವೇಷ ಭಾಷಣಗಳು ಎಂದು ಪರಿಗಣಿಸಲಾಗುತ್ತದೆ. ಪ್ರಚಾರದ ವೇಳೆ ಇಂತಹ ಭಾಷಣಗಳನ್ನು ಮಾಡಿದರೆ ಅದರ ಬಗ್ಗೆ ಚುನಾವಣ ಆಯೋಗ, ಪೊಲೀಸರು ಕೇಸು ದಾಖಲಿಸಿಕೊಳ್ಳಬಹುದು.
ವಿಐಪಿ ರಾಜಕಾರಣಿಗಳೇ ಹೆಚ್ಚು ದ್ವೇಷ ಭಾಷಣ ಮಾಡಿದವರಲ್ಲಿ ವಿಐಪಿ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ. ಚುನಾವಣೆ ಸಂದರ್ಭಗಳಲ್ಲೇ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂಬುದೂ ಗಮನಾರ್ಹ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಸಂಸದರಾದ ಸಾಕ್ಷಿ ಮಹಾರಾಜ್‌, ಸಾಧ್ವಿ ಪ್ರಾಚಿ, ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌, ಕಾಂಗ್ರೆಸ್‌ ನಾಯಕರಾದ ಅಹ್ಮದ್‌ ಪಟೇಲ್‌, ಇಮ್ರಾನ್‌ ಮಸೂದ್‌, ಎಐಎಎಮ್‌ಐಎಮ್‌ನ ಅಸಾದುದ್ದೀನ್‌ ಓವೈಸಿ, ಅಕºರುದ್ದೀನ್‌ ಓವೈಸಿ ಮುಂತಾದವರ ವಿರುದ್ಧ ದ್ವೇಷ ಭಾಷಣದ ಕೇಸುಗಳಿವೆ.

58 ಸಂಸದರು, ಶಾಸಕರ ವಿರುದ್ಧ ಕೇಸು
ಪ್ರಜಾಪ್ರಭುತ್ವ ಕುರಿತ ಚಿಂತನ ಸಮಿತಿ (ಎಡಿಆರ್‌) ಸಮೀಕ್ಷೆ ಪ್ರಕಾರ ಒಟ್ಟು 58 ಮಂದಿ ಸಂಸದರ ವಿರುದ್ಧ ದ್ವೇಷ ಭಾಷಣದ ಕೇಸುಗಳಿವೆ. ಇದರಲ್ಲಿ ರಾಜ್ಯಸಭೆ ಸಂಸದರ ವಿರುದ್ಧ ಒಂದೂ ಇಲ್ಲ. ಅತ್ಯಧಿಕ ದ್ವೇಷ ಭಾಷಣ ಮಾಡಿದ ಕೇಸುಗಳನ್ನು ಹೊಂದಿರುವವರಲ್ಲಿ ಎಐಯುಡಿಎಫ್, ಎಐಎಮ್‌ಐಎಮ್‌, ಬಿಜೆಪಿ, ಶಿವಸೇನೆ, ಟಿಆರ್‌ಎಸ್‌, ಪಿಎಂಕೆಯ ರಾಜಕಾರಣಿಗಳಿದ್ದಾರೆ.

ಉತ್ತರಪ್ರದೇಶದಲ್ಲೇ ಹೆಚ್ಚು
ದ್ವೇಷ ಭಾಷಣದ ಅತ್ಯಧಿಕ ಪ್ರಕರಣ ಹೊಂದಿರುವ ಸಂಸದರು, ಶಾಸಕರು ಉತ್ತರ ಪ್ರದೇಶದಲ್ಲಿ ಹೆಚ್ಚು. ಇಲ್ಲಿನವರ ವಿರುದ್ಧ 15 ಕೇಸುಗಳಿವೆ. ತೆಲಂಗಾಣದವರ ವಿರುದ್ಧ 12, ಕರ್ನಾಟಕದವರ ವಿರುದ್ಧ 5, ಮಹಾರಾಷ್ಟ್ರದ ಜನಪ್ರತಿನಿಧಿಗಳ ವಿರುದ್ಧ 5 ಪ್ರಕರಣಗಳಿವೆ.

Advertisement

ಕಾನೂನು
ಏನು ಹೇಳುತ್ತೆ?
ಭಾರತೀಯ ದಂಡ ಸಂಹಿತೆ (ಐಪಿಸಿ) ಪ್ರಕಾರ, ದ್ವೇಷ ಭಾಷಣ ಶಿಕ್ಷಾರ್ಹ ಅಪರಾಧ ಸೆಕ್ಷನ್‌ 153 ಎ : ಈ ಸೆಕ್ಷನ್‌ ಅಡಿಯಲ್ಲಿ ಯಾವುದೇ ವ್ಯಕ್ತಿ ಬರವಣಿಗೆ ಮೂಲಕ, ಮಾತಿನ ಮೂಲಕ ದ್ವೇಷ, ಸಮು ದಾಯಗಳ ವಿರುದ್ಧ ಮಾತ ನಾಡುವುದು, ಜಾತಿಗಳ ವಿರುದ್ಧ, ಧರ್ಮದ ವಿರುದ್ಧ, ಭಾಷೆ ವಿರುದ್ಧ ಮಾತನಾಡಿದರೆ ಶಿಕ್ಷಾರ್ಹ ಅಪರಾಧ. ಸೆಕ್ಷನ್‌ 295 ಎ ಮತ್ತು 298 : ಯಾವುದೇ ವ್ಯಕ್ತಿ ಅಥವಾ ವರ್ಗದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಉದ್ದೇಶಪೂರ್ವಕವಾಗಿ ಯತ್ನಿಸಿದ್ದರೆ ಅದನ್ನು ಕ್ರಿಮಿನಲ್‌ ಪ್ರಕರಣವೆಂದು ಪರಿಗಣಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next