Advertisement

ಸಂಸತ್‌ನಲ್ಲಿ ಧ್ವನಿಸಿದ ಮಹದಾಯಿ ಕೂಗು

07:57 AM Jan 03, 2018 | Team Udayavani |

ನವದೆಹಲಿ: ಕರ್ನಾಟಕದಲ್ಲಿ ಕಳೆದ ವಾರವಷ್ಟೇ ಭಾರೀ ಪ್ರತಿಭಟನೆ, ಬಂದ್‌, ಹೈಡ್ರಾಮಾಗಳಿಗೆ ಸಾಕ್ಷಿಯಾಗಿದ್ದ “ಮಹದಾಯಿ ವಿವಾದವು’ ಸಂಸತ್‌ನಲ್ಲೂ ಪ್ರತಿಧ್ವನಿಸಿದೆ. ಮಂಗಳವಾರ ಲೋಕಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಪ್ರವೇಶಕ್ಕೆ ಆಗ್ರಹಿಸಿತು.

Advertisement

ಶೂನ್ಯ ವೇಳೆಯಲ್ಲಿ ಈ ಬಗ್ಗೆ ಮಾತನಾಡಿದ ತುಮಕೂರಿನ ಸಂಸದ ಎಸ್‌. ಪಿ. ಮುದ್ದಹನುಮೇಗೌಡ ಅವರು, “ಮಹದಾಯಿ ನೀರಿನ ವಿವಾದವನ್ನು ಆದಷ್ಟು ಬೇಗ ಬಗೆಹರಿಸಬೇಕಾಗಿದೆ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಮಹದಾಯಿಗಾಗಿ ಅವರು ಪ್ರತಿಭಟಿಸುತ್ತಲೇ ಇದ್ದಾರೆ. ಅವರ ನೀರಿನ ಸಮಸ್ಯೆ
ನೀಗಿಸಬೇಕೆಂದರೆ ಮಹದಾಯಿ ವಿವಾದ ಅಂತ್ಯ ಕಾಣಬೇಕು. ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯವನ್ನು ದೂರವಿಡಬೇಕು. ಪ್ರಧಾನಿ ಮೋದಿ ಅವರು ಕೂಡಲೇ ಮಧ್ಯಪ್ರವೇಶಿಸಿ ಮಹದಾಯಿ ಮತ್ತು ಮೇಕೆದಾಟು ಎರಡೂ ವಿವಾದಗಳನ್ನು ಕೊನೆಗಾಣಿಸಬೇಕು,’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್‌, “ಮಹದಾಯಿ ವಿವಾದವನ್ನು ಸಂಧಾನ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರು ಈಗಾಗಲೇ ಕರ್ನಾಟಕದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ,’ ಎಂದು ಮಾಹಿತಿ ನೀಡಿದರು. ಅಷ್ಟರಲ್ಲಿ, ಕೆಂಡಾಮಂಡಲರಾದ ಕಾಂಗ್ರೆಸ್‌ ಸದಸ್ಯರು, “ಮಾಜಿ ಸಿಎಂಗೆ ಪತ್ರ ಬರೆದಿದ್ದಾದರೂ ಏಕೆ’ ಎಂದು ಪ್ರಶ್ನಿಸಿ ಗದ್ದಲವೆಬ್ಬಿಸಿದರು. ಆ ಬಳಿಕ ಮತ್ತೆ ಚರ್ಚೆಗೆ ಬರಲಿಲ್ಲ.

ಸರ್ವಪಕ್ಷ ಸಭೆಯಲ್ಲಿ ಗೋವಾ ಕಾಂಗ್ರೆಸ್‌ ನಾಯಕರ ಜತೆ ಚರ್ಚಿಸಿ ಒಪ್ಪಿಸುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಇದೀಗ
ಸುಮ್ಮನಾಗಿದ್ದಾರೆ. ಸಿಎಂ ಆಗಲಿ, ಎಂ.ಬಿ.ಪಾಟೀಲ್‌ ಅವರಾಗಲಿ ಗೋವಾ ಕಾಂಗ್ರೆಸ್‌ ನಾಯಕರ ಜತೆ ಮಾತುಕತೆಯನ್ನೇ ನಡೆಸಿಲ್ಲ.

 ● ಜಗದೀಶ್‌ ಶೆಟ್ಟರ್‌, ವಿಪಕ್ಷ ನಾಯಕ

ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಿದರೆ ಮಹದಾಯಿ ವಿವಾದವನ್ನು ಐದು ನಿಮಿಷದಲ್ಲಿ ಬಗೆ ಹರಿಸಬಹುದು. ನಾವು
ಕೇಳುತ್ತಿರುವುದು 7.5 ಟಿಎಂಸಿ ಕುಡಿಯುವ ನೀರು, ಅದನ್ನೂ ಕೊಡಲ್ಲ ಅಂದ್ರೆ ಹೇಗೆ? ಅದು ಸ್ವಾರ್ಥ ಅಲ್ವಾ?

 ● ಅಂಬರೀಶ್‌, ಮಾಜಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next