Advertisement

Lok Elections; ಸಾಕ್ಷಾತ್‌ ಸಮೀಕ್ಷೆ ಮೂಲಕ ಗೆಲ್ಲುವ ಕುದುರೆಗಳಿಗೆ ಕಾಂಗ್ರೆಸ್‌ ಹುಡುಕಾಟ

02:04 AM Jan 09, 2024 | Team Udayavani |

ಬೆಂಗಳೂರು: ಸಾರ್ವತ್ರಿಕ ಚುನಾವಣೆಯಲ್ಲಿ ಶತಾಯಗತಾಯ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿರುವ ಕಾಂಗ್ರೆಸ್‌ ಅದಕ್ಕಾಗಿ ಹಲವು ಸಮೀಕ್ಷೆಗಳ ಮೂಲಕ “ಗೆಲ್ಲುವ ಕುದುರೆ’ಗಳ ಪಟ್ಟಿ ಮಾಡಲು ಮುಂದಾಗಿದೆ.

Advertisement

ಇದಕ್ಕೆ ಪೂರಕವಾಗಿ ವೀಕ್ಷಕರ ವರದಿಗಳನ್ನು ಆಧರಿಸಿ ಜನವರಿ ಮೊದಲ ವಾರದಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ದಿಲ್ಲಿಯಲ್ಲಿ ರಾಜ್ಯ ನಾಯಕ ರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸ ಲಾಗಿದೆ. ಅದರ ಮುಂದುವರಿದ ಭಾಗವಾಗಿ ಜ. 10ರ ವರೆಗೆ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಈ ವಿಷಯವಾಗಿಯೇ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಅಭ್ಯರ್ಥಿಗಳ ಆಯ್ಕೆಗೆ ತೆರೆಮರೆಯಲ್ಲಿ “ಗ್ರೌಂಡ್‌ ರಿಪೋರ್ಟ್‌’ ಸಿದ್ಧಪಡಿಸಲಾಗುತ್ತಿದೆ.

ಈಗಾಗಲೇ ವೀಕ್ಷಕರು ತಮಗೆ ವಹಿಸಿದ ಜಿಲ್ಲೆಗಳಿಗೆ ಭೇಟಿ ನೀಡಿ, ಸ್ಥಳೀಯ ನಾಯಕ ರೊಂದಿಗೆ ಸಮಾಲೋಚನೆ ನಡೆಸಿ ಮೂರ್‍ನಾಲ್ಕು ಆಕಾಂಕ್ಷಿಗಳ ಹೆಸರುಗಳೊಂದಿಗೆ ವರದಿಯನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ. ಅದು ಹೈಕಮಾಂಡ್‌ ಕೈಗೂ ಸೇರಿದೆ. ಇದರ ಬೆನ್ನಲ್ಲೇ ಸುನಿಲ್‌ ಕನಗೋಳು ನೇತೃತ್ವದಲ್ಲಿ ಚುನಾವಣ ತಜ್ಞರ ತಂಡದಿಂದ ಸಾಕ್ಷಾತ್‌ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ಆ ತಂಡ ಕೂಡ ಕಾರ್ಯಪ್ರವೃತ್ತವಾಗಿದ್ದು, ಮುಂದಿನ ಹತ್ತು ದಿನಗಳಲ್ಲಿ ಗೌಪ್ಯ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಿದೆ.

ಏನೇನು ಮಾಹಿತಿ ಸಂಗ್ರಹ?
ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿರುವ ಸಚಿವರ ಸಹಿತ ಗೆಲ್ಲುವ ಕುದುರೆ ಯಾವುದು ಎಂಬ ಬಗ್ಗೆ ತಂಡವು ಮಾಹಿತಿ ಕಲೆಹಾಕುತ್ತಿದೆ. ಜಾತಿ ಸಮೀಕರಣ, ಕ್ಷೇತ್ರದಲ್ಲಿ ಹಿಡಿತ, ಶಾಸಕ ರೊಂದಿಗಿನ ಒಡನಾಟ- ಮುನಿಸು, ಹಿಂದಿನ ಚುನಾವಣೆಯಲ್ಲಿ ಪ್ರದರ್ಶನ ಒಳ ಗೊಂಡಂತೆ ಹತ್ತು ಹಲವು ಅಂಶಗಳ ಪಟ್ಟಿ ಮಾಡಿ, ಸ್ಥಳೀಯ ನಾಯಕರಿಂದ ಜಾತಕ ಜಾಲಾಡು ತ್ತಿದೆ. ಅದನ್ನು ಆಧರಿಸಿ ಸೂಕ್ತ ಅಭ್ಯರ್ಥಿ ಗಳನ್ನು ಸೂಚಿಸಲಾಗುತ್ತದೆ.

ಹೀಗೆ ಮೂರ್‍ನಾಲ್ಕು ಕಡೆಗಳಿಂದ ಹೈಕಮಾಂಡ್‌ ವರದಿ ತರಿಸಿ ಕೊಳ್ಳುವುದರಿಂದ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಅದೆಲ್ಲವನ್ನೂ ಕ್ರೋಡೀಕರಿಸಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಕೈಹಾಕುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Advertisement

ಅಂದಹಾಗೆ ಸುನಿಲ್‌ ಕನಗೋಳು ತಂಡ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲೂ ಕ್ಷೇತ್ರಗಳ ಸಮೀಕ್ಷೆ ನಡೆಸಿ, “ಗ್ರೌಂಡ್‌ ರಿಪೋರ್ಟ್‌’ ಸಲ್ಲಿಸಿತ್ತು. ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಅದನ್ನು ಕೂಡ ಪರಿಗಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

-ಸುನಿಲ್‌ ಕನಗೋಳು ನೇತೃತ್ವದ ಚುನಾವಣ ತಜ್ಞರ ತಂಡದಿಂದ ಸಮೀಕ್ಷೆ
-28 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಯಾರು ಎಂಬ ಬಗ್ಗೆ ಮಾಹಿತಿ ಸಂಗ್ರಹ
-ಜಾತಿ ಸಮೀಕರಣ, ಕ್ಷೇತ್ರದಲ್ಲಿ ಹಿಡಿತ, ಕಾರ್ಯಕ್ಷಮತೆ ಸೇರಿ ಹಲವು ಅಂಶಗಳ ಪರಿಗಣನೆ
-ಮೂರ್ನಾಲ್ಕು ವರದಿಗಳನ್ನು ಆಧರಿಸಿ ಸೂಕ್ತ ಅಭ್ಯರ್ಥಿ ಆಯ್ಕೆಗೆ ಹೈಕಮಾಂಡ್‌ ಚಿಂತನೆ

ಸುರ್ಜೇವಾಲ ಆಗಮನ; ಇಂದು, ನಾಳೆ ಸರಣಿ ಸಭೆ
ನಿರೀಕ್ಷೆಯಂತೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಸೋಮವಾರ ಸಂಜೆ ರಾಜಧಾನಿಗೆ ಆಗಮಿಸಿದ್ದು, ಮುಂದಿನ ಎರಡು ದಿನ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳಲಿವೆ. ಮಂಗಳವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜತೆಗೆ ಸುರ್ಜೇವಾಲ ಸಭೆ ನಡೆಸಲಿದ್ದಾರೆ. ಅದು ಮುಖ್ಯವಾಗಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಬುಧ ವಾರ ಇಡೀ ದಿನ ಸರಣಿ ಸಭೆಗಳು ವಿವಿಧ ಪದಾಧಿಕಾರಿಗಳೊಂದಿಗೆ ನಡೆಯಲಿವೆ. ಈ ನಡುವೆ ಹಲವು ಕಾಂಗ್ರೆಸ್‌ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಭೇಟಿಯಾಗಿ ಅಹವಾಲುಗಳನ್ನು ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next