Advertisement

9 ರಂದು ಲೋಕ್‌ ಅದಾಲತ್‌ ಆಯೋಜನೆ

08:52 AM Feb 26, 2019 | |

ಚಿತ್ರದುರ್ಗ: ಲೋಕ ಅದಾಲತ್‌ನಲ್ಲಿ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣಗಳನ್ನು ರಾಜಿ ಸಂಧಾನ ದಿಂದ ಇತ್ಯರ್ಥಪಡಿಸಿಕೊಳ್ಳಲು ಮಾರ್ಚ್‌ 9 ರಂದು ಲೋಕ ಅದಾಲತ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಂಡು ರಾಜಿ ಸಂಧಾನದ ಮೂಲಕ
ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಹೇಳಿದರು.

Advertisement

ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸಂಧಾನ ಮಾಡಬಹುದಾದ ಕ್ರಿಮಿನಲ್‌ ಪ್ರಕರಣಗಳು, ಎಲ್ಲ ರೀತಿಯ ಸಿವಿಲ್‌ ಪ್ರಕರಣಗಳನ್ನು ನ್ಯಾಯಾಲಯದಿಂದ ಹೊರಗಡೆ ಅಂದರೆ ಲೋಕ ಅದಾಲತ್‌ ನಲ್ಲಿ ರಾಜಿ ಸಂಧಾನ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದರು.

ರೈತರಿಂದ ಸಾಲ ವಸೂಲಿಗಾಗಿ ಬ್ಯಾಂಕ್‌ನವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ ಪ್ರಕರಣಗಳೂ ಸೇರಿದಂತೆ ಸಾಲ ತೀರುವಳಿಗಾಗಿ ನ್ಯಾಯಾಲಯದ ಮೂಲಕ ಸಾಲ ವಸೂಲಿ ಮಾಡುವ ಮುನ್ನ ರೈತರು ಸ್ವಯಂಪ್ರೇರಣೆಯಿಂದ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರೂ ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗುತ್ತದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಜಮೀನು ಸರ್ವೆ ಮಾಡುವ ಸಂದರ್ಭದಲ್ಲಿ ನಡೆಯುವಂತಹ ಘರ್ಷಣೆ, ಸಣ್ಣಪುಟ್ಟ ಪ್ರಕರಣಗಳು, ಅಣ್ಣ ತಮ್ಮಂದಿರ ಗಲಾಟೆ, ಜಮೀನು ಸಮಸ್ಯೆ, ತಂದೆ ಮಗನ ಸಮಸ್ಯೆ, ಜಮೀನಿನ ರಸ್ತೆ ಗಲಾಟೆದಂತಹ ಪ್ರಕರಣಗಳಳಲ್ಲಿ ರಾಜಿ ಮಾಡಿಕೊಳ್ಳಬಹುದು ಎಂದರು.

ಕಾನೂನು ಅರಿವು ಮೂಡಿಸುವ ಕಾರ್ಯದಲ್ಲಿ ಜಿಲ್ಲಾ ನ್ಯಾಯಾಲಯ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಬಾಲ್ಯವಿವಾಹ, ಕಾನೂನು ಅರಿವು, ಬಾಲಕಾರ್ಮಿಕ ಪದ್ಧತಿ, ಕಟ್ಟಡ ಕಾರ್ಮಿಕರಿಗೆ ಅರಿವು ಸೇರಿದಂತೆ ಮತ್ತಿತರ ಅರಿವು ಮೂಡಿಸುವಂತಹ 427 ಕಾರ್ಯಕ್ರಮಗಳನ್ನು ಮಾಡಲಾಗಿದೆ.

Advertisement

ಅಲ್ಲದೆ ನ್ಯಾಯಾಧೀಶರು ವರ್ಷಕ್ಕೆ ಐದು ಕಾರ್ಯಾಗಾರ ಮಾತ್ರ ಮಾಡಬೇಕು ಎಂದಿದೆ. ಆದರೆ ನಾವು 23 ಕಾರ್ಯಾಗಾರ ಮಾಡುವ ಮೂಲಕ ಮುಂಚೂಣಿಯಲ್ಲಿದ್ದೇವೆ. ನ್ಯಾಯಾಧೀಶರು, ವಕೀಲರು, ಸಾರ್ವಜನಿಕರ ಸಹಕಾರದಿಂದ ಇಷ್ಟೊಂದು ಕೆಲಸ ಮಾಡಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

2018ನೇ ಸಾಲಿನಲ್ಲಿ ವಿಚಾರಣಾ ಪೂರ್ವ 2200 ಪ್ರಕರಣಗಳಲ್ಲಿ 1216 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಇದಕ್ಕಾಗಿ ಒಂದೇ ಒಂದು ರೂ. ಹಣವಿಲ್ಲದೆ ಹಾಗೂ ಯಾವುದೇ ವಕೀಲರಿಲ್ಲದೆ ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥ ಮಾಡಲಾಗಿದೆ ಎಂದು ಹೇಳಿದರು.

ಇಡೀ ಜಿಲ್ಲೆಯಲ್ಲಿ 22 ನ್ಯಾಯಾಲಯಗಳಿದ್ದು, ಆ ಎಲ್ಲ ನ್ಯಾಯಾಲಯಗಳಲ್ಲಿ 14,012 ಸಿವಿಲ್‌ ಹಾಗೂ 13,210 ಕ್ರಿಮಿನಲ್‌ ಪ್ರಕರಣಗಳು ಸೇರಿದಂತೆ ಒಟ್ಟು 27,222 ಪ್ರಕರಣಗಳು ಬಾಕಿ ಇವೆ. ಕೊಲೆ, ಅತ್ಯಾಚಾರದಂತಹ ಘೋರವಾದ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಅವಕಾಶವಿಲ್ಲ. ಆದರೆ ಹಣದ ವಿಚಾರಕ್ಕೆ ಸಂಬಂಧಿಸಿದ ಚೆಕ್‌ಬೌನ್ಸ್‌ ಪ್ರಕರಣಗಳನ್ನು ಬಗೆಹರಿಸಲಾಗುವುದು.
 ಎಸ್‌.ಬಿ. ವಸ್ತ್ರಮಠ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು.

Advertisement

Udayavani is now on Telegram. Click here to join our channel and stay updated with the latest news.

Next