ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ನ.12ರಂದು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ರಾಜಿ-ಸಂಧಾನದ ಮೂಲಕ 14.77 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ದಾಖಲೆ ಪ್ರಮಾಣದಲ್ಲಿ 1,460 ವೈವಾಹಿಕ ಪ್ರಕರಣಗಳಿಗೆ ಮುಕ್ತಿ ನೀಡಲಾಗಿದೆ. ಇದರಲ್ಲಿ 174ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ದಂಪತಿಗಳು ಪುನಃ ಒಂದಾಗಿದ್ದಾರೆ.
ರಾಷ್ಟ್ರೀಯ ಲೋಕ್ ಅದಾಲತ್ ಕುರಿತು ವಿವರ ನೀಡಲು ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಈ ಮಾಹಿತಿ ನೀಡಿದರು.
ದಂಪತಿಗಳ ವೈವಾಹಿಕ ಜೀವನ ಪುನರ್‌ಸ್ಥಾಪನೆಗೆ ಉತ್ತೇಜಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವೈವಾಹಿಕ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸುವಂತೆ ಒತ್ತು ನೀಡಲಾಗಿತ್ತು. ಅದರಂತೆ ಈ ಬಾರಿ ಒಟ್ಟು 1,460 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇದರಲ್ಲಿ 174ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ದಂಪತಿಗಳು ರಾಜಿ ಸಂಧಾನದ ಮೂಲಕ ಪುನಃ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿದ್ದಾರೆ, ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ. ಇದರಲ್ಲಿ ವಿವಾಹ ವಿಚ್ಛೇದನ ಬಯಸಿದ್ದ ಬೆಂಗಳೂರು ನಗರದ 32 ದಂಪತಿ, ಮೈಸೂರಿನ 29 ದಂಪತಿ, ಬೆಳಗಾವಿಯಲ್ಲಿ 18 ಹಾಗೂ ಧಾರವಾಡದ 17 ದಂಪತಿಗಳು ಹಾಗೂ ಬೇರೆ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನ ದಂಪತಿಗಳು ಈ ಲೋಕ್ ಅದಾಲತ್ ಮೂಲಕ ರಾಜಿ ಸಂಧಾನದಿಂದ ಒಂದಾಗಿ ಜೀವನ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ನ್ಯಾ. ವೀರಪ್ಪ ತಿಳಿಸಿದರು.
ನವೆಂಬರ್ 12ರಂದು ನಡೆದ ಲೋಕ್ ಅದಾಲತ್‌ನಲ್ಲಿ ಒಟ್ಟು 1,021ಕ್ಕೂ ಹೆಚ್ಚು ಬೈಠಕ್ (ಕಲಾಪ)ಗಳು ನಡೆದಿದ್ದು, ಹೈಕೋರ್ಟ್ ಸೇರಿ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ 1,76, 501ಪ್ರಕರಣಗಳು ಹಾಗೂ 13,00,784 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 14,77,285 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 1,282 ಕೋಟಿ ರೂ.ಗಳನ್ನು ಪರಿಹಾರ ಒದಗಿಸಲಾಗಿದೆ. ಈ ವರ್ಷ ಮಾರ್ಚ್‌ನಲ್ಲಿ ನಡೆದಿದ್ದ ಲೋಕ್ ಅದಾಲತ್‌ನಲ್ಲಿ 3.67 ಲಕ್ಷ, ಜೂನ್‌ನಲ್ಲಿ 7.65 ಲಕ್ಷ ಹಾಗೂ ಆಗಸ್ಟ್‌ನಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ 8.34 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು ಎಂದು ನ್ಯಾ.ವೀರಪ್ಪ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಗ್ನೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇತ್ಯರ್ಥಗೊಂಡ ಹೆಚ್ಚು ಮೊತ್ತದ ಪ್ರಕರಣಗಳು:
– ಎಸ್‌ಸಿಸಿಎಚ್-12 ನ್ಯಾಯಾಲಯದ ಚೆಕ್ ಬೌನ್ಸ್ ಪ್ರಕರಣದಲ್ಲಿ 32 ಕೋಟಿ ರೂ. ಪರಿಹಾರ.
– ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ 1.32 ಕೋಟಿ ರೂ.ಗಳೊಂದಿಗೆ ಇತ್ಯರ್ಥ.
– ಬಾಗಲಕೋಟೆ 2ನೇ ಅಪರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 84 ಭೂಸ್ವಾಧೀನ ಪ್ರಕರಣಗಳನ್ನು 1.77 ಕೋಟಿ ಮೊತ್ತದೊಂದಿಗೆ ಇತ್ಯರ್ಥ.
– ಕೊಪ್ಪಳದ ಎಂಎಸಿಟಿ ಕೋರ್ಟ್‌ನಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ 55 ಲಕ್ಷ ರೂ. ಪರಿಹಾರ.
– ಕೋಲಾರ ಜಿಲ್ಲೆ ಮುಳಬಾಗಿಲು ಎಂಎಸಿಟಿ ಕೋರ್ಟ್‌ನಲ್ಲಿ 41 ಲಕ್ಷ ರೂ. ಪರಿಹಾರ.
ಒಟ್ಟು ಇತ್ಯರ್ಥಪಡಿಸಲಾದ ಪ್ರಕರಣಗಳು:
ಪ್ರಕರಣಗಳ ಪ್ರಕಾರ ಪರಿಹಾರದ ಮೊತ್ತ
4,18,775 ಟ್ರಾಫಿಕ್ ಚಲನ್ ಪ್ರಕರಣಗಳು 23,89,38,021 ಕೋಟಿ
9,383 ಬ್ಯಾಂಕ್ ವಸೂಲಾತಿ ಪ್ರಕರಣಗಳು 63,52,18,988 ಕೋಟಿ
1,28,276 ವಿದ್ಯುತ್ ಬಿಲ್ ವಸೂಲಾತಿ ಪ್ರಕರಣಗಳು 18 ಕೋಟಿ
2,88,977 ನೀರಿನ ಬಿಲ್ಲುಗಳ ಪ್ರಕರಣಗಳು 27,15,80,029 ಕೋಟಿ
175 ರೇರಾ ಪ್ರಕರಣಗಳು 11 ಕೋಟಿ
202 ಗ್ರಾಹಕರ ವ್ಯಾಜ್ಯ ಪ್ರಕರಣಗಳು 5,94,53,136 ಕೋಟಿ
2,887 ಆಸ್ತಿ ಪಾಲು ದಾವೆಗಳು 26 ಕೋಟಿ
3,384 ಮೋಟಾರು ವಾಹನ ಅಪಘಾತ ಪ್ರಕರಣಗಳು 324.37 ಕೋಟಿ
39 ವಾಣಿಜ್ಯ ಪ್ರಕರಣಗಳು 144,19,988 ಲಕ್ಷ
14,77,285 ಒಟ್ಟು ಪ್ರಕರಣಗಳು 1,282 ಕೋಟಿ