Advertisement

Lok Adalat ; ಭಟ್ಕಳದಲ್ಲಿ ಮತ್ತೆ ಒಂದಾದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ

06:58 PM Sep 09, 2023 | Team Udayavani |

ಭಟ್ಕಳ: ಇಲ್ಲಿನ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ನಡೆದ ಬೃಹತ್ ಲೋಕ ಅದಾಲತ್‌ನಲ್ಲಿ ವಿವಿಧ ಹಂತದಲ್ಲಿ ವಿಚಾರಣೆಯಲ್ಲಿದ್ದ ಒಟ್ಟೂ ೨೮೦ ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥವಾಗಿದ್ದು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಶೇಷವಾಗಿ ಕೌಟುಂಬಿಕ ಪ್ರಕರಣವೊಂದು ರಾಜೀ ಮೂಲಕ ಸುಖಾಂತ್ಯಗೊಂಡ ಪ್ರಸಂಗ ನಡೆಯಿತು.

Advertisement

ಶನಿವಾರ ಬೆಳಗ್ಗೆಯಿಂದ ಆರಂಭವಾಗಿದ್ದ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಲಯಲ್ಲಿ ವಿಚಾರಣೆಗೆ ಬಾಕಿ ಇದ್ದ 907 ಪ್ರರಣಗಳಲ್ಲಿ ಒಟ್ಟು 126 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಯಿತು. ಇವುಗಳಲ್ಲಿ ಕೌಟುಂಬಿಕ ಪ್ರಕರಣವೊಂದರಲ್ಲಿ ದಂಪತಿಗಳು ಪರಸ್ಪರ ಮನಸ್ತಾಪದಿಂದ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು ತನಿಖಾ ಹಂತದಲ್ಲಿರುವ ಪ್ರಕರಣವನ್ನು ರಾಜೀ ಮೂಲಕ ಇತ್ಯರ್ಥ ಪಡಿಸಿ ದಂಪತಿಗಳು ಒಂದಾಗುವಂತೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಎರಡೂ ಕಡೆಯವರನ್ನು ಮನವೊಲಿಸಿ ಅವರಲ್ಲಿದ್ದ ಪರಸ್ಪರ ಭಿನ್ನಾಭಿಪ್ರಾಯವನ್ನು ದೂರ ಮಾಡಿ ಅವರು ಹಿರಿಯರ ಸಮ್ಮುಖದಲ್ಲಿ ಒಪ್ಪಿ ಒಟ್ಟಾಗಿ ಜೀವನ ನಡೆಸುವುದಾಗಿ ಭರವಸೆ ನೀಡಿ ಪರಸ್ಪರ ಸಿಹಿ ಹಂಚಿಕೊಳ್ಳುವ ಮೂಲಕ ಮತ್ತೆ ಒಂದಾಗಿರುವುದು ನ್ಯಾಯಾಲಯದ ಆವರಣದಲ್ಲಿದ್ದವರಿಗೆಲ್ಲಾ ಸಂತಸ ತಂದಿತ್ತು. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸಂಧಾನಕಾರರಾಗಿ ನ್ಯಾಯವಾದಿ ನಾಗರತ್ನಾ ನಾಯ್ಕ ಕಾರ್ಯನಿರ್ವಹಿಸಿದರು.

ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿ ವಿಚಾರಣೆಗೆ ಬಾಕಿ ಇರುವ ಚೆಕ್ ಬೌನ್ಸ ಪ್ರಕರಣ (ಎನ್.ಐ.ಆಕ್ಟ್), ಮೋಟಾರು ವಾಹನ ಪರಿಹಾರ ಪ್ರಕರಣ (ಎಂ.ವಿ.ಆಕ್ಟ್), ಅಮಲ್‌ಜ್ಯಾರಿ ಪ್ರಕರಣ (ಎಕ್ಸಿಕ್ಯೂಶನ್), ಐ.ಪಿ.ಸಿ. ಪ್ರಕರಣಗಳನ್ನು ಕೂಡಾ ರಾಜೀ ಮೂಲಕ ಇತ್ಯರ್ಥ ಪಡಿಸಲಾಗಿದ್ದು ಎಲ್ಲಾ ಪ್ರಕರಣಗಳಲ್ಲಿ ಒಟ್ಟು ಪರಿಹಾರದ ಮೊತ್ತವಾಗಿ1,01,70,230 ರೂಪಾಯಿಗಳನ್ನು ಕಕ್ಷಿದಾರರಿಗೆ, ವಿವಿಧ ಬ್ಯಾಂಕುಗಳಿಗೆ ಅವಾರ್ಡ್ ಘೊಷಿಸಲಾಯಿತು.

ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಪ್ರಕರಣಗಳ ಪೈಕಿ ಒಟ್ಟೂ 77 ಪ್ರಕರಣಗಳನ್ನ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ ಒಟ್ಟೂ 77 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥ ಪಡಿಸಲಾಯಿತು.

Advertisement

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ, ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ ಬಾಳ್‌ನಾಯ್ಕ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಫವಾಜ್ ಪಿ.ಎ., ವಕೀಲರ ಸಂಘದ ಅಧ್ಯಕ್ಷ ಗಣೇಶ ಎಂ. ದೇವಡಿಗ, ಹಿರಿಯ ನ್ಯಾಯವಾದಿ ಆರ್.ಆರ್.ಶ್ರೇಷ್ಟಿ, ಎಂ.ಎಲ್.ನಾಯ್ಕ, ವಿ.ಎಫ್.ಗೋಮ್ಸ್, ಸಿ.ಎಂ.ಭಟ್ಟ, ರಾಜೇಶ ನಾಯ್ಕ, ಪಾಂಡು ನಾಯ್ಕ, ಜೆ.ಡಿ.ಭಟ್ಟ, ಎಂ.ಎಚ್.ನಾಯ್ಕ, ನಾಗರಾಜ ಈ.ಎಚ್., ಉಮೇಶ ನಾಯ್ಕ, ಪಾಂಡು ನಾಯ್ಕ, ಎಸ್.ಎಂ.ನಾಯ್ಕ, ಕೆ.ಎಚ್. ನಾಯ್ಕ, ವಿ.ಎ.ಅಕ್ಕಿವಳ್ಳಿ ಸೇರಿದಂತೆ ಸಹಾಯಕ ಸರಕಾರಿ ಅಭಿಯೋಜಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next