Advertisement

ಒಡೆದ ಮನಸ್ಸುಗಳ ಬೆಸೆದ ಅದಾಲತ್‌

02:08 AM Jun 26, 2022 | Team Udayavani |

ರಾಜ್ಯಾದ್ಯಂತ ಶನಿವಾರ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಸುಮಾರು 5 ಲಕ್ಷ ವ್ಯಾಜ್ಯಗಳು
ರಾಜಿ ಸಂಧಾನದ ಮೂಲಕ ಬಗೆಹರಿದವು. ಎಲ್ಲಕ್ಕಿಂತಲೂ ಮಿಗಿಲಾಗಿ ವರ್ಷಾನುಗಟ್ಟಲೆಯಿಂದ ದೂರವಾಗಿದ್ದ ಹಲವು ದಂಪತಿಗಳು ಒಂದುಗೂಡಿದ ಪ್ರಕರಣಗಳೇ ಅದಾಲತ್‌ನಲ್ಲಿ ಮೇಲುಗೈ ಸಾಧಿಸಿವೆ.

Advertisement

ವಿಚ್ಛೇದಿತರಿಗೆ ಮದುವೆ ಯೋಗ!
ದಾವಣಗೆರೆ: ನ್ಯಾಯಾಲಯದ ಮೂಲಕ ವಿಚ್ಛೇದನ ಪಡೆದಿದ್ದ ದಂಪತಿ ನ್ಯಾಯಾಧೀಶರ ಸಮ್ಮುಖವೇ ಒಂದಾದ ಘಟನೆ ಇಲ್ಲಿನ ಲೋಕ ಅದಾಲತ್‌ನಲ್ಲಿ ನಡೆದಿದೆ.ಕೌಟುಂಬಿಕ ಭಿನ್ನಾಭಿ ಪ್ರಾಯದ ಹಿನ್ನೆಲೆಯಲ್ಲಿ ನಗರದ ದಂಪತಿ ನ್ಯಾಯಾ ಲಯದ ಮೆಟ್ಟಿಲೇರಿ, 2 ವರ್ಷಗಳ ಹಿಂದೆ ವಿಚ್ಛೇ ದನ ಪಡೆದಿದ್ದರು. ಪತ್ನಿಗೆ ಜೀವನಾಂಶವಾಗಿ ಪತಿಗೆ ಸೇರಿದ ಅರ್ಧ ಎಕರೆ ಜಮೀನು ಕೊಡಲು ಸೂಚಿಸಲಾಗಿತ್ತು.

ಈ ಪ್ರಕರಣ ಶನಿವಾರ ಲೋಕ ಅದಾಲತ್‌ನಲ್ಲಿ ವಿಚಾರಣೆಗೆ ಬಂದಿತ್ತು. ನ್ಯಾಯವಾದಿಗಳು ಮತ್ತು ನ್ಯಾಯಾಧೀಶರು ದಂಪತಿಯನ್ನು ಮರಳಿ ಒಂದಾಗುವಂತೆ ಮನವೊಲಿಸಿದರು. ಇದನ್ನು ಮನವರಿಕೆ ಮಾಡಿಕೊಂಡ ಪತಿ-
ಪತ್ನಿ ಇಬ್ಬರೂ ಪುನಃ ಒಂದಾಗಿ ಬಾಳುವ ಇಚ್ಛೆ ವ್ಯಕ್ತಪಡಿಸಿದರು. ಇನ್ನು ಉಪ ನೋಂದಣಾಧಿಕಾರಿ ಸಮ್ಮುಖದಲ್ಲಿ ಮರು ವಿವಾಹ ನಡೆಯಲಿದೆ. ಈ ಮದುವೆಗೆ ದಂಪತಿಯ 13 ವರ್ಷದ ಪುತ್ರಿ ಸಾಕ್ಷಿಯಾಗಲಿದ್ದಾಳೆ. ಮಗಳ ಒತ್ತಾಸೆಯೇ ಅಪ್ಪ- ಅಮ್ಮ ಒಂದಾಗಲು ಕಾರಣ ಎಂದು ಹೇಳಲಾಗಿದೆ.

ಎರಡನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ನಿವೇದಿತಾ ಈ ಪ್ರಕರಣದ ವಿಚಾರಣೆ ನಡೆಸಿ, ವಿಚ್ಛೇದಿತ ದಂಪತಿ ಮರಳಿ ನವಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಂಧಾನದಲ್ಲಿ ನ್ಯಾಯವಾದಿ ಎಲ್‌.ಎಚ್‌. ಅರುಣಕುಮಾರ್‌ ಪ್ರಮುಖ ಪಾತ್ರ ವಹಿಸಿದ್ದರು.

ವಕೀಲರ ಕುಟುಂಬ ಒಂದಾಯಿತು
ವಿಜಯಪುರ: ವಿಚ್ಛೇದನ ಕೋರಿ ಇಬ್ಬರು ಮಕ್ಕಳಿರುವ ವಕೀಲರೊಬ್ಬರು ಸಲ್ಲಿಸಿದ್ದ ಪ್ರಕರಣ ನ್ಯಾಯಾ ಧೀಶರ ಮನವೊಲಿಕೆಯ ಬಳಿಕ ರಾಜಿಯಲ್ಲಿ ಮುಕ್ತಾಯವಾಗಿದೆ.

Advertisement

ಇಬ್ಬರು ಮುದ್ದಾದ ಮಕ್ಕಳ ಭವಿಷ್ಯಕ್ಕಾಗಿ ಪತಿ-ಪತ್ನಿ ಇಬ್ಬರೂ ಪ್ರತಿಷ್ಠೆ ಬಿಟ್ಟು ಒಂದಾಗಿ ಎಂದು ಲೋಕ ಅದಾಲತ್‌ನಲ್ಲಿ ನೀಡಿದ ಸಲಹೆ ಫಲ ನೀಡಿದೆ. ಪತಿ-ಪತ್ನಿಯನ್ನು ಒಗ್ಗೂಡಿಸುವುದರ ಜತೆಗೆ ಇಬ್ಬರು ಮಕ್ಕಳಿಗೆ ಒಂದೇ ಸೂರಿನಲ್ಲಿ ಹೆತ್ತವರನ್ನು ಕಾಣುವ ಅವಕಾಶ ಲಭಿಸಿದೆ.

ಪತಿ ವಕೀಲರಾಗಿದ್ದು, ಕಾನೂನಿನ ಜ್ಞಾನ ಉಳ್ಳವರು. ಹೀಗಾಗಿ ನಿಮ್ಮ ನಡೆ ಸಮಾಜಕ್ಕೆ ಮಾದರಿಯಾಗಲಿ ಎಂದು ಲೋಕ ಅದಾಲತ್‌ನಲ್ಲಿ ಸಲಹೆ ನೀಡಲಾಯಿತು.ಇದಕ್ಕೆ ಇಬ್ಬರೂ ಒಪ್ಪಿ ಮರಳಿ ಒಂದಾಗಿದ್ದಾರೆ. ಇದು ಈ ಬಾರಿಯ ಲೋಕ ಅದಾಲತ್‌ನ ವಿಶೇಷ ಎಂದು ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ನ್ಯಾಯಾ ಧೀಶ ವೆಂಕಣ್ಣ ಹೊಸಮನಿ ಉದಯವಾಣಿಗೆ ಮಾಹಿತಿ ನೀಡಿದರು.

ಮತ್ತೆ ಒಂದಾದ ದಂಪತಿ
ಮದ್ದೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಸ್ಥಳೀಯ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಶನಿವಾರ ಒಂದು ಮಾಡಿತು.

ತಾಲೂಕಿನ ಶಂಕರಪುರ ಗ್ರಾಮದ ಪುಟ್ಟಸ್ವಾಮಿ, ಉಷಾ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರಿಬ್ಬರನ್ನು ಲೋಕ ಅದಾಲತ್‌ ವೇಳೆ ಮನವೊಲಿಸಿ ಮತ್ತೆ ಒಂದುಗೂಡಿಸುವ ಜತೆಗೆ ಇಬ್ಬರಿಗೂ ನ್ಯಾಯಾಲಯದ ಆವರಣದಲ್ಲೇ ಹಾರ ಬದಲಾಯಿಸಿ, ಸಿಹಿ ವಿತರಿಸಲಾಯಿತು. ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಸಫ‌ìರಾಜ್‌ ಹುಸೇನ್‌ ಕಿತ್ತೂರು ಮತ್ತು ವಕೀಲರು ಹಾಜರಿದ್ದರು.

ತಂದೆ-ಮಗಳ ವ್ಯಾಜ್ಯ ಇತ್ಯರ್ಥ
ಮೈಸೂರು: ಅಪ್ಪ-ಮಗಳ ನಡುವೆ ಕೆಲವು ವರ್ಷಗಳಿಂದ ಇದ್ದ ವೈಮನಸ್ಸನ್ನು ಲೋಕ ಅದಾಲತ್‌ ಬಗೆಹರಿಸಿದೆ.
ತಾಯಿ ತೀರಿಕೊಂಡ ಅನಂತರ ಮಗಳ ಜವಾಬ್ದಾರಿಯನ್ನು ತಂದೆ ವಹಿಸಿಕೊಳ್ಳದೆ ಅಜ್ಜಿಯ ಮನೆಯಲ್ಲಿ ಬಿಟ್ಟು ಹೋಗಿದ್ದರು. ಇದರಿಂದ ಬೇಸತ್ತಿದ್ದ ಮಗಳು ತಂದೆಯಿಂದ ಜೀವನಾಂಶ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಪ್ರಕರಣ ಶನಿವಾರ ಅದಾಲತ್‌ ಮುಂದೆ ಬಂದಿದ್ದು, ದಿಲ್ಲಿಯಲ್ಲಿದ್ದ ತಂದೆಯನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂಪರ್ಕಿಸಿ ರಾಜಿ ಮಾಡಲಾಗಿದೆ.

50 ವರ್ಷಗಳ ಬಳಿಕ ಒಂದಾದ ದಂಪತಿ!
ಧಾರವಾಡ: ಕಲಘಟಗಿಯಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಸುಮಾರು 50 ವರ್ಷ ಗಳಿಂದ ದೂರವಾಗಿದ್ದ ಹಿರಿಯ ದಂಪತಿಯನ್ನು ಒಂದುಗೂಡಿಸಲಾಯಿತು. ಗಂಡ-ಹೆಂಡತಿಯ ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಕೌಟುಂಬಿಕ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದರು. ಯಾರು ಎಷ್ಟೇ ಹೇಳಿದರೂ ಕೇಳದೆ ಪ್ರಕರಣ ಮುಂದು ವರಿಸುವಂತೆ ಕೋರಿದ್ದ ದಂಪತಿಯನ್ನು ಒಂದಾಗಿಸು ವಲ್ಲಿ ನ್ಯಾ| ಜಿ.ಆರ್‌. ಶೆಟ್ಟರ ಮತ್ತು ವಕೀಲರಾದ ಎಸ್‌.ಆರ್‌. ಹೊಸವಕ್ಕಲ ಅವರನ್ನು ಒಳಗೊಂಡ ಲೋಕ ಅದಾಲತ್‌ ಯಶಸ್ವಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next