Advertisement
ಅಂದಹಾಗೆ ಮೋಹನ್ ಬಾಯಲ್ಲಿ ಲೋಫರ್ ಅನ್ನೋ ಪದ ಗುನುಗಲು ಕಾರಣ ಅವರ “ಲೋಫರ್ ‘ಚಿತ್ರ. ನಿಮಗೆ ನೆನಪಿರಬಹುದು ಆರಂಭದಲ್ಲಿ ಮೋಹನ್ ತಮ್ಮ ಚಿತ್ರಕ್ಕೆ “ಲೋಫರ್’ ಅನ್ನೋ ಟೈಟಲ್ ಇಟ್ಟಾಗ ಫಿಲಂ ಚೇಂಬರ್ ಈ ಟೈಟಲ್ ನೀಡಲು ನಿರಾಕರಿಸಿತ್ತು. ಆದರೆ ಅಂತಿಮವಾಗಿ ಪಟ್ಟು ಬಿಡದ ಮೋಹನ್ ಆ್ಯಂಡ್ ಟೀಮ್ ತಮ್ಮ ಚಿತ್ರಕ್ಕೆ ಲೋಫರ್ ಅನ್ನೋ ಟೈಟಲ್ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿತ್ತು. ಸುಮಾರು ಒಂದು ವರ್ಷದ ಹಿಂದೆ ಶುರುವಾದ ಈ ಚಿತ್ರದ ಕೆಲಸಗಳು ಅಂದುಕೊಂಡಂತೆ ಸರಿಯಾದ ಸಮಯಕ್ಕೆ ಮುಗಿದು, ಲೋಫರ್ ಚಿತ್ರ ಇಂದು (ಮಾ. 3) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಕುಳಿತ ನಿರ್ದೇಶಕ ಮೋಹನ್ ಮತ್ತು ನಿರ್ಮಾಪಕ ಬಿ.ಎನ್ ಗಂಗಾಧರ್ ಲೋಫರ್ ಹಿಂದಿನ ಕೆಲವು ವಿಶೇಷತೆಗಳನ್ನು ತೆರೆದಿಟ್ಟಿರು.ಆರಂಭದಲ್ಲಿ ಮೋಹನ್ ಮತ್ತು ಬಿ.ಕೆ ಗಂಗಾಧರ್ ತಮ್ಮ ಚಿತ್ರಕ್ಕೆ “ಲೋಫರ್’ ಅಂಥ ಹೆಸರಿಟ್ಟಾಗ ಅನೇಕರು, ಚಿತ್ರಕ್ಕೆ ಇಂಥ ಟೈಟಲ್ಲಾ? ಅಂಥ ಹುಬ್ಬೇರಿಸಿದ್ದು ಉಂಟಂತೆ. ಆದರೆ ಈ ಬಗ್ಗೆ ಮಾತನಾಡುವ ಮೋಹನ್, ಲೋಫರ್ ಅಂದ ತಕ್ಷಣ ಅದೊಂದು ಕೆಟ್ಟ ಪದ ಅಥವಾ ಬೈಗುಳ ಎಂದು ಹಲವರು ಭಾವಿಸುವುದುಂಟು. ಆದರೆ, ಲೋಫರ್ ಎಂಬ ಪದಕ್ಕೆ ಅಲೆಮಾರಿ ಎನ್ನುವುದು ನಿಜವಾದ ಅರ್ಥ. ಅದನ್ನ ನಾವುಗಳು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದೇವೆ ಅಷ್ಟೇ.
Related Articles
Advertisement
ಇನ್ನು ಹಿರಿಯ ನಿರ್ಮಾಪಕ ಬಿ.ಎನ್ ಗಂಗಾಧರ್ ತಮ್ಮ ಎ.ಎನ್.ಎಸ್. ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಲೋಫರ್ ಚಿತ್ರವನ್ನು ನಿರ್ಮಿಸಿದ್ದಾರೆ. ಲೋಫರ್ ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 26ನೇ ಚಿತ್ರವಾಗಿದ್ದು, ಚಿತ್ರದ ಬಗ್ಗೆ ಬಿ.ಎನ್ ಗಂಗಾಧರ್ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಾರೆ. ಚಿತ್ರ ನಾವಂದುಕೊಂಡಂತೆ ಚೆನ್ನಾಗಿ ಬಂದಿದೆ. ಇಂದಿನ ಜನರೇಷನ್, ಯುವಕರಿಗೆ ಅತ್ಯಂತ ಹತ್ತಿರವಾದ ಕಥೆ ಈ ಚಿತ್ರದಲ್ಲಿದೆ. ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುವ ಚಿತ್ರ ಇದು. ಬಹುತೇಕ ಹೊಸ ಪ್ರತಿಭೆಗಳು ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವುದು ಎಂಬ ನಂಬಿಕೆಯಿದೆ ಎನ್ನುತ್ತಾರೆ.
ಇನ್ನು ಈ ಚಿತ್ರದ ಕಥೆ ಪ್ರಮುಖವಾಗಿ ಏಳು ಜನ ಲೋಫರ್ ಗಳ (ಅಲೆಮಾರಿ) ಸುತ್ತ ನಡೆಯಲಿದೆಯಂತೆ. ಚಿತ್ರದಲ್ಲಿ ಲೋಫರ್ ಗಳಾಗಿ ಚೇತನ್, ಅರ್ಜುನ್ ಆರ್ಯ, ಮನು, ಕೆಂಪೇಗೌಡ, ಸುಷ್ಮಾ, ಸಾಕ್ಷಿ, ಶ್ರಾವ್ಯಾ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಟೆನ್ನಿಸ್ ಕೃಷ್ಣ, ಉಮೇಶ್ ಮೊದಲಾದವರು ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಲೋಫರ್ ಚಿತ್ರಕ್ಕೆ ಡಿ. ಪ್ರಸಾದ್ ಬಾಬು ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು, ದಿನೇಶ್ ಕುಮಾರ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಮೋಹನ್, ಹರ್ಷ ಸಾಹಿತ್ಯ ರಚಿಸಿದ್ದಾರೆ. ತ್ರಿಭುವನ್ ನೃತ್ಯ ಮತ್ತು ಕೌರವ ವೆಂಕಟೇಶ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಬೆಂಗಳೂರು, ಹೊಸನಗರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.