ಕಾಶ್ಮೀರಿ ಪಂಡಿತ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಹತ್ಯೆಗೈಯುತ್ತಿರುವ ಪ್ರಕರಣ ಮುಂದುವರಿದ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ವಲಸೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದು, ಈ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರದ ಜಿಲ್ಲಾಡಳಿತ ಕಾಶ್ಮೀರಿ ಪಂಡಿತ ಸಮುದಾಯ ತಮ್ಮ ಶಿಬಿರದಿಂದ ಬೇರೆಡೆ ತೆರಳದಂತೆ ನಿರ್ಬಂಧ ವಿಧಿಸಿರುವುದಾಗಿ ವರದಿ ತಿಳಿಸಿದೆ. ಪ್ರಧಾನ ಮಂತ್ರಿಗಳ ವಿಶೇಷ ಪ್ಯಾಕೇಜ್ ನಡಿ ಉದ್ಯೋಗದಲ್ಲಿರುವ ಸುಮಾರು 4,000 ಮಂದಿ ಕಾಶ್ಮೀರಿ ಪಂಡಿತರು, ಒಂದು ವೇಳೆ ಜಿಲ್ಲಾಡಳಿತ 24 ಗಂಟೆಯೊಳಗೆ ತಮ್ಮನ್ನು ಸುರಕ್ಷತ ಸ್ಥಳಕ್ಕೆ ಸ್ಥಳಾಂತರಿಸದಿದ್ದರೆ ಕಣಿವೆ ಪ್ರದೇಶದಿಂದ ವಲಸೆ ಹೋಗುವುದಾಗಿ ಬಹಿರಂಗವಾಗಿ ಎಚ್ಚರಿಕೆ ನೀಡಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಆಗುಂಬೆ ಘಾಟಿಯಲ್ಲಿ ಉರುಳಿದ ಮರ: ಕೆಲಕಾಲ ವಾಹನ ಸಂಚಾರ ಬಂದ್
ಮಂಗಳವಾರ (ಮೇ 31) ಕುಲ್ಗಾಮ್ ಜಿಲ್ಲೆಯಲ್ಲಿ ಶಾಲೆಯ ಹೊರ ಆವರಣದಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ಶಿಕ್ಷಕಿ ರಜನಿ ಬಾಲಾ ಅವರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದರು. ಏತನ್ಮಧ್ಯೆ ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್ ಅವರನ್ನು ಹತ್ಯೆಗೈದ ಬಳಿಕ ರಕ್ಷಣೆ ನೀಡುವಂತೆ ಒತ್ತಾಯಿಸಿ ಕಾಶ್ಮೀರಿ ಪಂಡಿತರು ಪ್ರತಿಭಟನೆ ನಡೆಸಿದ್ದರು.
ಸಾಮೂಹಿಕ ವಲಸೆ ಹೋಗುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ (ಜೂನ್ 01) ಕಾಶ್ಮೀರಿ ಪಂಡಿತರು ಬೇರೆಡೆ ವಲಸೆ ಹೋಗದಂತೆ ತಡೆಯಲು ಇವರು ವಾಸವಾಗಿರುವ ಶಿಬಿರದ ಸ್ಥಳಗಳ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಿ, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಶ್ರೀನಗರ ಸಮೀಪದ ಇಂದಿರಾ ನಗರದ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯದ ಹಲವಾರು ಮಂದಿ ಉದ್ಯೋಗಿಗಳು ವಾಸವಾಗಿದ್ದು, ಈ ಸ್ಥಳದ ಒಳಕ್ಕೆ ಬರುವ ಮಾರ್ಗವನ್ನು ಬಂದ್ ಮಾಡಿದ್ದು, ಯಾವೊಬ್ಬ ಕಾಶ್ಮೀರಿ ಪಂಡಿತರು ಹೊರ ಬರಲು ಅವಕಾಶ ನೀಡುತ್ತಿಲ್ಲ ಎಂದು ವರದಿ ಹೇಳಿದೆ.
ಜಮ್ಮು-ಕಾಶ್ಮೀರದಲ್ಲಿನ ವೇಸು ಪಂಡಿತ್ ಕಾಲೋನಿಯಲ್ಲಿ ನೂರಾರು ಕಾಶ್ಮೀರಿ ಪಂಡಿತ್ ಸಮುದಾಯ ಇದ್ದು, ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು. ಇದೀಗ ಕಾಶ್ಮೀರಿ ಪಂಡಿತ್ ಸಮುದಾಯ ವಾಸವಾಗಿದ್ದ ಶಿಬಿರದ ಪ್ರಮುಖ ಗೇಟ್ ಅನ್ನು ಬಂದ್ ಮಾಡಿದ್ದು, ಯಾರಿಗೂ ಹೊರಬರಲು ಅನುಮತಿ ನೀಡುತ್ತಿಲ್ಲ ಎಂದು ವರದಿ ತಿಳಿಸಿದೆ.
ಕಣಿವೆ ಪ್ರದೇಶದಲ್ಲಿ ಪರಿಸ್ಥಿತಿ ತಿಳಿಯಾಗುವವರೆಗೆ ನಮಗೆ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಿ. ನಮ್ಮನ್ನು ನಾವು ಉಳಿಸಿಕೊಳ್ಳಬೇಕಾದರೆ ನಮಗೆ ಕಣಿವೆ ಪ್ರದೇಶ ತೊರೆಯುವುದು ಅನಿವಾರ್ಯ ಎಂದು ಕಾಶ್ಮೀರಿ ಪಂಡಿತ್ ಸಮುದಾಯ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವುದಾಗಿ ವರದಿ ಹೇಳಿದೆ.
ತಮಗೆ ಸರ್ಕಾರ ಬಸ್ ವ್ಯವಸ್ಥೆ ಮಾಡಲಿ, ನಾವು ಜಮ್ಮುವಿಗೆ ವಲಸೆ ಹೋಗುತ್ತೇವೆ ಎಂದು ಕಾಶ್ಮೀರಿ ಪಂಡಿತ್ ಸಮುದಾಯ ಬೇಡಿಕೆ ಇಟ್ಟಿದೆ. ಇಂದು ಮುಂಜಾನೆಯಿಂದಲೇ ಕಾಶ್ಮೀರಿ ಪಂಡಿತ್ ಸಮುದಾಯದ ಶಿಬಿರದ ಮುಂಭಾಗದಲ್ಲಿ ಬ್ಯಾರಿಕೇಡ್ ಹಾಕಿದ್ದು, ಪ್ರತಿಯೊಂದು ವಾಹನಗಳನ್ನು ಪರಿಶೀಲಿಸುತ್ತಿರುವುದಾಗಿ ವರದಿ ತಿಳಿಸಿದೆ.