Advertisement

ಲಾಕರ್‌ ಸೇಫಾ?

12:45 PM Jan 29, 2018 | Team Udayavani |

ಅಮೂಲ್ಯ ಆಭರಣಗಳು ಹಾಗೂ ದಾಖಲೆ ಪತ್ರಗಳನ್ನು ಜೋಪಾನವಾಗಿ ಇಡಲು ಲಾಕರ್‌ಗಳನ್ನು ಉಪಯೋಗಿಸಲಾಗುತ್ತದೆ. ಇದನ್ನು ಒಬ್ಬರು ಅಥವಾ ಇನ್ನೊಬ್ಬರ ಸಂಗಡ ಜಂಟಿ ಖಾತೆ ಹೊಂದಿಯೂ ಪಡೆಯಬಹುದು. 

Advertisement

ಲಾಕರ್‌  ಬ್ಯಾಂಕ್‌ಗಳ ಆದಾಯದ ಮೂಲ.  ಒಂಥರಾ ಮನೆ ಸಾಲ, ವೈಯುಕ್ತಿಕ ಸಾಲ ಅದರ ಮೇಲೆ ವಿಧಿಸುವ ಬಡ್ಡಿಯಂತೆ ಲಾಕರ್‌ಗಳಿಂದ ಆದಾಯ ಸಿಗುತ್ತದೆ.  ಹಾಗೆಯೇ, ಗ್ರಾಹಕರಿಗೆ ನೀಡುವ ಸೇವೆಯೂ ಆಗುತ್ತದೆ. 
ಇವತ್ತು ಏರುತ್ತಿರುವ ಆರ್ಥಿಕ ಸ್ಥಿತಿಯಿಂದಾಗಿ ವಹಿವಾಟುಗಳು ಜೋರಾಗಿವೆ.  ಹಣ, ಆಭರಣ, ಆಸ್ತಿ ಪತ್ರಗಳನ್ನು ಕೇವಲ ಮನೆಯಲ್ಲಿ  ಇಟ್ಟು ಕೂರುವಷ್ಟು ನಂಬಿಕೆ ಉಳಿದಿಲ್ಲ. ಹೀಗಾಗಿ ಮೇಲ್‌ ಮಧ್ಯಮವರ್ಗ, ಶ್ರೀಮಂತರು ಲಾಕರ್‌ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಬ್ಯಾಂಕ್‌ಗಳು ಕೂಡ ಲಾಕರ್‌ಗಳ ಕಡೆ ಗಮನಹರಿಸುತ್ತಿವೆ. 

ಪ್ರತಿ ಬ್ಯಾಂಕಿನಲ್ಲೂ strong room ಇರುತ್ತದೆ. ಇಲ್ಲಿ  ಪ್ರತಿಯೊಬ್ಬ ಗ್ರಾಹಕರಿಗೆ ಒಂದೊಂದು ಅನ್ನೋ ಲೆಕ್ಕದಲ್ಲಿ ಬಾಕ್ಸ್‌ ಕೊಟ್ಟಿರುತ್ತಾರೆ.   ಸಂಬಂಧಪಟ್ಟ ಗ್ರಾಹಕರಷ್ಟೇ ಬ್ಯಾಂಕಿನ ವ್ಯವಹಾರದ ಸಮಯದಲ್ಲಿ  ಅದನ್ನು  ಆಪರೇಟ್‌ ಮಾಡಬಹುದು. ತಮ್ಮ ಬೆಳೆಬಾಳುವ ಮತ್ತು ಅಮೂಲ್ಯವಾದ ಆಭರಣ ಮತ್ತು ದಾಖಲೆಗಳ ಸುರಕ್ಷಿತೆ ದೃಷ್ಟಿಯಲ್ಲಿ, ಬ್ಯಾಂಕ್‌ ಸೇಫ್ ಡಿಪಾಸಿಟ್‌ ಲಾಕರ್‌ಗಳಿಗೆ ಗ್ರಾಹಕರಿಂದ ಅಪಾರ ಬೇಡಿಕೆ ಇದ್ದು,  ಲಾಕರ್‌ ನೀಡಿಕೆಯಲ್ಲಿ ಪಾರದರ್ಶಕತೆಯನ್ನು  ಕಾಯ್ದುಕೊಳ್ಳುವ ಉದ್ದೇಶದಿಂದಲೇ ಮೊದಲು ಬಂದವರಿಗೆ ಆದ್ಯತೆಮೇರೆಗೆ ಲಾಕರ್‌ ಕೊಡಲಾಗುವುದು.  

ಯಾರು ಅರ್ಹರು?
ಇಂಡಿಯನ್‌ ಕಾಂಟ್ರಾಕ್ಟ್ ಆ್ಯಕ್ಟ್  ಪ್ರಕಾರ, ಲಾಕರ್‌  ಸೌಲಭ್ಯ ಬ್ಯಾಂಕು ಮತ್ತು ಗ್ರಾಹಕರ ಮಧ್ಯೆ ಏರ್ಪಟ್ಟ ಒಪ್ಪಂದವಾಗಿರುತ್ತದೆ. ಆ ಬ್ಯಾಂಕಿನಲ್ಲಿ ಖಾತೆ ಇರುವವರೆಲ್ಲಾ ಈ ಸೌಲಭ್ಯವನ್ನು ಪಡೆಯಲು ಅರ್ಹರು.  ಈ ಒಪ್ಪಂದವು ಸಂಬಂಧಪಟ್ಟ ರಾಜ್ಯದ ಸ್ಟ್ಯಾಂಪ್‌ ಆಕ್ಟ್ ಪ್ರಕಾರ  ಸ್ಟ್ಯಾಂಪ್‌ ಪೇಪರ… ಮೇಲೆ ಆಗಬೇಕು. ಒಬ್ಬರ ಹೆಸರಿನಲ್ಲಿ ಅಥವಾ ಇನ್ನೊಬ್ಬರ ಸಂಗಡ ಜಂಟಿಯಾಗಿಯೂ ಸೌಲಭ್ಯವನ್ನು ಪಡೆಯಬಹುದು. ಈ ಸೇವೆಗೆ ನಾಮನಿರ್ದೇಶನದ ಅವಕಾಶವೂ ಇದ್ದು, ಈ ನಿಟ್ಟಿನಲ್ಲಿ ಲಾಕರ್‌ ಪಡೆಯುವಾಗಲೇ ನಿಖರವಾಗಿ ನಮೂದಿಸಬೇಕು. ಈ  ಸೌಲಭ್ಯ ಪಡೆಯಲು ತೀರಾ ಇತ್ತೀಚೆಗಿನ ಭಾವಚಿತ್ರ ಮತ್ತು ಮಾದರಿ  ಸಹಿಯನ್ನು ನೀಡಬೇಕು.  ಇದನ್ನು ಪ್ರತಿ ಐದು ವರ್ಷಕ್ಕೊಮ್ಮೆ   ಅಪ್‌ಡೇಟ್‌ ಮಾಡಬೇಕು.

ಲಾಕರ್‌ ಆಪರೇಷನ್‌ ಹೇಗೆ?
ಲಾಕರ್‌ ಹೋಲ್ಡರ್‌ಗೆ ಮಾತ್ರ ಲಾಕರ್‌ ಆಪರೇಷನ್‌ ಸ್ಥಳಕ್ಕೆ  ಪ್ರವೇಶಿಸಲು  ಅವಕಾಶ ಇರುತ್ತದೆ.  ಅವರು ಅನುಮತಿ ನೀಡಿದರೆ ಮಾತ್ರ ಇನ್ನೊಬ್ಬರಿಗೆ ಪ್ರವೇಶಿಸಲು ಅವಕಾಶ.  ಲಾಕರ್‌ ರೂಮನ್ನು ಪ್ರವೇಶಿಸಲು ದಾಖಲೆ ಪುಸ್ತಕದಲ್ಲಿ ಸಹಿಯೊಂದಿಗೆ  ದಿನಾಂಕ ಮತ್ತು ಸಮಯವನ್ನು, ಒಳಹೋಗುವಾಗ ಮತ್ತು ಬರುವಾಗ ನಮೂದಿಸ ಬೇಕಾಗುತ್ತದೆ. ಈ ಪ್ರವೇಶ ಬ್ಯಾಂಕಿನ ವ್ಯವಹಾರಿಕ  ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಲಾಕರ್‌ಗೆ ಎರಡು ಕೀ ಇರುತ್ತವೆ.  ಒಂದು ಬ್ಯಾಂಕ್‌ನಲ್ಲಿ, ಇನ್ನೊಂದು ಗ್ರಾಹಕರ ಬಳಿ ಇರುತ್ತದೆ.  ಲಾಕರ್‌ ತೆರೆಯವಾಗ  ಬ್ಯಾಂಕ್‌ ಅಧಿಕಾರಿ ಮತ್ತು ಗ್ರಾಹಕ ಜೊತೆಯಲ್ಲಿ ಇರಬೇಕು.

Advertisement

ಫೀ ಕಟ್ಟಬೇಕಾ?
 ಲಾಕರ್‌ ಗಳಿಗೆ ಬಾಡಿಗೆ ಬಿಟ್ಟರೆ ಇನ್ನು ಯಾವುದೇ ಶುಲ್ಕ ಇರುವುದಿಲ್ಲ.  ವರ್ಷಕ್ಕೆ  12 ಬಾರಿ ಉಚಿತವಾಗಿ ಲಾಕರ್‌ ಅನ್ನು  ಬಳಸಬಹುದು ಮತ್ತು  ಇದಕ್ಕಿಂತ ಹೆಚ್ಚನಬಾರಿ ಬಳಸಿದರೆ, ಪ್ರತಿ ಬಳಕೆಗೆ 20 ರೂಪಾಯಿ ಶುಲ್ಕ ವಿಧಿಸುವ ಯೋಜನೆಯನ್ನು ಬ್ಯಾಂಕ್‌ಗಳು ಗ್ರಾಹಕರ ಒತ್ತಾಯದ ಮೇಲೆ ಹಿಂತೆಗೆದುಕೊಂಡಿವೆ. ಹಾಗೆಯೇ ಈ ಸೌಲಭ್ಯ ದುರುಪಯೋಗವಾಗದಿರಲಿ ಎಂದು ಗ್ರಾಹಕರು  ವರ್ಷದಲ್ಲಿ ಕನಿಷ್ಠ ಎರಡು ಬಾರಿಯಾದರೂ ಲಾಕರ್‌ ಅನ್ನು ಬಳಸಬೇಕೆನ್ನುತ್ತವೆ ಬ್ಯಾಂಕ್‌ಗಳು.  ಲಾಕರ್‌ ಸೇವೆ  ಮೌಲ್ಯ ವರ್ದಿತ  ಸೇವೆ ಯಾಗಿರದೇ, ಶುಲ್ಕ  ಆಧಾರಿತ ಸೇವೆಯಾಗಿದ್ದು, ಲಾಕರ್‌ನ ವಿನ್ಯಾಸ, ಸೈಜ…, ಮತ್ತು ಲಾಕರ್‌  ಪೂರೈಕೆ  ಮಾಡಿದ  ಕಂಪನಿಗಳ ಮೇಲೆ ಅವಲಂಭಿತವಾಗಿರುತ್ತದೆ.  ಇದು ಬ್ಯಾಂಕ್‌ ನಿಂದ ಬ್ಯಾಂಕ್‌ಗೆ  ಬೇರೆಯಾಗಿರುತ್ತದೆ. ಇತ್ತೀಚೆಗಿನ ದಿನಗಳಲ್ಲಿ  ವರ್ಷ ಕ್ಕೆ  3,000 ರೂನಿಂದ ಶುರುವಾಗುತ್ತದೆ. ಸೌಲಭ್ಯದ ಆಧಾರದ ಮೇಲೆ ಬಾಡಿಗೆ ನಿಗಧಿಯಾಗುತ್ತದೆ.  ಸಾಮಾನ್ಯವಾಗಿ ಮೂರುವರ್ಷಗಳ  ಬಾಡಿಗೆಯನ್ನು ಮುಂಗಡವಾಗಿ ಇಡಬೇಕು.   ಹಾಗೆಯೇ, ವಾರ್ಷಿಕ  ಲಾಕರ್‌  ಬಾಡಿಗೆಗೆ ಸರಿದೂಗುವಂತೆ,  ಬಡ್ಡಿಬರುವ ಸ್ಥಿರ ಠೇವಣಿಯನ್ನೂ  ತೆಗೆದುಕೊಳ್ಳಲಾಗುತ್ತದೆ.  ಈ ಠೇವಣಿ ಕಡ್ಡಾಯವೇನಲ್ಲ.  
ಲಾಕರ್‌ ಬಾಡಿಗೆ  ಮೂರು ತಿಂಗಳಿಗಿಂತ ಹೆಚ್ಚು ದಿನಗಳು ಬಾಕಿ ಇದ್ದರೆ, ಬ್ಯಾಂಕಿನವರು ಗ್ರಾಹಕನಿಗೆ  ರಿಜಿಸ್ಟರ್ಡ್‌ ನೋಟೀಸು  ಕಳುಹಿಸಿ, ಸಮಂಜಸ  ಉತ್ತರ ಬರದಿದ್ದರೆ, ಬ್ಯಾಂಕಿನ ಅಧಿಕಾರಿಗಳು ಮತ್ತು  ಬ್ಯಾಂಕಿನ ಮೂವರು ಪ್ರತಿಷ್ಟಿತ   ಗ್ರಾಹಕರ ಸಮಕ್ಷಮದಲ್ಲಿ ಲಾಕರ್‌ ಅನ್ನು ತೆರೆಯಲಾಗುವುದು.

ಏನೇನು ಇಡಬಹುದು?
ಇಲ್ಲಿ ಇಡಬಹುದಾದ  ವಸ್ತುಗಳ ಬಗೆಗೆ ಬ್ಯಾಂಕಿನವರ ನಿಯಂತ್ರಣ  ಇರುವುದಿಲ್ಲ. ಆದರೆ, ನಿಯಮಾವಳಿಯ ಪ್ರಕಾರ ಬೆಳ್ಳಿ- ಬಂಗಾರದ ಆಭರಣಗಳನ್ನು, ಮಹತ್ವದ ಕಾಗದ ಪತ್ರಗಳನ್ನು  ಮಾತ್ರ ಇಡಬಹುದು.  ಚಿನ್ನದ ಗಟ್ಟಿ, ಬಿಸ್ಕೇಟ್ಸ್‌, ರಾಸಾಯನಿಕ ವಸ್ತುಗಳು, ನ್ಪೋಟಕಗಳು, ಆಯುಧಗಳು ಮತ್ತು ಕರೆನ್ಸಿ ನೋಟುಗಳನ್ನು ಇಡಲು ಅವಕಾಶವಿಲ್ಲ.

ರಾಮಸ್ವಾಮಿ ಕೆ. 

Advertisement

Udayavani is now on Telegram. Click here to join our channel and stay updated with the latest news.

Next