ಮಾದನ ಹಿಪ್ಪರಗಿ: ಶಿಕ್ಷಕರ ಕೊರತೆ ಮತ್ತು ಮಕ್ಕಳ ಶಿಕ್ಷಣ ಗುಣಮಟ್ಟ ಕುಸಿದಿದೆ ಎಂದು ಆರೋಪಿಸಿ ಇಕ್ಕಳಕಿ ಸರಕಾರಿ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಬೀಗ ಹಾಕಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಬಿಇಒ ಗುರಣ್ಣ ಗುಂಡಗುರ್ತಿ ಅವರು ಗ್ರಾಮದಲ್ಲಿ ಎಷ್ಟು ಟಿವಿಗಳಿವೆ ಎಂಬುದರ ಬಗ್ಗೆ ವರದಿ ನೀಡುವಂತೆ ಆದೇಶಿಸಿದ ಪ್ರಸಂಗ ಸೋಮವಾರ ನಡೆಯಿತು.
ಶಾಲೆಯಲ್ಲಿ 1ರಿಂದ 8ನೇ ತರಗತಿ ಮಕ್ಕಳಿಗೆ ಕೇವಲ ಮೂವರು ಶಿಕ್ಷಕರಿದ್ದಾರೆ. ಇದ್ದ ಶಿಕ್ಷಕರು ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಹೀಗಾಗಿ ಮಕ್ಕಳ ಶಿಕ್ಷಣ ಗುಣಮಟ್ಟ ಕುಸಿದಿದೆ. ಶಾಲೆಯಲ್ಲಿ ಬಿಸಿಯೂಟಕ್ಕೆ ಅಕ್ಕಿ ಪೂರೈಸುತ್ತಿಲ್ಲ. ಶಾಲೆಯಲ್ಲಿ ಸ್ವತ್ಛತೆ ಇಲ್ಲ. ಮಳೆ ಬಂದರೆ ಕೋಣೆಗಳು ಸೋರುತ್ತಿವೆ ಎಂದು ಆರೋಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರಣ್ಣ ಗುಂಡಗುರ್ತಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಆಗ ಶಿಕ್ಷಣಾಧಿಕಾರಿಗಳು, ಶಿಕ್ಷಕರೊಬ್ಬರನ್ನು ಕರೆದು ಗ್ರಾಮದಲ್ಲಿ ಎಷ್ಟು ಕಲರ್ ಟಿವಿಗಳಿವೆ ಎಂಬುದರ ಬಗ್ಗ ನನಗೆ ನಾಳೆಯೇ ವರದಿ ಕೊಡುವಂತೆ ಆದೇಶಿಸಿದರು. ಆಗ ಗ್ರಾಮಸ್ಥರು, ಟಿವಿಗೂ, ನಮ್ಮೂರಿನ ಶಾಲೆ ಸಮಸ್ಯೆಗಳಿಗೂ ಏನ್ರಿ ಸಂಬಂಧ ಎಂದು ಪ್ರಶ್ನಿಸಿದರು. ನಿಮ್ಮ ಮನೆಯಲ್ಲಿ ಟಿವಿ ಇರಬಹುದು.
ಹಾಗಾಗಿ ಮಕ್ಕಳು ಓದುತ್ತಿಲ್ಲ ಎಂದು ಬಿಇಒ ಹೇಳಿದಾಗ, ನಮ್ಮ ಗ್ರಾಮದ ಮನೆಗಳಲ್ಲಷ್ಟೇ ಟಿವಿಗಳಿಲ್ಲ. ಸುತ್ತಮುತ್ತಲಿನ ಎಲ್ಲ ಗ್ರಾಮಗಳ, ನಗರಗಳ ಮನೆಗಳಲ್ಲಿ ಟಿವಿಗಳಿವೆ. ಅಲ್ಲಿಯ ಮಕ್ಕಳು ಕೂಡ ದಡ್ಡರೇ ಎಂದು ಮರು ಪ್ರಶ್ನಿಸಿದರು. ಸರಿಯಾಗಿ ಅಭ್ಯಾಸ ಮಾಡುವಂತೆ ಪಾಲಕರು ಮಕ್ಕಳಿಗೆ ಹೇಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದರು.
ಹಾಗಾದರೆ ನಿಮ್ಮ ಶಿಕ್ಷಕರ ಕರ್ತವ್ಯ ಏನು? ಸುಮ್ಮನೆ ಸರಕಾರದ ಪಗಾರ ತೆಗೆದುಕೊಳ್ಳಲೇನು? ಸಾಲಿ ಕಲಿಯರಿ ಎಂದು ನಮ್ಮ ಮಕ್ಕಳಿಗೆ ನಾವು ಹೇಳಿ ಕೆಲಸ ಮಾಡಲು ಅಡವಿಗೆ ಹೋಗುತ್ತೇವೆ. ನಿಮ್ಮ ಜವಾಬ್ದಾರಿ ಏನು? ಮಕ್ಕಳಿಗೆ ತಿಂಗಳ ಕಿರುಪರೀಕ್ಷೆ ತೆಗೆದುಕೊಂಡಿಲ್ಲ. ಮೌಲ್ಯಮಾಪನ ನಡೆಸಿಲ್ಲ ಎಂದು ತರಾಟೆಗೆ ತಗೆದುಕೊಂಡರು. ನಂತರ ಗ್ರಾಮಸ್ಥರ ಪರವಾಗಿ ಮಾತನಾಡಿದ ಭೀಮಾಶಂಕರ ಕದಂ, ಇಲ್ಲಿರುವ ಶಿಕ್ಷಕರನ್ನು ಬೇರೆಡೆ ವರ್ಗ ಮಾಡಬೇಕು. ಬೇರೆ ಶಿಕ್ಷಕರನ್ನು ಕರೆಯಿಸಿಕೊಳ್ಳಬೇಕು.
ಶಾಲೆ ಸಮಸ್ಯೆಗಳನ್ನು ಕೂಡಲೇ ಬಗಹರಿಸಬೇಕು ಎಂದು ಆಗ್ರಸಿದರು. ಎಸ್‌ಡಿಎಂಸಿ ಅಧ್ಯಕ್ಷ ಅಪ್ಪಾಸಾಬ ಶೇಳಕೆ, ಗ್ರಾಪಂ ಸದಸ್ಯ ಗುರಣ್ಣ ಕಾಬಡೆ, ಮುಖಂಡರಾದ ಅಮೃತ ಪಾಟೀಲ, ಸಿದ್ದರಾಮ ಶೇಳಕೆ, ನಾಗಣ್ಣ ಅಮ್ಮಾಣೆ ಇದ್ದರು. ಎಲ್ಲ ಮಾತಕತೆ-ವಾದ ಪ್ರತಿವಾದ ಮುಗಿದ ಬಳಿಕ 12:00ಕ್ಕೆ ಶಾಲೆ ಬೀಗ ತೆರೆಯಲಾಯಿತು.