ಬಾಗಲಕೋಟೆ: ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದ ಜಿಲ್ಲೆಯ ಜನರು, ಈ ಬಾರಿ ಕೋವಿಡ್ ನಿಯಂತ್ರಣಕ್ಕಾಗಿ ಹೇರಿದ ಲಾಕ್‌ಡೌನ್‌ದಿಂದ ನೀರಿನ ಸಮಸ್ಯೆಯಿಂದ ಮುಕ್ತಿಯಾಗಿದ್ದಾರೆ. ಹೌದು. ಕಳೆದ ಮಾರ್ಚ್ 24ರಿಂದ ಆರಂಭಗೊಂಡ ಲಾಕ್‌ಡೌನ್ ಮೇ 3ರ ಬಳಿಕ
ಕೊಂಚ ಸಡಿಲಿಕೆಯಾಗಿದೆ. ಪ್ರತಿವರ್ಷ ಮಾರ್ಚ್ ಕೊನೆಯ ವಾರದಿಂದ ಮೇ ತಿಂಗಳ ಅಂತ್ಯದವರೆಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಜಿಲ್ಲೆಯಲ್ಲಿ
ತಲೆದೋರುತ್ತಿತ್ತು. ಆದರೆ ಲಾಕ್‌ಡೌನ್‌ದಿಂದ ಜನರು ಮನೆ ಬಿಟ್ಟು ಹೊರಗೆ ಬಂದಿಲ್ಲ. ಅದಲ್ಲದೇ ನೀರಿನ ಮಿತ ಬಳಕೆ ಕೊರತೆಯನ್ನು ನೀಗಿಸಿದೆ. ಅಲ್ಲದೇ ಎಲ್ಲ ಹೊಟೇಲ್‌ಗಳು, ಉದ್ಯಮಗಳೂ ಈ ವೇಳೆ ಬಂದ್ ಇರುವುದರಿಂದ ನೀರು ಬಳಕೆ ಕಡಿಮೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರವಾಹದಿಂದ ಅಂತರ್ಜಲ ಹೆಚ್ಚಳ: ಕಳೆದ ವರ್ಷ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ತುಂಬಿ ಹರಿಯುವ ಜತೆಗೆ ಜಿಲ್ಲೆಯಲ್ಲೂ ವಾಡಿಕೆಗಿಂತ
ಹೆಚ್ಚಿನ ಮಳೆಯಾಗಿತ್ತು. ಇದರ ಪರಿಣಾಮ, ಮೂರು ವರ್ಷಗಳ ಬರದಿಂದ ಬತ್ತಿದ್ದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗಿದೆ. ತೆರೆದ
ಬಾವಿ, ಕೊಳವೆ ಬಾವಿ, ಜಿಲ್ಲೆಯಲ್ಲಿ ಸರ್ಕಾರದಿಂದ ಕೊರೆಸಿದ ಸುಮಾರು 8 ಸಾವಿರ ಕೊಳವೆ ಬಾವಿ, ಖಾಸಗಿಯಾಗಿ ಇರುವ ಸುಮಾರು 1200ಕ್ಕೂ ಹೆಚ್ಚು
ಕೊಳವೆ ಬಾವಿಗಳಲ್ಲಿ ನೀರು ಬತ್ತಿಲ್ಲ. ಪ್ರವಾಹದಿಂದ ಜಿಲ್ಲೆಯಲ್ಲಿ ಪಾತಾಳಕ್ಕಿಳಿದಿದ್ದ ಅಂತರ್ಜಲವೂ ಹೆಚ್ಚಳವಾಗಿದೆ.
ಲಾಕ್‌ಡೌನ್‌ದಿಂದ ನೀರು ಬಳಕೆಯೂ ಡೌನ್: ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಜಿಲ್ಲೆಗೆ ಕನಿಷ್ಠ 6ರಿಂದ 13 ಕೋಟಿ ಅನುದಾನ ನೀಡುತ್ತಿತ್ತು. ಈ ಅನುದಾನದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೊಳ್ಳುವ ಬದಲು, ಕಂಡಲೆಲ್ಲ ಕೊಳವೆ ಬಾವಿ ಕೊರೆಸುವ ಪರಂಪರೆ ನಡೆಯುತ್ತಿತ್ತು ಹೊರತು ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿರಲಿಲ್ಲ. ಪ್ರತಿವರ್ಷ ಶಾಸಕರು, ಜಿಪಂ ಸದಸ್ಯರು, ತಮ್ಮ ತಮ್ಮ ಕ್ಷೇತ್ರದಲ್ಲಿ ಕೊಳವೆ ಬಾವಿ ಕೊರೆಸಿ ಎಂದು ಜಿಲ್ಲಾಧಿಕಾರಿಗೆ ದುಂಬಾಲು ಬೀಳುತ್ತಿದ್ದರು. ಈ ಬಾರಿ ಇಂತಹ ಪರಿಸ್ಥಿತಿ ಬಂದಿಲ್ಲ. ಜಿಲ್ಲೆಯಲ್ಲಿ ಈ ವರ್ಷ ಒಂದೇ ಒಂದು ಕೊಳವೆ ಬಾವಿಯೂ ಕೊರೆಸಿಲ್ಲ.
18 ಲಕ್ಷ ಜನಸಂಖ್ಯೆ: 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 18.89 ಲಕ್ಷ ಜನಸಂಖ್ಯೆ ಇದೆ. 10 ವರ್ಷಗಳ ಅವಧಿಯಲ್ಲಿ ಶೇ.12ಜನಸಂಖ್ಯೆ ಹೆಚ್ಚಳವಾಗಿರುತ್ತದೆ ಎಂಬುದು ಒಂದು ಲೆಕ್ಕಾಚಾರ. ಹಾಗಾದರೆ, ಸದ್ಯ ಜಿಲ್ಲೆಯಲ್ಲಿ 20ರಿಂದ 21ಲಕ್ಷ ಜನಸಂಖ್ಯೆ ಇದೆ. ಅದರಲ್ಲಿ ಪ್ರತಿವರ್ಷ ದುಡಿಯಲು ಮಹಾರಾಷ್ಟ್ರ, ಗೋವಾ, ಮಂಗಳೂರು, ಬೆಂಗಳೂರು, ಮುಂಬೈ ಹೀಗೆ ಹಲವೆಡೆ ದುಡಿಯಲು ಹೋಗುತ್ತಿದ್ದ 31ಸಾವಿರ ಜನರು ಮರಳಿ ಬಂದಿದ್ದಾರೆ. ಆದರೂ, ಜಿಲ್ಲೆಯಲ್ಲಿ ಈ
ಬಾರಿ ಕುಡಿಯುವ ನೀರಿನ ಸಮಸ್ಯೆ ಬಾರದಿರಲು ಕೊರೊನಾ ಲಾಕ್‌ಡೌನ್ ಕೂಡ ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ 662 ಗ್ರಾಮಗಳಿದ್ದು, 39 ಎಂವಿಎಸ್ ಅಡಿ 324 ಹಳ್ಳಿಗೆ ನೀರು ಕೊಡಲಾಗುತ್ತಿದೆ. ಉಳಿದೆಡೆ ಎಸ್‌ವಿಎಸ್‌ನಡಿ ನೀರು ಪೂರೈಕೆ ಇದೆ. ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಅಂತರ್ಜಲ ಹೆಚ್ಚಳವಾಗಿದ್ದು, ಜಿಲ್ಲೆಯಲ್ಲಿರುವ ಸುಮಾರು 8 ಸಾವಿರಕ್ಕೂ ಹೆಚ್ಚಿನ ಕೊಳವೆ ಬಾವಿಗಳು ಬತ್ತಿಲ್ಲ. ಲಾಕ್‌ಡೌನ್ ಹಿನ್ನೆಲೆ ಜನರು ಮನೆಯಲ್ಲೇ ಇರುವುದರಿಂದ ನೀರನ್ನು ಮಿತವಾಗಿ ಬಳಸಿದ್ದಾರೆ. ಹೀಗಾಗಿ ಈ ಬಾರಿ ನೀರಿನ ಸಮಸ್ಯೆ ಬಂದಿಲ್ಲ. ಆರ್.ಎನ್. ಪುರೋಹಿತ, ಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ