ದಾವಣಗೆರೆ: ಕೋವಿಡ್ 19 ವೈರಸ್ ತಡೆಗಟ್ಟುವ ಉದ್ದೇಶದಿಂದ ಜಾರಿಯಲ್ಲಿರುವ ಲಾಕ್‌ಡೌನ್ ಪರಿಣಾಮಕಾರಿಯಾಗಿ ಪಾಲನೆ ಮಾಡಲೇಬೇಕು. ಲಾಕ್‌ಡೌನ್ ಮೀರಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಎಚ್ಚರಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣದಲ್ಲಿದೆ ಎಂದು ಯಾರಾದರೂ ಅನಾವಶ್ಯಕವಾಗಿ ಓಡಾಡುವುದು, ಗುಂಪು ಸೇರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹೋದಲ್ಲಿ ಖಂಡಿತವಾಗಿಯೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ. ಏನೂ ಆಗಿಲ್ಲ ಎಂಬ ಖುಷಿಯಿಂದ ಹೊರಗೆ ಅಡ್ಡಾಡುವುದನ್ನು ನಿಲ್ಲಿಸಬೇಕು. ಲಾಕ್ ಡೌನ್ ಉಲ್ಲಂಘನೆ ಮಾಡಿದವರು ವಿರುದ್ಧ ಖಂಡಿತವಾಗಿಯೂ ಅತಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಮನೆಯಿಂದ ಹೊರ ಬರಬೇಕು. ಪಾಸ್ ಗಳನ್ನು ಸಹ ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಬಾರದು. ಪಾಸ್ ಇದೆ ಎಂದು ಅನಾವಶ್ಯಕವಾಗಿಯೂ ಓಡಾಡಬಾರದು. ಎಲ್ಲರೂ ಲಾಕ್‌ಡೌನ್‌ನ್ನು ಇನ್ನೂ ಪರಿಣಾಮಕಾರಿಯಾಗಿ ಪಾಲನೆ ಮಾಡಲೇಬೇಕು. ಭಾನುವಾರ ಲಾಕ್‌ಡೌನ್ ನಡುವೆಯೂ ಗೆಳತಿಯನ್ನು ಡ್ರಾಪ್ ಮಾಡಲಿಕ್ಕೆ ಬಂದವರ ಕಾರು, ಶೌಚಕ್ಕೆಂದು ಹೊರ ಬಂದವರ ಬೈಕ್ ಕೀ ವಶಕ್ಕೆ ತೆಗೆದುಕೊಳ್ಳಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ 2 ತಿಂಗಳ ಪಡಿತರ ವಿತರಣೆಯಲ್ಲಿ ಏನಾದರೂ ಲೋಪ ಆಗಿದ್ದಲ್ಲಿ ಸಂಬಂಧಿತರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಪಡಿತರ ಚೀಟಿ ಇಲ್ಲದಂತಹವರಿಗೆ ದಾನಿಗಳು ನೀಡಿದ ದವಸ-ಧಾನ್ಯ, ಅಗತ್ಯ ಸಾಮಗ್ರಿ ವಿತರಣೆ ಮಾಡಲಾಗುವುದು. ಸಾರ್ವಜನಿಕರು ಅಗತ್ಯ ವಸ್ತುಗಳ ವಿತರಣೆಗೆ ಮುಂದೆ ಬರಬೇಕು. ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಮಾತನಾಡಿ, ಲಾಕ್ ಡೌನ್‌ನ್ನು ಈವರೆಗೆ ಪರಿಣಾಮಕಾರಿಯಾಗಿ ಜಾರಿ ಮಾಡಲಾಗಿದೆ. ಒಟ್ಟಾರೆ ಅವಧಿ ಮುಗಿಯುವ ತನಕ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು. ಅಗತ್ಯ ವಸ್ತುಗಳ ಪೂರೈಕೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಂಡಿದೆ. ಸಂಘ-ಸಂಸ್ಥೆಗಳವರು ಅಗತ್ಯ ವಸ್ತುಗಳ ನೀಡುತ್ತಿದ್ದಾರೆ. ಸಾರ್ವಜನಿಕರು ಅನಗತ್ಯವಾಗಿ ಓಡಾಡಬಾರದು ಎಂದು ಎಚ್ಚರಿಸಿದರು.
ಕಳೆದ 2-3 ದಿನಗಳಿಂದ ಅನಗತ್ಯವಾಗಿ ಓಡಾಡುವರ ವಾಹನ ವಶಕ್ಕೆ ಪಡೆದು, ವಿವಿಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಭಾನುವಾರವೂ ಆ ಕಾರ್ಯ ಮುಂದುವರೆದಿದೆ. ಅರಿವು ಮೂಡಿಸುವ ಉದ್ದೇಶದಿಂದ ವಾಹನ ವಶಕ್ಕೆ ಪಡೆಯಲಾಗುತ್ತಿದೆ. ಸಾರ್ವಜನಿಕರು ಲಾಕ್ ಡೌನ್ ಮುಗಿಯುವ ತನಕ ಅನಗತ್ಯವಾಗಿ ಓಡಾಡುವುದನ್ನ ನಿಲ್ಲಿಸಬೇಕು ಎಂದರು.