ಬಾಗಲಕೋಟೆ: ಕೋವಿಡ್ 19 ದಿಂದ ಮೃತಪಟ್ಟ ವ್ಯಕ್ತಿ ವಾಸಿಸುತ್ತಿದ್ದ ಪ್ರದೇಶದ ಸುತ್ತಮುತ್ತಲಿನ ವ್ಯಾಪ್ತಿಯ 0.5 ಕಿಮೀ ಪ್ರದೇಶದಲ್ಲಿ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕರು ಮನೆ ಬಿಟ್ಟು ಹೊರಬರಬಾರದು. ಜಿಲ್ಲೆಯಾದ್ಯಂತ ಲಾಕ್‌ಡೌನ್ ಕಠಿಣಗೊಳಿಸಲಾಗುವುದು. ಮನೆಯಿಂದ ಯಾರೆ ಹೊರಬಂದರೂ ನೇರವಾಗಿ ಜೈಲಿಗೆ ಕಳುಹಿಸುವ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕ್ಯಾಪ್ಟನ್ ಡಾ| ಕೆ.ರಾಜೇಂದ್ರ ಮತ್ತು ಎಸ್ಪಿ ಲೋಕೇಶ ಜಗಲಾಸರ ಎಚ್ಚರಿಕೆ ನೀಡಿದರು.
ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾಡಲಾಗಿದ್ದು, ಅಲ್ಲಿರುವ ರೋಗಿಗಳನ್ನು ಹಳೇ ಬಾಗಲಕೋಟೆಯಲ್ಲಿರುವ 50 ಹಾಸಿಗೆಯ ಆಸ್ಪತ್ರೆ ಹಾಗೂ ಕುಮಾರೇಶ್ವರ ಆಸ್ಪತ್ರೆಗೆ ರವಾನಿಸಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ವ್ಯಕ್ತಿಯ ಮನೆಯ 6 ಜನ ಹಾಗೂ ಅವರ ಮನೆಯವರೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರು ಸೇರಿ ಒಟ್ಟು 10 ಜನ ಗಂಟಲು ಮಾದರಿ ಹಾಗೂ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ವೃದ್ಧನೊಂದಿಗೆ ಸಂಪರ್ಕ- ಭೇಟಿ ಮಾಡಿ: ಮೃತ ವ್ಯಕ್ತಿತಯೊಂದಿಗೆ ಕಳೆದ 15 ದಿನಗಳಲ್ಲಿ ಯಾರು ಸಂಪರ್ಕ ಹೊಂದಿದ್ದಾರೆಯೋ ಅವರನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೇ ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸಿದವರು ಸ್ವಯಂ ಪ್ರೇರಿತರಾಗಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ (9449843160) ಅವರನ್ನು ಕೂಡಲೇ ಸಂಪರ್ಕಿಸಿ ಮಾಹಿತಿ ನೀಡುವಂತೆ ಮನವಿ ಮಾಡಿದರು. ಡಯಾಲಿಸಿಸ್‌ಮಾಡುವಂತ ರೋಗಿಗಳನ್ನು ಕುಮಾರೇಶ್ವರ, ಸುಭಾಸ ಮತ್ತು ಕೆರೂಡಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಎಸ್ಪಿ ಲೋಕೇಶ ಜಗಲಾಸರ ಮಾತನಾಡಿ, ಸೋಂಕಿತ ವ್ಯಕ್ತಿಯು ವಾಸಿಸುವ ಸುತ್ತಮುತ್ತಲಿನ 0.5 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಶೀಲ್ ಮಾಡಲಾಗಿದೆ ಎಂದರು.
ವೃದ್ಧನ ಮಕ್ಕಳ ತಪಾಸಣೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ. ಎನ್.ದೇಸಾಯಿ ಮಾತನಾಡಿ, ಸೋಂಕಿತ ವ್ಯಕ್ತಿಯ ಮಗ ಮತ್ತು ಮಗಳು ಕಳೆದ 10 ದಿನಗಳಿಂದ ಬೆಂಗಳೂರಿನಿಂದ ಬಂದಿದ್ದು, ಲಕ್ಷಣಗಳು ಕಂಡುಬರದೇ ಇದ್ದರೂ ಸಹ ಆ ಇಬ್ಬರ ಸ್ಯಾಂಪಲ್‌ಗಳು ಸೇರಿ ಮನೆಯಲ್ಲಿದ್ದ ಇತರೆ 3 ಜನರ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.