Advertisement

ಲಾಕ್‌ಡೌನ್‌: ಸಂಕಷ್ಟದಲ್ಲಿ ಹೊಟೇಲ್‌ ಉದ್ಯಮ

10:03 PM Apr 26, 2020 | Sriram |

ವಿಶೇಷ ವರದಿ-ಮಂಗಳೂರು: ಕೋವಿಡ್ 19 ಆತಂಕ ಎಲ್ಲೆಡೆ ಇದ್ದು, ಉದ್ಯಮದ ಹಂಗಾಮು ಅವಧಿಯಲ್ಲಿ ಹೊಟೇಲ್‌ ಉದ್ಯಮ ನಷ್ಟದ ಸುಳಿಯಲ್ಲಿ ಸಿಲುಕಿದೆ.

Advertisement

ದ.ಕ. ಜಿಲ್ಲೆಯು ಕೋವಿಡ್ 19 ಮುಕ್ತವಾಗುತ್ತದೆ ಎನ್ನುವಷ್ಟರಲ್ಲಿಯೇ ಮತ್ತಷ್ಟು ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸಾವು ಕೂಡ ಸಂಭವಿಸಿದೆ. ಇದೇ ಕಾರಣಕ್ಕೆ ಜಿಲ್ಲೆ ಸದ್ಯ ರೆಡ್‌ ಝೋನ್‌ನಲ್ಲಿದ್ದು, ಇನ್ನೂ ಕೆಲವು ದಿನಗಳವರೆಗೆ ಲಾಕ್‌ಡೌನ್‌ನಿಂದ ವಿನಾಯಿತಿ ಸಿಗುವುದು ಅನುಮಾನ. ಇದೇ ಕಾರಣಕ್ಕೆ ಹೊಟೇಲ್‌ ಉದ್ಯಮವನ್ನೇ ನಂಬಿಕೊಂಡಿದ್ದ ನೂರಾರು ಮಂದಿ ಉದ್ಯಮಿಗಳು ಈಗ ಸಂಕಷ್ಟದ ಸುಳಿಯಲ್ಲಿದ್ದಾರೆ.

ಎಪ್ರಿಲ್‌,ಮೇ ಎಂದರೆ ಸಾಮಾನ್ಯವಾಗಿ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ರಾಜ್ಯ ಸಹಿತ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ದ.ಕ. ಜಿಲ್ಲೆಯ ಬೀಚ್‌, ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಹೀಗಿದ್ದಾಗ ಹೊಟೇಲ್‌ಗ‌ಳಲ್ಲಿ ಹೆಚ್ಚು ವ್ಯಾಪಾರ ನಡೆಯುತ್ತದೆ. ಈಗ ಕೋವಿಡ್ 19ದಿಂದಾಗಿ ಕಳೆದ ಒಂದು ತಿಂಗಳಿನಿಂದ ಹೊಟೇಲ್‌ಗ‌ಳಿಗೆ ಬಾಗಿಲು ಹಾಕಲಾಗಿದೆ. ಸದ್ಯ ಮಂಗಳೂರಿನ ಕೆಲವೊಂದು ಹೊಟೇಲ್‌ಗ‌ಳಲ್ಲಿ ಆನ್‌ಲೈನ್‌ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು, ಕೆಲವು ಕಡೆ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ. ಹೊಟೇಲ್‌ಗ‌ಳಲ್ಲಿ ಕೆಲವೊಂದು ತಿಂಡಿಗಳಲ್ಲಿ ಮಾತ್ರ ಆಯ್ಕೆ ಇದೆ. ಹೊಟೇಲ್‌ಗ‌ಳಲ್ಲಿ ಈ ಹಿಂದಿನ ದಿನಗಳ ವ್ಯವಹಾರಗಳಿಗೆ ಹೋಲಿಕೆ ಮಾಡಿದರೆ ದಿನದ ವ್ಯವಹಾರವು ಶೇ. 90ರಷ್ಟು ಕಡಿಮೆ ಇದೆ ಎನ್ನುತ್ತಾರೆ ನಗರದ ಹೊಟೇಲ್‌ನ ಮಾಲಕರೊಬ್ಬರು.

ಮದುವೆ ಸಮಾರಂಭ, ಹುಟ್ಟುಹಬ್ಬ ಆಚರಣೆ, ಪಾರ್ಟಿ ಸಹಿತ ಐಷಾರಾಮಿ ಸಮಾರಂಭಗಳು ಹೊಟೇಲ್‌ಗ‌ಳ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಡೆಯುತ್ತದೆ. ಕೊರೊನಾದಿಂದಾಗಿ ಅವೆಲ್ಲಕ್ಕೂ ಈಗ ತೆರೆ ಬಿದ್ದಿದೆ.

ಶೀಘ್ರ ಚೇತರಿಕೆ ಕಷ್ಟ
ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದರೂ ಕೆಲವು ನಿರ್ಬಂಧಗಳು ಮುಂದುವರಿಯುವ ಸಾಧ್ಯತೆ ಇದೆ. ಅದಲ್ಲದೆ ತತ್‌ಕ್ಷಣಕ್ಕೆ ಅಂತರ್‌ ಜಿಲ್ಲಾ, ಅಂತಾರಾಜ್ಯ ಸಾರಿಗೆ ಸೌಲಭ್ಯ ಆರಂಭವಾಗುವ ಸಂಭವ ಕೂಡ ಕಡಿಮೆ. ಇವೆಲ್ಲವೂ ಒಟ್ಟು ವ್ಯವಹಾರದ ಮೇಲೆ ದೀರ್ಘ‌ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು ಎನ್ನುತ್ತಾರೆ.

Advertisement

 ಲಾಕ್‌ಡೌನ್‌ ಅನಿಶ್ಚಿತತೆ
ಮೇ 3ರ ಬಳಿಕ ಹೊಟೇಲ್‌ ಉದ್ಯಮಕ್ಕೆ ವಿನಾಯಿತಿ ಸಿಗುತ್ತದೆ ಎಂಬ ಭರವಸೆ ಇದೆ. ಉದ್ಯಮ ನಷ್ಟದಲ್ಲಿದ್ದರೂ ಸರಕಾರಕ್ಕೆ ತೆರಿಗೆ ಕಟ್ಟಲೇಬೇಕು. ಕಟ್ಟಡ, ಲಿಕ್ಕರ್‌ ಪರವಾನಿಗೆ ನವೀಕರಣ, ಪ್ರಾಪರ್ಟಿ ಟ್ಯಾಕ್ಸ್‌, ಘನತ್ಯಾಜ್ಯ ತೆರಿಗೆ ಸಹಿತ ಲಕ್ಷಗಟ್ಟಲೆ ತೆರಿಗೆ ಕಟ್ಟಬೇಕು. ಸರಕಾರ ಇವುಗಳನ್ನು ಮನ್ನಾ ಮಾಡಬೇಕು. ಲಾಕ್‌ಡೌನ್‌ ಪೂರ್ಣಗೊಂಡರೂ ಹೊಟೇಲ್‌ ಉದ್ಯಮ ಚೇತರಿಕೆ ಕಾಣಲು ಕೆಲವೊಂದು ಸಮಯ ಬೇಕು.
 -ಕುಡಿ³ ಜಗದೀಶ್‌ ಶೆಣೈ, ಹೊಟೇಲ್‌ ಮಾಲಕರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next