ಬೆಂಗಳೂರು: ಲಾಕ್‌ಡೌನ್‌ನಿಂದ ಹೆಚ್ಚು ಮಾನಸಿಕ ಖನ್ನತೆಗೆ ಒಳಗಾದವರು ಯಾರು? ಮದ್ಯವ್ಯಸನಿಗಳಾ ಅಥವಾ ಟೆಕ್ಕಿಗಳಾ? -ನಿಮ್ಹಾನ್ಸ್ ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ತೆರೆದ ಸಹಾಯವಾಣಿಗೆ ಬಂದ ಕರೆಗಳನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ ನಗರದ ಟೆಕ್ಕಿಗಳು ಲಾಕ್‌ಡೌನ್‌ನಿಂದ ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಮಾರ್ಚ್ 30ರಿಂದ ಈಚೆಗೆ ಅಂದರೆ ಕಳೆದೊಂದು ವಾರದಲ್ಲಿ ಈ ಸಹಾಯವಾಣಿಗೆ ಹತ್ತು ಸಾವಿರಕ್ಕೂ ಅಧಿಕ ಕರೆಗಳು ಬಂದಿವೆ. ಆ ಪೈಕಿ ಅಂದಾಜು ಶೇ. 60ರಷ್ಟು ಕರೆಗಳು ಐಟಿ ಕ್ಷೇತ್ರದಲ್ಲಿ ಉದ್ಯೋಗಸ್ಥರದ್ದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಚಿಕ್ಕ ಕುಟುಂಬಗಳು, ಅದರಲ್ಲೂ ಏಕಾಏಕಿ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಪತಿ-ಪತ್ನಿಯರೂ ಬೇರೆ ಬೇರೆ ಕಡೆ ಇದ್ದಾರೆ. ಹೊರಗಡೆ ಕಾಲಿಡುವಂತಿಲ್ಲ. ನಾಲ್ಕು ಗೋಡೆಗಳ ಮಧ್ಯೆ ನಿರಂತರವಾಗಿ ಒತ್ತಡದಲ್ಲಿ ಕೆಲಸ ಮಾಡಬೇಕು. ಹೆಚ್ಚೆಂದರೆ ಮೊಬೈಲ್‌ನಲ್ಲಿ ಆಟ. ಈ “ತಾತ್ಕಾಲಿಕ ಬಂಧನ’ ಮತ್ತು ಹಲವು ವೈಯಕ್ತಿಕ ಸಮಸ್ಯೆಗಳು ಮಾನಸಿಕ ಖನ್ನತೆಗೆ ದೂಡುತ್ತಿವೆ ಎಂದು ಮನೋವೈದ್ಯರು ಅಭಿಪ್ರಾಯಪಡುತ್ತಾರೆ.
ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಐಟಿ, ಬಿಟಿ ಕೆಲ ಉದ್ಯೋಗಿಗಳು ತಮ್ಮ ಊರುಗಳಿಗೆ ಹೋಗಿದ್ದು, ಅಲ್ಲಿಂದಲೇ ವರ್ಕ್ ಫ್ರಾಂ ಹೋಮ್ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದೇಶದಿಂದ ಸ್ವದೇಶಕ್ಕೆ ಬಂದವರು ಮಾತ್ರವಲ್ಲ; ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಹೆಚ್ಚಾಗಿ ಕರೆಗಳನ್ನು ಮಾಡುತ್ತಿದ್ದಾರೆ. ಬಹುತೇಕರು ಬೆಂಗಳೂರಿನಲ್ಲಿದ್ದು, ಇಲ್ಲಿರುವವರೇ ಹೆಚ್ಚು ಸಮಸ್ಯೆ ಹಂಚಿಕೊಳ್ಳುತ್ತಿದ್ದಾರೆ ಎಂದು ನಿಮ್ಹಾನ್ಸ್ ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ.ಕೆ.ಎಸ್.ಮೀನಾ ತಿಳಿಸಿದರು.
ಅವಿಭಕ್ತ ಕುಟುಂಬಗಳೇ ಉತ್ತಮ: ನಗರದ ಕುಟುಂಬ ವ್ಯವಸ್ಥೆಯು ಗಂಡ, ಹೆಂಡತಿ, ಮಗ ಅಥವಾ ಮಗಳಿಗೆ ಸೀಮಿತವಾಗಿದೆ. ಕುಟುಂಬ ಸದಸ್ಯರ ನಡುವೆ ಮಾತುಗಳೇ ಕಡಿಮೆಯಾಗಿವೆ. ಆಟವಾಡಲು ಜನ ಇಲ್ಲ. ಹೊರಗೂ ಕಾಲಿಡುವಂತಿಲ್ಲ. ಆದರೆ, ಅವಿಭಕ್ತ ಕುಟುಂಬ ಹಾಗಲ್ಲ. ಮನೆತುಂಬಾ ಸದಸ್ಯರಿರುತ್ತಾರೆ. ಆಟ-ಪಾಠ, ಹರಟೆ, ಅಡುಗೆ ಹೀಗೆ ವಿವಿಧ ಕೆಲಸ ಮಾಡುತ್ತಾ, ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಈ ಸಂದರ್ಭದಲ್ಲಿ ನಮ್ಮ ಗಮನ ಕೋವಿಡ್ 19 ಕಡೆ ಹೋಗುವುದಿಲ್ಲ. ಆದ್ದರಿಂದ ಅವಿಭಕ್ತ ಕುಟುಂಬದ ಪರಿಕಲ್ಪನೆ ಮಹತ್ವ ಈಗ ಜನರಿಗೆ ಗೊತ್ತಾಗುತ್ತಿದೆ ಎಂದು ನಿಮ್ಹಾನ್ಸ್ ವೈದ್ಯರು ತಿಳಿಸಿದರು.
10 ಸಾವಿರಕೂ ಹೆಚ್ಚು ಕರೆಗಳು : ಕೋವಿಡ್ 19 ಭೀತಿಯಿಂದ ಜನರು ಅನುಭವಿಸುತ್ತಿರುವ ಖಿನ್ನತೆ ಹೋಗಲಾಡಿಸಲು, ಆತಂಕ ದೂರ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯದ ಸಹಯೋಗದಲ್ಲಿ ನಿಮ್ಹಾನ್ಸ್ ನಲ್ಲಿ ಮಾರ್ಚ್ 30ರಂದು ಆರೋಗ್ಯ ಹೆಲ್ಪ್ ಲೈನ್ ಆರಂಭಿಸಲಾಗಿದೆ. ಎಂಟು ದಿನಗಳಲ್ಲಿ 10,105 ಕರೆಗಳು ಬಂದಿವೆ.
ಕಾರಣಗಳೇನು? :
- ವಾರಾಂತ್ಯದಲ್ಲಿ ದಿನವಿಡೀ ಮನೆಯಲ್ಲಿ ಕಾಲ ಕಳೆವ ಉದ್ಯೋಗಸ್ಥರು
- ಮನಸ್ಸಲ್ಲಿ ಮನೆಮಾಡಿದ ಸೋಂಕು ಉಲ್ಬಣ ಭೀತಿ
- ವೇತನದಲ್ಲಿ ಶೇ. 30-50ರಷ್ಟು ಕಡಿತ
- ಅವಶ್ಯಕತೆ ಮತ್ತು ಈಗಾಗಲೇ ಮಾಡಿರುವ ಸಾಲದ ಮರುಪಾವತಿ ಒತ್ತಡ
- ಅಮೆರಿಕ, ಇಟಲಿ, ಸ್ಪೇನ್, ಲಂಡನ್, ಚೀನಾ ಮುಂತಾದ ದೇಶಗಳಿಂದ ಬಂದವರು, ಮತ್ತವರ ಸಂಬಂಧಿಕರು ತಮಗೂ ಕೊರೊನಾ ಬಂದಿದೆಯೇ? ಎಂಬ ಸಂಶಯ
ಅನುಭವದ ಮಾತು.. :
- ಸರ್, ನಾನು ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದೇನೆ. ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿದರು. ದೇಹದ ಉಷ್ಣಾಂಶ 98 ಇತ್ತು. ನನ್ನನ್ನು ಮನೆಗೆ ಕಳುಹಿಸಿದರು. ಮನೆಯಲ್ಲಿ ಪ್ರತ್ಯೇಕವಾದ ರೂಮ್‌ನಲ್ಲಿದ್ದು, ಕೆಲಸ ನಿರ್ವಹಿಸುತ್ತಿದ್ದೇನೆ. ಕೆಮ್ಮು, ಜ್ವರ ಬಂದರೆ ಸಾಕು ನನಗೂ ಕೋವಿಡ್ 19 ಬಂದಿದೆಯೇ ಎಂಬ ಆತಂಕವಾಗಿದೆ. ಇದರಿಂದ ಮನೆಯವರೊಂದಿಗೆ ಮಾತಾಡಲು ಬಿಟ್ಟಿದ್ದೇನೆ. ಒಬ್ಬನೇ ಇರುವುದರಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದೇನೆ. ಏನು ಮಾಡಬೇಕು ಗೊತ್ತಾಗುತ್ತಿಲ್ಲ. ಚಿತ್ರಹಿಂಸೆಯಾಗುತ್ತಿದೆ.
- ನಮ್ಮದು ಬಿಹಾರ್. ಬೆಂಗಳೂರಿನ ಹೆಬ್ಟಾಳದ ನಿವಾಸಿಯಾಗಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದೇನೆ. ಕೋವಿಡ್ 19 ದಿಂದಾಗಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದೇನೆ. ಹೆಂಡತಿ ಗರ್ಭಿಣಿ. ವೈದ್ಯರು ಏಪ್ರಿಲ್ 20ರಂದು ಬಾಣಂತನಕ್ಕೆ ದಿನಾಂಕ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ನನ್ನ ಪ್ರಸ್ತುತಿ ಅತ್ಯಗತ್ಯ. ಆದರೆ ಆಗುತ್ತಿಲ್ಲ. ಗರ್ಭಿಣಿ ಯರಿಗೆ ಬೇಗನೇ ಕೋವಿಡ್ 19 ಹರಡುತ್ತದೆ ಎಂದು ಸ್ನೇಹಿತರು ಹೇಳುತ್ತಿದ್ದಾರೆ. ಬಾಣಂ ತನದ ವೇಳೆ ವೈದ್ಯರು ಮತ್ತು ಆ್ಯಂಬುಲೆನ್ಸ್ ಲಭ್ಯವಾಗುತ್ತದೆಯೋ ಇಲ್ಲವೋ ಚಿಂತೆ ಕಾಡುತ್ತಿದೆ.
ಆರೋಗ್ಯ ಸಹಾಯವಾಣಿ : ಕೋವಿಡ್ 19 ಆತಂಕ, ಮಾನಸಿಕ ಖಿನ್ನತೆಗೆ ಒಳಗಾದವರು, ಅವರ ಸಂಬಂಧಿಕರು, ಸಾರ್ವಜನಿಕರು ಆರೋಗ್ಯ ಸಹಾಯವಾಣಿ: 080-46110007 ಸಂಪರ್ಕಿಸಬಹುದು.
ಹೆಲ್ಪ್ಲೈನ್‌ಗೆ ಕರೆ ಮಾಡಿದವರು ವಿದೇಶಿಗರು ಹೆಚ್ಚು. ಅವರಿಗೆ ಸೂಕ್ತ ಪರಿಹಾರ ಸೂಚಿಸಲಾಗಿದೆ. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದರಿಂದ ಮಾನಸಿಕವಾಗಿ ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಮನೆಯಲ್ಲಿಯೇ ಪುಸ್ತಕ ಓದುವ ಹವ್ಯಾಸ, ಮಕ್ಕಳೊಂದಿಗೆ ಕ್ರೀಡೆ, ಸಂಬಂಧಿಕರಿಗೆ ಕರೆ ಮಾಡಬೇಕು ಸಲಹೆ ನೀಡಲಾಗಿದೆ.
–ಡಾ. ಶೇಖರ್, ನಿಮ್ಹಾನ್ಸ್ ಸಂಸ್ಥೆಯ ರಿಜಿಸ್ಟ್ರಾರ್.
ಉದ್ಯೋಗಸ್ಥರು ಜೀವನ ನಡೆಸಲು ಸಂಬಳವನ್ನೇ ಆಧರಿಸಿರುತ್ತಾರೆ. ವೇತನ ಕಡಿತ, ಒತ್ತಡ ಹೀಗೆ ಮುಂದುವರಿದರೆ ಹೇಗೆ ಎಂಬ ಪ್ರಶ್ನೆಯಿಂದ ಖನ್ನತೆ ಪ್ರಾರಂಭವಾಗುತ್ತದೆ. ಇನ್ನೊಂದೆಡೆ ಕೋವಿಡ್ 19 ಭೀತಿಯಿಂದ ಹುಟ್ಟೂರಿಗೂ ಹೋಗದೆ, ಇಲ್ಲಿಯೂ ಇರಲಾರದೆ ಚಿಂತೆಗೀಡಾಗಿದ್ದಾರೆ. ಹೆಲ್ಪ್ಲೈನ್ ನಿಂದ ಸೂಕ್ತ ಸಲಹೆ ದೊರೆಯಲಿದೆ.
– ಡಾ. ಅನಿಶ್ ವಿ. ಚೆರಿಯನ್, ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ.
–ಮಂಜುನಾಥ ಗಂಗಾವತಿ