Advertisement

ಲಾಕ್‌ಡೌನ್‌ ಕತೆಗಳು…ನಮ್ಮ ಮನೇಲಿ ಟಾಕ್‌

06:01 AM May 12, 2020 | mahesh |

ಲಾಕ್‌ಡೌನ್‌ ಸಮಯದಲ್ಲಿ, ನನ್ನ ಮಗನ ಹವ್ಯಾಸಗಳು ಒಂದೊಂದೇ ಈಚೆ ಬರುತ್ತಿವೆ. ಅವನು ಸಿಗರೇಟು ಸೇದುತ್ತಾನೆ ಅಂತ ಈವರೆಗೂ ತಿಳಿದಿರಲಿಲ್ಲ. ಮೊನ್ನೆ, ಮೆಲ್ಲಗೆ ಟೆರೇಸ್‌ ಮೇಲೆ ಹೋಗಿದ್ದ. ಯಾರೋ ಹೊಗೆ ಬಿಡ್ತಾ ಇದಾರಲ್ಲ ಅಂತ ನೋಡಲು ಹೋದರೆ, ಇವನೇ… ಕೋಪ ಬಂತು, ಬೈದಾಡಿದೆ.

Advertisement

ಈ ಕೋವಿಡ್ ಏಕೆ ಬಂತೋ, ಲಾಕ್‌ಡೌನ್‌ ಯಾಕಾದ್ರು ಆಯಿತೋ ಅನ್ನೋ ಮಟ್ಟಿಗೆ, ನನಗೆ ತಲೆಕೆಟ್ಟುಹೋಗಿದೆ. ನಮ್ಮನೇಲಿ ಇರೋದು ಮೂರೇ ಜನ. ನಾನು, ಯಜಮಾನರು, ಮಗ. ಮಗನಿಗೆ 20 ವರ್ಷ. ಪ್ರತಿದಿನ ಅವನು ಕಾಲೇಜಿಗೆ ಹೋಗೋನು. ನಾನು ಅಡುಗೆ ಮಾಡಿಟ್ಟು ಆಫೀಸಿಗೆ ಹೋಗುತ್ತಿದ್ದೆ. ನನ್ನ ಗಂಡ, ಸಣ್ಣ ಕಾರ್ಖಾನೆ ನಡೆಸುತ್ತಿದ್ದರು. ಅವರ ಕೆಲಸದಲ್ಲಿ ಅವರು, ನನ್ನ ಕೆಲಸದಲ್ಲಿ ನಾನು, ಮಗನ ಓದಿನಲ್ಲಿ ಅವನು. ಹೀಗೆ, ಎಲ್ಲರೂ ಬ್ಯುಸಿಯಾಗಿದ್ದೆವು. ನಾವೆಲ್ಲ ಒಟ್ಟಿಗೆ ಸೇರುತ್ತಿದ್ದದ್ದೇ ಸಂಜೆ, ರಾತ್ರಿ ಹೊತ್ತು. ಅನಿವಾರ್ಯ ಇದ್ದರಷ್ಟೇ ಮಾತನಾಡಿಕೊಳ್ಳು  ತ್ತಿದ್ದೆವು. ವಾರದ ಬಿಡುವಲ್ಲಿ, ಹೊರಗೆ ಹೋಗಿ ತಿಂದು ಬರುತ್ತಿದ್ದೆವು. ಹೀಗಾಗಿ, ನಮ್ಮನಮ್ಮ ಅಭಿರುಚಿ, ವರ್ತನೆಗಳ ಆಳ ತಿಳಿದಿರಲಿಲ್ಲ. ಆದರೆ ಈಗ, 30 ದಿನದ ಲಾಕ್‌ಡೌನ್‌ ಸಮಯದಲ್ಲಿ, ನನ್ನ ಮಗನ ಹವ್ಯಾಸಗಳು ಒಂದೊಂದೇ ಈಚೆ ಬರುತ್ತಿವೆ. ಅವನು ಸಿಗರೇಟು ಸೇದುತ್ತಾನೆ ಅಂತ ಈವರೆಗೂ ತಿಳಿದಿರಲಿಲ್ಲ.

ಮೊನ್ನೆ ಮೆಲ್ಲಗೆ ಟೆರೇಸ್‌ ಮೇಲೆ ಹೋಗಿದ್ದ. ಯಾರೋ ಹೊಗೆ ಬಿಡ್ತಾ ಇದ್ದಾರಲ್ಲ ಅಂತ ನೋಡಲು ಹೋದರೆ, ಇವನೇ! ಕೋಪ ಬಂತು, ಬೈದಾಡಿದೆ. ಅವತ್ತಿನಿಂದ ನನ್ನ ಜೊತೆ ಅವನು ಮುಖ ಕೊಟ್ಟು ಮಾತಾಡುತ್ತಿಲ್ಲ. ಏನೋ ಕಳ್ಳತನ ಮಾಡಿದವನಂತೆ ಓಡಾಡುತ್ತಿದ್ದಾನೆ.  ನನಗಿರುವ ಅನುಮಾನ ಅದಲ್ಲ, ಇನ್ನೂ ಬೇರೆ ಬೇರೆ ಚಟಗಳು ಏನಾದರೂ ಇವನಿಗೆ ಇವೆಯಾ ಅಂತ ಯೋಚಿಸ್ತಾ ಇದ್ದೇನೆ. ಯಾವುದಾದ್ರೂ ಅಫೇರ್‌, ಎಣ್ಣೆಯ ಚಟ ಇದ್ದರೆ ಗತಿ ಏನು? ಈತನಕ ಇವನ ಆಪ್ತ ಸ್ನೇಹಿತರು ಯಾರು ಅಂತ ಕೂಡ ಗುರುತು ಇಟ್ಟುಕೊಂಡಿರಲಿಲ್ಲ, ಅಷ್ಟು ಬ್ಯುಸಿಯಾಗಿದ್ದೆ. ಈ ಲಾಕ್‌ಡೌನ್‌ ಸಮಯ ದಲ್ಲಿ, ಮೆಲ್ಲಗೆ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತಿದ್ದೇನೆ.

ಇನ್ನು, ನನ್ನ ಗಂಡನ ಪಾಡು ಬೇರೆ. ಈ ಮೊದಲೆಲ್ಲಾ ಬೆಳಗಿನಿಂದ ಸಂಜೆಯವರೆಗೆ ನಾವು ಬೇರೆ ಬೇರೆ ಕಡೆ ಇರುತ್ತಿದ್ದೆವು. ಆದರೆ ಈಗ, ದಿನವಿಡೀ ನನ್ನ ಜೊತೆಯೇ ಇರುತ್ತಾರೆ. ಫ‌ಜೀತಿ ಯೆಂದರೆ, ಆಫೀಸಿನಲ್ಲಿ ಇದ್ದಂತೆ, ಮುಖ ಸಿಂಡರಿಸಿಕೊಂಡು ಇರುತ್ತಾರೆ. ಅವರ ಸಮಸ್ಯೆ ಏನೂ ಅಂತಲೂ ಹೇಳುತ್ತಿಲ್ಲ. ಏನಾಯ್ತು ರೀ, ಅಂದರೆ, ಗುರ್‌ ಅಂತಾರೆ. ಬಹುಶಃ, ಅವರ ಮನಸ್ಸನ್ನು ಓದಿಕೊಳ್ಳದೇ ಇರುವುದೇ ಸಮಸ್ಯೆ ಅನಿಸುತ್ತಿದೆ. ಈಗ ಅರ್ಥವಾಗಿರುವುದು ಏನೆಂದರೆ- ಲಾಕ್‌ಡೌನ್‌ನಿಂದಾಗಿ, ಅವರ ಹೂಡಿಕೆ ಮಾಡಿಕೆ, ಅರ್ಧಕ್ಕೇ ನಿಂತು ಹೋಗಿದೆ. ಈ ಕೆಲಸಗಳು ಪೂರ್ತಿ ಆಗದಿದ್ದರೆ, ಹಾಕಿದ ಬಂಡವಾಳ ಬರುವುದಿಲ್ಲ. ಅದಕ್ಕೂ ಮೊದಲೇ ಇವರು ನೌಕರರಿಗೆ ಸಂಬಳ ಒದಗಿಸಬೇಕು. ಇದಕ್ಕೆ ಹಣದ ರೊಟೇಷನ್‌ ಆಗಬೇಕು. ಫ್ಯಾಕ್ಟರಿ ಮುಚ್ಚಿದ ಮೇಲೆ ರೊಟೇಷನ್‌ ಎಲ್ಲಿಂದ? ಲಾಕ್‌ಡೌನ್‌ ಇನ್ನೂ ಮುಂದುವರಿದಿರುವುದರಿಂದ, ಸಾಲದ ಆರ್ಡರ್‌ಗಳಿಂದ, ಹಣ ವಸೂಲಿ ಕಷ್ಟವೇ. ಒಂದು ಪಕ್ಷ ಫ್ಯಾಕ್ಟರಿ ತೆರೆದರೂ, ಮೂರು ತಿಂಗಳ ಖರ್ಚನ್ನು ನಿಭಾಯಿಸುವ ಹೊಣೆಗಾರಿಕೆ ಇವರ ಮೇಲಿದೆ! ಅದಕ್ಕೇ ರಾಯರಿಗೆ ಟೆನ್ಶನ್

ಇದನ್ನು ಬಾಯಿ ಬಿಟ್ಟಾದರೂ ಹೇಳಬೇಕಲ್ಲವೇ? ಅವರು ಹೇಳಲೇ ಇಲ್ಲ. ನಾವು ಎಲ್ಲರೂ ಬ್ಯುಸಿ ಎಂದು ತೋರಿಸಿಕೊಂಡು ಬದುಕುತ್ತಾ, ಒಬ್ಬರಿಗೊಬ್ಬರು ಅಪರಿಚಿತರಾಗಿ ಉಳಿದಿದ್ದಕ್ಕೇ ಇಷ್ಟೆಲ್ಲಾ ಸಮಸ್ಯೆಗಳು ಜೊತೆಯಾದವು ಅನಿಸುತ್ತದೆ… ಮನೆಯಲ್ಲಿರುವ ಮೂರು ಜನ, ಒಬ್ಬರಿಗೊಬ್ಬರು ಅರ್ಥವಾಗಬೇಕಾದರೆ ಲಾಕ್‌ಡೌನ್‌ ಬರಬೇಕಾಯಿತು! ಮನೆಯೊಂದು, ಮೂರು ಬಾಗಿಲು ಎಂಬಂತೆ ಆಗಿರುವಾಗ, ನನ್ನ ಆಫೀಸಿನ ಸಮಸ್ಯೆ ಯಾರಿಗೆ ಹೇಳಿಕೊಳ್ಳುವುದು? ರಾಶಿ ಬಿದ್ದಿರುವ ಪೈಲ್‌ ಗಳನ್ನು ನೆನಪಿಸಿಕೊಂಡರೆ, ನನಗೇ ಕೋವಿಡ್ ಬಂದಂಗೆ ಆಗುತ್ತದೆ. ಹೆಣ್ಣಿಗೆ, ಸಹನೆ ಹೆಚ್ಚು ಅಂತಾರೆ. ಹೀಗಂದುಕೊಂಡೇ ನಾನೂ ಧೈರ್ಯ ತಂದುಕೊಂಡಿದ್ದೀನಿ. ಇದಕ್ಕಿಂತ ದೊಡ್ಡ ಕೆಲಸ ಬೇರೇನಿದೆ ಹೇಳಿ…

Advertisement
Advertisement

Udayavani is now on Telegram. Click here to join our channel and stay updated with the latest news.

Next