Advertisement

ಇನ್ನೂ 8 ಜಿಲ್ಲೆಗಳಲ್ಲಿ ಲಾಕ್‌ ಸಡಿಲಿಕೆ? ಹಸುರು ವಲಯದಲ್ಲಿ ಬಸ್‌ ಸಂಚಾರಕ್ಕೆ ಚಿಂತನೆ

08:12 AM May 01, 2020 | Hari Prasad |

ಬೆಂಗಳೂರು: ಹಸುರು ವಲಯದ 14 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಿಸಿದ ಬೆನ್ನಲ್ಲೇ ಇನ್ನೂ 8 ಜಿಲ್ಲೆಗಳಲ್ಲಿ ಸಡಿಲಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕುವಾರು ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ.

Advertisement

ಕೋವಿಡ್ 19 ವೈರಸ್ ಸೋಂಕು ಪ್ರಕರಣಗಳು ವರದಿಯಾದ ಮತ್ತು ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕಿತರು ಹೆಚ್ಚಾಗಿ ಕ್ವಾರಂಟೈನ್‌ ನಲ್ಲಿರುವ ತಾಲೂಕುಗಳು ಹೊರತುಪಡಿಸಿ ಉಳಿದೆಡೆ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕೊಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತಗಳ ತೀರ್ಮಾನಕ್ಕೆ ಬಿಡಲಾಗಿತ್ತು.

ಈ ಹಿನ್ನಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ಜತೆ ದೂರವಾಣಿ ಮೂಲಕ ಚರ್ಚಿಸಿ ಆಯಾ ಜಿಲ್ಲೆಗಳ ತಾಲೂಕುವಾರು ಸ್ಥಿತಿಗತಿ ಮಾಹಿತಿ ಪಡೆದರು. ಅಂತರ ಜಿಲ್ಲಾ ಅಂತಾರಾಜ್ಯ ಗಡಿ ಪ್ರವೇಶ ಇದ್ದರೆ ನಿಗಾ ವಹಿಸಿ ತಾಲೂಕು ಮಟ್ಟದಲ್ಲಿ ಸಡಿಲಿಕೆ ತೀರ್ಮಾನ ಕೈಗೊಳ್ಳಿ ಎಂದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗಮನ ನೀಡಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದ ಅವರು ಆದಷ್ಟೂ ಸಚಿವ ಸಂಪುಟ ಅಥವಾ ಇಲಾಖಾವಾರು ತುರ್ತು ಸಭೆಗಳನ್ನು ಹೊರತುಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲೇ ಇರಿ ಎಂದು ತಿಳಿಸಿದರು ಎಂದು ಮೂಲಗಳು ಹೇಳಿವೆ.

Advertisement

ಈ ಎಂಟೂ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವರದಿ ಮತ್ತು ಶಿಫಾರಸು ಆಧರಿಸಿ ಲಾಕ್‌ಡೌನ್‌ ಸಡಿಲ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಹಸುರು ವಲಯದಲ್ಲಿ ಬಸ್‌ ಸಂಚಾರಕ್ಕೆ ಚಿಂತನೆ
ಹಸುರು ವಲಯದ 14 ಜಿಲ್ಲೆಗಳಲ್ಲಿ ಮೇ 3ರ ಬಳಿಕ ಲಾಕ್‌ಡೌನ್‌ ಸಡಿಲವಾಗುವ ನಿರೀಕ್ಷೆ ಇದ್ದು, ಆ ಜಿಲ್ಲೆಯೊಳಗಷ್ಟೇ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದರು. ಹಸುರು ವಲಯದಲ್ಲಿರುವ ನಮ್ಮ ಸಿಬಂದಿಗೆ ಸೇವೆಗೆ ಸಜ್ಜಾಗುವಂತೆ ಸೂಚನೆ ನೀಡಲಾಗಿದ್ದು ಸಿಬಂದಿಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.

ಕಚೇರಿ ಕರ್ತವ್ಯಕ್ಕೆ ನಿಯೋಜಿಸಲು ಸೂಚನೆ
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 55 ವರ್ಷ ಮೇಲ್ಪಟ್ಟ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ ಪೊಲೀಸ್‌ ಸಿಬಂದಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸದೇ ಠಾಣೆಯ ಒಳಗಿನ ಕರ್ತವ್ಯಗಳಿಗೆ ಅಥವಾ ವೈರಾಣು ಹರಡುವಿಕೆ ಇರದಂಥ ಪರಿಸರದಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ರಾಜ್ಯದ ಎಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ವಲಯ ಐಜಿಪಿಗಳು, ಠಾಣಾಧಿಕಾರಿಗಳಿಗೆ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಆದೇಶಿಸಿದ್ದಾರೆ.

ಇಂದು ಸಚಿವ ಸಂಪುಟ ಸಭೆ
ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ನಡೆಯಲಿದ್ದು ಲಾಕ್‌ಡೌನ್‌ ವಿಚಾರದಲ್ಲಿ ಮೇ 3ರ ಬಳಿಕ ಕೈಗೊಳ್ಳಬೇಕಾದ ಕ್ರಮ ಸಹಿತ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಜತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪನ್ಮೂಲ ಕ್ರೋಡೀಕರಣ ಸ್ಥಗಿತಗೊಂಡಿರುವುದರಿಂದ ಉಂಟಾಗಲಿರುವ ಪರಿಣಾಮಗಳ ಬಗ್ಗೆಯೂ ಚರ್ಚೆಯಾಗಲಿದೆ. ಈಗಾಗಲೇ ಹಸುರು ವಲಯದ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಿದ್ದು, ಇನ್ನೂ ಆರು ಜಿಲ್ಲೆಗಳ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ವಿಪಕ್ಷ ನಾಯಕರ ಸಭೆ ಇಂದು
ಲಾಕ್‌ಡೌನ್‌ನಿಂದಾಗಿ ಕಾರ್ಮಿಕ ವರ್ಗ ಮತ್ತು ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾರ ವಿಪಕ್ಷಗಳ ನಾಯಕರು ಮತ್ತು ರೈತ ಸಂಘಟನೆಗಳ ಪ್ರಮುಖರ ಸಭೆ ಕರೆದಿದ್ದಾರೆ.

ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ. ಕಾಂಗ್ರೆಸ್‌, ಜೆಡಿಎಸ್‌, ಜೆಡಿಯು, ಸಿಪಿಎಂ, ಸಿಪಿಐ ಮತ್ತು ವಿವಿಧ ರೈತ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next