ಚಿಕ್ಕಮಗಳೂರು: ಲಾಕ್ ಡೌನ್ ಮೊದಲ ದಿನ ಕಾಫಿನಾಡು ಸಂಪೂರ್ಣ ಸ್ತಬ್ಧಗೊಂಡಿದ್ದು, ಬುಧವಾರ ಜಿಲ್ಲಾದ್ಯಂತ ಜನಜೀವನ ಸ್ತಗಿತಗೊಂಡಿದೆ.
ಅಗತ್ಯ ವಸ್ತುಗಳ ಖರೀದಿಗೆ ಸರಕಾರ ಅವಕಾಶ ನೀಡಿರುವುದರಿಂದ ಬೆಳಗ್ಗೆ 6 ರಿಂದ 10 ರವರೆಗೆ ಸಾರ್ವಜನಿಕರು ಚಿಕ್ಕಮಗಳೂರು ನಗರ ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿನ ತರಕಾರಿ, ದಿನಸಿ, ಮೀನು ಮಾಂಸ ಖರೀದಿಗೆ ಮುಗಿಬಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಬೆಳಗ್ಗೆ ಸಮಯ 10 ಆಗುತ್ತಿದ್ದಂತೆ ಪೊಲೀಸರು ರಸ್ತೆಗಿಳಿದ ಪರಿಣಾಮ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದವು, ರಸ್ತೆಯಲ್ಲಿದ್ದ ವಾಹನಗಳು, ಸಾರ್ವಜನಿಕರು ನಿಧಾನವಾಗಿ ಮನೆ ಸೇರಿಕೊಂಡರು.
ಮೊದಲ ದಿನದ ಲಾಕ್ಡೌನ್ ಗೆ ಕಾಫಿನಾಡು ಜನಸಂಚಾರ, ವಾಹನ ಸಂಚಾರ ಸ್ತಬ್ಧಗೊಂಡಿದ್ದು ಚಿಕ್ಕಮಗಳೂರು ನಗರ ಸೇರಿದಂತೆ ಪ್ರಮುಖ ಪಟ್ಟಣ, ಗ್ರಾಮೀಣ ಪ್ರದೇಶದ ರಸ್ತೆಗಳು ಖಾಲಿ ಖಾಲಿಯಾಗಿದ್ದು, ಬಿಕೋ ಎನ್ನುತ್ತಿವೆ. ಕೆಲವು ಅಗತ್ಯ ವಸ್ತುಗಳ ಸರಕು ವಾಹನಗಳು ಮಾತ್ರ ಅಲ್ಲಲ್ಲಿ ಸಂಚಾರ ನಡೆಸಿದ್ದು, ಉಳಿದ ವಾಹನಗಳು ನಿಂತಲ್ಲೇ ನಿಲ್ಲುವಂತಾಗಿದೆ, ಅನಗತ್ಯ ತಿರುಗಾಡುವ ವಾಹನ ಸವಾರರು, ಜನರನ್ನು ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಮಾಡುತ್ತಿರುವ ಪೊಲೀಸರು ಆಸ್ಪತ್ರೆ, ಮೆಡಿಕಲ್ ಗೆ ತೆರಳುವವರನ್ನು ಬಿಡುತ್ತಿದ್ದು, ಸುಖಾಸುಮ್ಮನೆ ತಿರುಗುವವರಿಗೆ ದಂಡ ಹಾಕುತ್ತಿದ್ದಾರೆ.
ಪಡಿತರ ಅಂಗಡಿಗಳ ಮುಂದೆ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆಯುತ್ತಿರುವ ದೃಶ್ಯಗಳು ಜಿಲ್ಲಾದ್ಯಂತ ಸಾಮಾನ್ಯವಾಗಿತ್ತು.