Advertisement

ರಾಜ್ಯದ ಜನತೆಗೂ ಪ್ಯಾಕೇಜ್‌? ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಕಾರದಿಂದ ಚಿಂತನೆ

01:16 AM May 10, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಗೊಂಡಿರುವ ಹಿನ್ನೆಲೆ ಯಲ್ಲಿ ಸಂಕಷ್ಟಕ್ಕೀಡಾಗುವ ಬಡವರ್ಗಕ್ಕೆ ಸಣ್ಣ ಮಟ್ಟದ ಪ್ಯಾಕೇಜ್‌ ನೀಡುವ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ.

Advertisement

ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ದಿಲ್ಲಿಯಲ್ಲಿ ಸರಕಾರಗಳು ಪ್ಯಾಕೇಜ್‌ ಘೋಷಿಸಿವೆ. ಇದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಆಟೋ, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರಿಗೆ ಮೊದಲ ಹಂತದ ಪ್ಯಾಕೇಜ್‌ ನೀಡುವ ಬಗ್ಗೆ ಚರ್ಚಿಸಲಾಗುತ್ತಿದೆ.

ನಗದು-ಆಹಾರ ಧಾನ್ಯ
ಆಟೋ -ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರಿಗೆ ನಗದು ರೂಪದಲ್ಲಿ ಮತ್ತು ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಕಾರ್ಡ್‌ ಪಡೆಯದ 1.50 ಲಕ್ಷ ಕುಟುಂಬಗಳಿಗೆ ಆಹಾರ ಧಾನ್ಯದ ರೂಪದಲ್ಲಿ ನೆರವು ನೀಡುವ ಸಾಧ್ಯತೆಯಿದೆ. ಇದರಿಂದ ಎಷ್ಟು ಆರ್ಥಿಕ ಹೊರೆ ಬೀಳಬಹುದು ಎಂಬ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಸಿಎಂ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

5 ಸಾವಿರ ಕೋಟಿ ರೂ. ವೆಚ್ಚ
ಕಳೆದ ಬಾರಿ ಕಟ್ಟಡ ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರು, ಕೌÒರಿಕ, ಮಡಿವಾಳರಿಗೆ ತಲಾ 5 ಸಾವಿರ ರೂ., ನೇಕಾರರಿಗೆ 2 ಸಾವಿರ ರೂ. ಘೋಷಿಸಲಾಗಿತ್ತು. ಈ ಬಾರಿ ಎಲ್ಲರಿಗೂ 3 ಸಾವಿರ ರೂ. ನೀಡಲು ಯೋಚಿಸಲಾಗಿದೆ. ಕಟ್ಟಡ ಕಾರ್ಮಿಕರಲ್ಲಿ ಊರಿಗೆ ತೆರಳದವರಿಗೆ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಬಿಪಿಎಲ್‌ ಕಾರ್ಡ್‌ ದಾರರಿಗೆ ತಲಾ 5 ಕೆ.ಜಿ. ಅಕ್ಕಿ, ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಪಡೆಯದ ಕುಟುಂಬಗಳಿಗೆ ತಲಾ 10 ಕೆ.ಜಿ. ಅಕ್ಕಿ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಇದರಿಂದ ಸರಕಾರಕ್ಕೆ ಸುಮಾರು 5 ಸಾವಿರ ಕೋಟಿ ರೂ. ಹೊರೆಯಾಗಬಹುದು ಎನ್ನಲಾಗಿದೆ.

ಪ್ಯಾಕೇಜ್‌ ಒಂದು ವರ್ಗಕ್ಕೆ ಕೊಟ್ಟು ಒಂದು ವರ್ಗವನ್ನು ಬಿಟ್ಟರೆ ಕಷ್ಟ ಎಂಬ ವಾದವೂ ಇದೆ. ಆದರೆ ಬಿಪಿಎಲ್‌ ಕಾರ್ಡ್‌ ಕುಟುಂಬಗಳಿಗೆ 5 ಸಾವಿರ ರೂ.ನಂತೆ ನಗದು ಕೊಟ್ಟರೆ 8 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲೂ ಪ್ಯಾಕೇಜ್‌ ನೀಡುವ ವಿಚಾರ ಚರ್ಚೆಗೆ ಬಂದಿತ್ತು.

Advertisement

2 ಸಾವಿರ ಕೋಟಿ ರೂ. ಮೀರಿಲ್ಲ
ಕಳೆದ ವರ್ಷ ಘೋಷಿಸಿದ್ದ ಪರಿಹಾರ ಪ್ಯಾಕೇಜ್‌ ಮೂಲಕ ಎಲ್ಲರಿಗೂ ತಲುಪಿರುವ ಮೊತ್ತ 2 ಸಾವಿರ ಕೋಟಿ ರೂ. ಮಾತ್ರ. ಇದರಲ್ಲಿ ಆಹಾರ ಕಿಟ್‌ ಮತ್ತು ಆಹಾರ ಪೂರೈಕೆ ವೆಚ್ಚವೂ ಸೇರಿದೆ.

ಯಾವ ರಾಜ್ಯದಲ್ಲಿ ಏನೇನು?
ಕೇರಳ: ಎಲ್ಲ ಬಿಪಿಎಲ್‌ ಕುಟುಂಬಗಳಿಗೆ 50 ಕೆ.ಜಿ. ಅಕ್ಕಿ ಸಹಿತ ಎರಡು ತಿಂಗಳಿಗಾಗುವಷ್ಟು ಆಹಾರ ಕಿಟ್‌ ವಿತರಣೆ. ವಿದ್ಯುತ್‌, ನೀರಿನ ಶುಲ್ಕ ವಿನಾಯಿತಿ.
– ತಮಿಳುನಾಡು: ಬಿಪಿಎಲ್‌ ಕುಟುಂಬಕ್ಕೆ ತಲಾ 4 ಸಾವಿರ ರೂ. ನಗದು.
– ದಿಲ್ಲಿ: ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ನಗದು, ಪ್ರತೀ ಮನೆಗೆ ಉಚಿತ ಪಡಿತರ.
– ಆಂಧ್ರಪ್ರದೇಶ: ಬಡ ಕುಟಂಬಗಳಿಗೆ ಉಚಿತ ಪಡಿತರ. ಖಾಸಗಿ-ಸರಕಾರಿ ಆಸ್ಪತ್ರೆಗಳಲ್ಲಿ ಸೋಂಕುಪೀಡಿತರಿಗೆ ಉಚಿತ ಚಿಕಿತ್ಸೆ.

Advertisement

Udayavani is now on Telegram. Click here to join our channel and stay updated with the latest news.

Next