ಬೀದರ: ಲಾಕ್‌ಡೌನ್ ಹೇರಿಕೆಯಿಂದಾಗಿ ಮಾರಾಟ ಕುಸಿತ ಕಂಡಿರುವ ಸರ್ಕಾರಿ ಸ್ವಾಮ್ಯದ ನಂದಿನಿ ಹಾಲಿನ ಮಾರುಕಟ್ಟೆ ಹೆಚ್ಚಿಸುವ ದಿಸೆಯಲ್ಲಿ ಕಲಬುರಗಿ-ಬೀದರ್ -ಯಾದಗಿರಿ ಹಾಲು ಒಕ್ಕೂಟ ಜಿಲ್ಲೆಯಲ್ಲಿ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೇ ತಲುಪಿಸುವ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‌ಡೌನ್ ಎಫೆಕ್ಟ್ ನಂದಿನಿ ಹಾಲಿಗೂ ತಟ್ಟಿದೆ. ಬಂದ್‌ನಿಂದಾಗಿ ಹೋಟೆಲ್ ಉದ್ದಿಮೆ ಬಂದ್ ಆಗಿರುವುದು, ಮತ್ತೂಂದೆಡೆ ಸಾರ್ವಜನಿಕರು ಮನೆಯಿಂದ ಹೊರಗೆ ಬರಲು ಸಾಧ್ಯವಾಗದೇ ನಂದಿನಿ ಹಾಲು ಮಾರಾಟ ಇಳಿಮುಖವಾಗಿದೆ. ಅಷ್ಟೇ ಅಲ್ಲ ನೆರೆ ರಾಜ್ಯಕ್ಕೆ ಸಂಪರ್ಕ ರದ್ದತಿಯಿಂದ ನಂದಿನಿ ಹಾಲು ಪೂರೈಕೆಯೂ ಕಡಿಮೆಯಾಗಿದೆ. ಒಟ್ಟಾರೆ, ಜಿಲ್ಲೆಯಲ್ಲಿಶೇ.30ಕ್ಕಿಂತ ಹೆಚ್ಚು ಪ್ರಮಾಣದ ನಂದಿನ ಹಾಲಿನ ಮಾರಾಟ ಕುಸಿತವಾಗಿದ್ದು, ಇದರಿಂದ ಒಕ್ಕೂಟಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹಾಗಾಗಿ ಕೆಎಂಎಫ್ ಬೀದರ ಘಟಕ ವಿಶೇಷ ಸೇವೆ ಶುರು ಮಾಡಿದೆ. ಕೆ
ಎಂಎಫ್ ಬೀದರ ಘಟಕದಲ್ಲಿ ಪ್ರತಿ ನಿತ್ಯ ರೈತರಿಂದ 32 ಸಾವಿರ ಲೀಟರ್ ಹಾಲಿನ ಸಂಗ್ರಹ ಮಾಡಲಾಗುತ್ತದೆ. ಇದರಲ್ಲಿ ಜಿಲ್ಲೆಯಲ್ಲಿ 14 ಸಾವಿರ ಲೀ. ಮಾರಾಟ ಮತ್ತು ತೆಲಂಗಾಣಕ್ಕೆ 5 ಸಾವಿರ ಲೀ. ಪೂರೈಕೆಯಾಗುತ್ತದೆ. ಉಳಿದ ಹಾಲನ್ನು ಕಲಬುರಗಿ ಘಟಕಕ್ಕೆ ಕಳುಹಿಸಲಾಗುತ್ತದೆ. ಈಗ ಲಾಕ್‌ಡೌನ್‌ದಿಂದಾಗಿ ಜಿಲ್ಲೆಯಲ್ಲಿ 7 ಸಾವಿರ ಲೀ. ಮತ್ತು ತೆಲಂಗಾಣಕ್ಕೆ 2.5 ಸಾವಿರ ಲೀ. ಹಾಲು ಮಾತ್ರ ಮಾರಾಟ ಆಗುತ್ತಿದೆ. ಮನೆ ಬಾಗಿಲಿಗೇ ಹಾಲು ತಲುಪಿಸಿ ಗ್ರಾಹಕರಿಗೆ ಸೇವೆ ನೀಡುವುದು, ಆ ಮೂಲಕ ಒಕ್ಕೂಟ ಹಾಲಿನ ಮಾರಾಟ ಪ್ರಮಾಣವನ್ನು ಹೆಚ್ಚಿಸುವುದು ಘಟಕದ ಉದ್ದೇಶವಾಗಿದೆ.
ಸದ್ಯ ನಗರದಲ್ಲಿ ಒಂದು ವ್ಯಾನ್ ಮೂಲಕ ಹಾಲು ಮತ್ತು ಹಾಲಿನ 69 ಉತ್ಪನ್ನಗಳ ಮಾರಾಟ ಆರಂಭಿಸಲಾಗಿದೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಲ್ಲಿ ನಗರ ಮತ್ತು ತಾಲೂಕು ಕೇಂದ್ರಗಳಲ್ಲಿ ವ್ಯಾನ್‌ಗಳನ್ನು ಹೆಚ್ಚಿಸಿ ನಿತ್ಯ 2 ಸಾವಿರ ಲೀ.ವರೆಗೆ ಹಾಲನ್ನು ವಿನೂತನ ಸೇವೆ ಮೂಲಕ ಮಾರಾಟ ಮಾಡುವ ಆಶಯ ಹೊಂದಿದೆ. ಧ್ವನಿವರ್ಧಕ ಹೊಂದಿರುವ ಇಬ್ಬರು ಸಿಬ್ಬಂದಿಯನ್ನು ಒಳಗೊಂಡ ವಾಹನವು ಪ್ರತಿ ದಿನ ಬೆಳಗ್ಗೆ 6 ರಿಂದ ರಾತ್ರಿ 8ರವರೆಗೆ ಸಂಚರಿಸಲಿದೆ. ಸಿಬ್ಬಂದಿಗೆ ಸುರಕ್ಷತಾ ಕ್ರಮವಾಗಿ ಮಾಸ್ಕ್, ಹ್ಯಾಂಡ್‌ಗ್ಲೌಸ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಮನೆ ಬಾಗಿಲಿಗೆ ನಂದಿನಿ ಉತ್ಪನ್ನಗಳ ಸೇವೆ ಶುರು ಮಾಡಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬೇಕು. ಇದರಿಂದ ಕುಸಿತ ಕಂಡಿರುವ ಒಕ್ಕೂಟದ ಹಾಲಿನ ಮಾರಾಟ ಹೆಚ್ಚಲಿದೆ. ವಿನೂತನ ಪ್ರಯೋಗ ಯಶಸ್ವಿಯಾದರೆ ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು
. ಗ್ರಾಹರು ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
–ಶಾಲಿವಾನ್ ವಾಡೆ,ಉಪ ವ್ಯವಸ್ಥಾಪಕ, ಕೆಎಂಎಫ್ ಬೀದರ.
–ಶಶಿಕಾಂತ ಬಂಬುಳಗೆ