ವೆಲ್ಲಿಂಗ್ಟನ್: ಲಾಕ್‌ಡೌನ್ ಸಡಿಲಗೊಳಿಸಿದರೆ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತವೆ ಎಂಬ ಮಾತು ಮತ್ತೆ ನಿಜವಾಗಿದ್ದು, ವಿಶ್ವಾದ್ಯಂತ ಪ್ರಕರಣಗಳು ತೀವ್ರ ಏರಿಕೆ ಕಂಡಿವೆ. ಅಮೆರಿಕ, ದ.ಏಷ್ಯಾ, ಪಶ್ಚಿಮ ಯುರೋಪ್‌ಗ್ಳಲ್ಲಿ ಸೋಂಕು ಪ್ರಮಾಣ ತೀವ್ರ ಹೆಚ್ಚಳವಾಗುತ್ತಿದ್ದು ಆತಂಕಕಾರಿಯಾಗಿದೆ.
ಭಾರತವೊಂದರಲ್ಲೇ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ನಿತ್ಯ ಕಂಡುಬರುತ್ತಿದೆ. ಲ್ಯಾಟಿನ್ ಅಮೆರಿಕ ದೇಶಗಳಾದ ಮೆಕ್ಸಿಕೋ, ಕೊಲಂಬಿಯಾ, ಬ್ರಜಿಲ್‌ನಲ್ಲಿ ಸೋಂಕಿ ಹರಡುವಿಕೆ ಅವ್ಯಾಹತವಾಗಿದೆ. ಅಮೆರಿಕ ವೊಂದರಲ್ಲೇ ಕೋವಿಡ್ ಪ್ರಕರಣಗಳು 23 ಲಕ್ಷಕ್ಕೂ ಹೆಚ್ಚು ಕಂಡುಬಂದಿದ್ದು, ಆದರೂ ಆರ್ಥಿಕತೆ ದೃಷ್ಟಿಯಿಂದ ಸರಕಾರ ಲಾಕ್‌ಡೌನ್ ಸಡಿಲಿಕೆಗೆ ಮುಂದಾಗಿದೆ.
ಈಗಾಗಲೇ ಅಲ್ಲಿನ ನಗರಗಳಲ್ಲಿ ಜನರು ಅಡ್ಡಾಡತೊಡಗಿದ್ದು, ಸಾರಿಗೆ, ಹೊಟೇಲು, ರೆಸ್ಟೋರೆಂಟ್‌ಗಳು ತೆರೆದುಕೊಂಡಿವೆ. ಆದರೆ ಜನರು ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಪಾಡುವ ಗೋಜಿಗೆ ಹೋಗದಿರುವುದರಿಂದ ಸೋಂಕಿನ ಪ್ರಮಾಣ ಹೆಚ್ಚತೊಡಗಿದೆ. ಇದೇ ವೇಳೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತ ರ್ಯಾಲಿಗಳು ನಡೆಯತೊಡಗಿದ್ದು, ಸೋಂಕು ಹೆಚ್ಚಳದ ಆತಂಕ ಇನ್ನೂ ಹೆಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಪರಿಸ್ಥಿತಿ ಕೇಂದ್ರದ ಮುಖ್ಯಸ್ಥರಾದ ಡಾ| ಮೈಖೇಲ್ ರೇಯಾನ್ ಅವರು ಹೇಳುವಂತೆ, ಲಾಕ್‌ಡೌನ್ ಸಡಿಲವಾದಂತೆ ಸೋಂಕಿತರು ಹೆಚ್ಚಿದ್ದು ಹೌದು. ಆದರೆ ನಿರ್ದಿಷ್ಟವಾಗಿ ಹೇಳಬೇಕಾದರೆ ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳಗೊಳಿಸಬೇಕು. ಆಗಲೇ ನೈಜ ಪ್ರಮಾಣ ತಿಳಿದುಬರುತ್ತದೆ. ಈಗ ದೊಡ್ಡ ದೇಶಗಳಲ್ಲಿ ಸೋಂಕಿನ ಪ್ರಮಾಣ ತುತ್ತ ತುದಿಗೆ ತಲುಪುತ್ತಿದ್ದು, ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ನಿರ್ದೇಶಕ ಟೆಡ್ರೊಸ್ ಆಧನಾಮ್ ಅವರ ಪ್ರಕಾರ ಆರಂಭದಲ್ಲಿ ಕೋವಿಡ್ 10 ಲಕ್ಷ ಗಡಿ ತಲುಪಲು 3 ತಿಂಗಳು ಬೇಕಾಗಿದ್ದು, ಈಗ ಕೇವಲ 8 ದಿನಗಳಲ್ಲಿ ವಿಶ್ವದಲ್ಲಿ 10 ಲಕ್ಷ ಪ್ರಕರಣಗಳು ಕಂಡುಬರುತ್ತಿವೆ. ವೈರಸ್ ತಡೆಗೆ ದೇಶಗಳು ಒಂದಾಗಿ ಹೋಗದಿರುವುದು ಮತ್ತು ಇದರ ವಿರುದ್ಧ ವಿಶ್ವ ನಾಯಕತ್ವ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಕೆಲವು ದೇಶಗಳು ವೈರಸ್ ಹರಡುವಿಕೆಯನ್ನು ನಿಯಂತ್ರಿಸಿದೆ ಎನ್ನಲಾದರೂ ಮತ್ತೆ ಹಲವು ಪ್ರಕರಣಗಳು ಕಂಡುಬರುತ್ತಿವೆ.
ಕೆಲವು ದೇಶಗಳಲ್ಲಿ ವೈರಸ್ ಹಬ್ಬುವಿಕೆ ಪ್ರಮಾಣ ಕಡಿಮೆ ಇದೆ ಎಂದರೆ ಅಲ್ಲಿ ಸೋಂಕಿನ ಪರೀಕ್ಷೆ ಕಡಿಮೆ ಇರುತ್ತದೆ. ಅಷ್ಟೇ ಅಲ್ಲದೆ ಹಲವು ಮಂದಿಗೆ ಸೋಂಕಿನ ಗುಣಲಕ್ಷಣ ಇಲ್ಲದಿರಬಹುದು ಇದೂ ಸಂಖ್ಯೆ ಕಡಿಮೆ ಇರಲು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.