ಮಂಗಳೂರು: ಕೇಂದ್ರ ಸರಕಾರ ಘೋಷಿಸಿರುವ ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯ ತೀರ್ಮಾನದ ಅಧಿಕಾರವನ್ನು ಆಯಾ ಜಿಲ್ಲಾಡಳಿತಗಳಿಗೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಪ್ರಸ್ತುತ ರೆಡ್ ಝೋನ್‌ನಲ್ಲಿ ಇರುವುದರಿಂದ ಸಡಿಲಿಕೆ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಗುರುವಾರವೂ ಜಿಲ್ಲೆಯಲ್ಲಿ ಯಥಾ ಸ್ಥಿತಿ ಮುಂದುವರಿಯಲಿದೆ.
ಆದರೆ ಜಿಲ್ಲೆಯ ಆಗು-ಹೋಗುಗಳ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಗುರುವಾರ ಮಧ್ಯಾಹ್ನ 3 ಗಂಟೆಗೆ ಉನ್ನತ ಮಟ್ಟದ ಸಭೆಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಇತರ ಜನಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಲಾಕ್‌ಡೌನ್‌ನಲ್ಲಿ ಸಡಿಲಿಕೆ ನೀಡಬಹುದೇ ಯಾ ಯಥಾಸ್ಥಿತಿ ಮುಂದುವರಿಸುವುದು ಉತ್ತಮವೇ? ಒಂದು ವೇಳೆ ಕೇಂದ್ರದ ಘೋಷಣೆಯಂತೆ ಸಡಿಲಿಕೆ ಕೊಡಬಹುದು ಎಂದಾದರೆ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟರ ಮಟ್ಟಿಗೆ ವಿನಾಯಿತಿ ಕೊಡಬಹುದು ಎನ್ನುವ ಕುರಿತು ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆ ಬಳಿಕವಷ್ಟೇ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆ ಕುರಿತಂತೆ ಅಂತಿಮ ತೀರ್ಮಾನ ಹೊರಬೀಳಬಹುದು.
12 ವಾಹನಗಳು ವಶ
ಮಂಗಳೂರು: ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಉಲ್ಲಂಘನೆ ಮಾಡಿ ಸಂಚರಿಸುತ್ತಿದ್ದ 112 ವಾಹನಗಳನ್ನು ಮಂಗಳೂರು ನಗರ ಪೊಲೀಸರು ಬುಧವಾರ ಮುಟ್ಟುಗೋಲು ಹಾಕಿದ್ದಾರೆ. ಈ ಪೈಕಿ 68 ದ್ವಿಚಕ್ರ ವಾಹನ, 19 ತ್ರಿಚಕ್ರ ವಾಹನ ಹಾಗೂ 25 ನಾಲ್ಕು ಚಕ್ರಗಳ ವಾಹನಗಳಾಗಿರುತ್ತವೆ.