Advertisement

ವಾಹನ ಓಡಾಟ ಜೋರು; ಜನರು ಫ‌ುಲ್‌ಖುಷ್‌!

10:54 PM May 04, 2020 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸುಮಾರು 40 ದಿನಗಳ ಅನಂತರ ಲಾಕ್‌ಡೌನ್‌ನಲ್ಲಿ ಕೆಲವೊಂದು ಸಡಿಲಿಕೆ ಮಾಡಿದ ಪರಿಣಾಮ ಸೋಮವಾರ ನಗರದಲ್ಲಿಯೂ ಜನರು ಹಾಗೂ ವಾಹನಗಳ ಓಡಾಟ ಜೋರಾಗಿತ್ತು. ಬಹುತೇಕ ಕಡೆಗಳಲ್ಲಿಯೂ ಅಂಗಡಿ-ಮುಂಗಟ್ಟುಗಳು ತೆರೆದುಕೊಂಡಿದ್ದು, ಗ್ರಾಹಕರು-ಮಾಲಕರು ಬಹಳ ಆತಂಕದ ನಡುವೆಯೇ ಬಿರುಸಿನ ವ್ಯಾಪಾರ-ವಹಿವಾಟು ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Advertisement

ಇನ್ನೊಂದೆಡೆ, ಇಷ್ಟು ದಿನಗಳ ಕಾಲ ಮನೆಯಲ್ಲೇ ಬಂದಿಯಾಗಿ ಹೊರಗಡೆ ಓಡಾಡುವುದಕ್ಕೆ ಸಾಧ್ಯವಾದ ಒಂದಷ್ಟು ಮಂದಿಯು ಈ ಲಾಕ್‌ಡೌನ್‌ ಸಡಿಲಿಕೆಯನ್ನು ದುರುಪಯೋಗಪಡಿಸಿಕೊಂಡು ನಗರದೆಲ್ಲೆಡೆ ಬೇಕಾಬಿಟ್ಟಿ ವಾಹನಗಳಲ್ಲಿ ಸಂಚರಿಸಿದ್ದಾರೆ. ಇದರಿಂದಾಗಿ ಕೆಲವು ಕಡೆ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ಗೂ ಕಾರಣವಾಯಿತು.

ಪರಿಣಾಮಕಾರಿ ಅನುಷ್ಠಾನ
ಕೋವಿಡ್ 19 ಭೀತಿಯಿಂದ ಮಾ. 23ರಿಂದ ದೇಶಾದ್ಯಂತ ಲಾಕ್‌ಡೌನ್‌ ಆದ ಪರಿಣಾಮ ಜಿಲ್ಲೆಯಲ್ಲಿಯೂ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಲಾಗಿತ್ತು. ಮೇ 3ರ ವರೆಗೆ ಜಾರಿಯಲ್ಲಿದ್ದ ಲಾಕ್‌ಡೌನ್‌ ಅನ್ನು ಕೊರೊನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮೇ 17ರ ವರೆಗೆ ವಿಸ್ತರಿಸಿದೆ. ಆದರೆ, ಕಿತ್ತಳೆ ವಲಯದಲ್ಲಿರುವ ದ.ಕ. ಜಿಲ್ಲೆಯಲ್ಲಿ ಕೆಲವೊಂದು ವಲಯಗಳಿಗೆ ಸೋಮವಾರದಿಂದಲೇ ವಿನಾಯಿತಿ ನೀಡಲಾಗಿದೆ. ಬೆಳಗ್ಗೆ 7ರಿಂದ ಸಂಜೆ 7ರ ತನಕ ತುರ್ತು ಅಗತ್ಯಗಳಿಗೆ ಪಾಸ್‌ ಇಲ್ಲದೆಯೇ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಕಾರು, ಬೈಕುಗಳದ್ದೇ ಓಡಾಟ
ಬೆಳಗ್ಗೆ 7 ಗಂಟೆಯಿಂದಲೇ ನಗರದ ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟ ಆರಂಭವಾಗಿದೆ. ಬೆಳಗ್ಗೆ 10.30-11 ಗಂಟೆ ಸುಮಾರಿಗೆ ಎಂ.ಜಿ. ರಸ್ತೆ, ಬಿಜೈ ಕಾಪಿಕಾಡ್‌ ರಸ್ತೆ, ಹಂಪನಕಟ್ಟೆ, ಬಲ್ಮಠ, ಜ್ಯೋತಿ, ಬಂಟ್ಸ್‌ಹಾಸ್ಟೆಲ್‌, ಲಾಲ್‌ಬಾಗ್‌, ಲೇಡಿಹಿಲ್‌, ಉರ್ವಸ್ಟೋರ್‌, ಯೆಯ್ನಾಡಿ ಸಹಿತ ನಗರದ ವಿವಿ ಧೆಡೆಗಳಲ್ಲಿ ಕಾರು, ಬೈಕುಗಳ ಓಡಾಟ ಹೆಚ್ಚಿತ್ತು.

ಕೆಲವು ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್‌ ಪೊಲೀಸರಿದ್ದರೂ ಜಿಲ್ಲಾಡಳಿತ ಪಾಸ್‌ ಇಲ್ಲದೆ ಜನರ ಓಡಾಟಕ್ಕೆ ಅನುಮತಿ ನೀಡಿರುವುದರಿಂದ ಪೊಲೀ ಸರೂ ಏನೂ ಮಾಡುವಂತಿರಲಿಲ್ಲ. ಮಧ್ಯಾಹ್ನದ ಬಳಿಕ ಜನ-ವಾಹನ ಸಂಚಾರ ವಿರಳವಾಗಿತ್ತು.

Advertisement

ಅಂಗಡಿ ಮುಂದೆ ಜನಜಂಗುಳಿ
ಸೋಮವಾರ ಅಂಗಡಿ ಮುಂಗಟ್ಟುಗಳ ಮುಂದೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಖರೀದಿಸುತ್ತಿದ್ದರು. ಕೆಲವು ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತಾದರೂ ಇನ್ನು ಕೆಲವು ಅಂಗಡಿಗಳ ಮುಂದೆ ಜನ ಯಾವುದೇ ಅಂತರ ಪಾಲಿಸದೇ ಖರೀದಿಯಲ್ಲಿ ತೊಡಗಿದ್ದರು. ಆದರೆ, ಬೆರಳೆಣಿಕೆಯಷ್ಟು ಜನರನ್ನು ಹೊರತುಪಡಿಸಿದರೆ ಬಹುತೇಕರು ಖರೀದಿ ವೇಳೆ ಮಾಸ್ಕ್ ಧರಿಸಿದ್ದರು.

ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್‌
ಕಳೆದ 40 ದಿನಗಳಿಂದ ಕಾರನ್ನು ರಸ್ತೆಗಿಳಿಸದ ಪರಿಣಾಮವೋ ಏನೋ ಎಂಬಂತೆ ಬಹುತೇಕ ಮಂದಿ ಅಂಗಡಿಗಳಿಗೆ ದಿನಸಿ ಸಾಮಗ್ರಿ, ಹಣ್ಣು, ತರಕಾರಿ ಖರೀದಿಗೆಂದು ಕಾರಿನಲ್ಲೇ ಆಗಮಿಸಿದ್ದರು. ನಗರದ ಬಿಜೈ ಕಾಪಿಕಾಡ್‌, ಪುರಭವನ ಮುಂಭಾಗ, ಸ್ಟೇಟ್‌ಬ್ಯಾಂಕ್‌ ಸಹಿತ ಕೆಲವು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಪಾರ್ಕಿಂಗ್‌ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿತ್ತು. ರಸ್ತೆಯಲ್ಲೇ ಪಾರ್ಕಿಂಗ್‌ ಮಾಡಿದ್ದರಿಂದಾಗಿ ಇತರ ವಾಹನ ಚಾಲಕರಿಗೆ ರಸ್ತೆಯಲ್ಲಿ ಓಡಾಡುವುದು ಕಷ್ಟವಾಯಿತು.

ತೆರೆದ ಹೊರ ರೋಗಿ ವಿಭಾಗ
ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಸೋಮವಾರ ನಗರದ ವಿವಿಧ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗವನ್ನು ತೆರೆಯಲಾಗಿತ್ತು. ಬೆಳಗ್ಗೆ 8.30ರಿಂದ ಸಂಜೆ 5ರ ತನಕವೂ ವಿವಿಧ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗ ತೆರೆದಿತ್ತು. ಆದರೆ, ರೋಗಿಗಳ ಸಂಖ್ಯೆ ತೀರಾ ಕಡಿಮೆ ಇತ್ತು ಎಂಬುದಾಗಿ ಆಸ್ಪತ್ರೆಗಳ ಸಿಬಂದಿ ಹೇಳಿದ್ದಾರೆ.

ವ್ಯಾಪಾರಕ್ಕೆ ಅನುಕೂಲ
ಸೋಮವಾರ ಬೆಳಗ್ಗಿನಿಂದ ಜನರು ಹೆಚ್ಚಾಗಿ ಬರುತ್ತಿದ್ದರು. ಹಾಗಾಗಿ ವ್ಯಾಪಾರ ಬಿರುಸಾಗಿತ್ತು. ಕಳೆದೊಂದು ತಿಂಗಳು ಖರೀದಿಗೆ ಮಿತಿ ಕಡಿಮೆ ಇದ್ದದರಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಒಮ್ಮೆಲೆ ಬರುತ್ತಿದ್ದರು. ಆದರೆ, ಇದೀಗ ಸಮಯಾವಕಾಶ ಹೆಚ್ಚು ಮಾಡಿರುವುದರಿಂದ ಯಾವುದೇ ರಶ್‌ ಇಲ್ಲದೆ, ವ್ಯಾಪಾರಕ್ಕೆ ಅನುಕೂಲವಾಯಿತು. ಸಂಜೆ 7 ಸನಿಹವಾಗುತ್ತಿದ್ದಂತೆ ಸ್ವಲ್ಪ ಜನರ ಸಂಖ್ಯೆ ಹೆಚ್ಚಾಗಿತ್ತು.
– ಕೆ. ಶ್ರೀಧರ್‌ ಶೆಣೈ, ಬಿಜೈ ಕಾಪಿಕಾಡ್‌

ಖರೀದಿ ಅವಧಿ ಹೆಚ್ಚಾಯ್ತು
ಹಿಂದಿನ ದಿನಗಳಿಗಿಂತಲೂ ಸೋಮವಾರ ಅಂಗಡಿಗೆ ಖರೀದಿಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಮನೆ ಬಳಕೆಯ ವಸ್ತು, ಅಡುಗೆ ಸಾಮಗ್ರಿಗಳೇ ಜನರ ಎಂದಿನ ಆದ್ಯತೆಯಾಗಿತ್ತು. ಇಂದೂ ಕೂಡಾ ಅದೇ ರೀತಿಯಾಗಿತ್ತು. ನನ್ನ ಪ್ರಕಾರ ಕಿತ್ತಳೆ ವಲಯದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ಅಥವಾ ಇನ್ನೆರಡು ಗಂಟೆ ಅವಧಿ ಹೆಚ್ಚಳ ಸಾಕಿತ್ತು. ಅದಕ್ಕೆ ಜನ ಒಗ್ಗಿಕೊಂಡಿದ್ದರು ಕೂಡಾ.
– ರಾಜಗೋಪಾಲ್‌, ವ್ಯಾಪಾರಸ್ಥರು

ಎಂದಿನಂತೆ ಖರೀದಿ
ಲಾಕ್‌ಡೌನ್‌ ಆರಂಭಿಕ ದಿನ ಹೊರತುಪಡಿಸಿದರೆ ಉಳಿದ ದಿನ ಜನರಿಗೆ ಸಮಯದ ಮಿತಿಯೊಳಗೆ ಖರೀದಿಗೆ ಅವಕಾಶ ನೀಡಿರುವುದರಿಂದ ಸೋಮವಾರ ಹೆಚ್ಚೇನು ಜನ ಇರಲಿಲ್ಲ. ಎಂದಿನಂತೆ ಜನ ಬಂದು ಖರೀದಿಯಲ್ಲಿ ತೊಡಗಿದ್ದರು. ಆದ್ಯತೆಯ ಮೇರೆಗೆ ಅಡುಗೆಗೆ ಬೇಕಾದ ಸಾಮಗ್ರಿಗಳನ್ನೇ ಜನ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರೊಂದಿಗೆ ಇತರ ಅವಶ್ಯ ವಸ್ತುಗಳನ್ನೂ ಖರೀದಿಸುತ್ತಾರೆ. ಸಾಮಾಜಿಕ ಅಂತರ ಮರೆಯುವುದಿಲ್ಲ.
– ಮಂಜುನಾಥ್‌ ಮಲ್ಯ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next