Advertisement
– ಇದು ರಾಜ್ಯ ಸರಕಾರದ ಕೆಲವು ಸಚಿವರ ಅಭಿಪ್ರಾಯ. ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಆತಂಕ ಎದುರಾಗಿದ್ದು, ಸೋಮವಾರ ಈ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ. ಶನಿವಾರ ಮತ್ತು ರವಿವಾರ ನಡೆದ ವಾರಾಂತ್ಯ ಕರ್ಫ್ಯೂಗೆ ಜನರೂ ಉತ್ತಮ ಸ್ಪಂದನೆ ತೋರಿದ್ದಾರೆ. ಸರಕಾರವೂ ಒಂದು ತಿಂಗಳು ಲಾಕ್‌ಡೌನ್ ಅಥವಾ ಬಿಗಿನಿಯಮಗಳ ಕರ್ಫ್ಯೂ ವಿಧಿಸುವ ಬಗ್ಗೆ ಆಲೋಚಿಸಿದಂತಿದೆ. ಇದರ ನಡುವೆ “ಉದಯವಾಣಿ’ ಪ್ರಮುಖ ಸಚಿವರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ.
ಸೋಮವಾರ ಬೆಳಗ್ಗೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಂದರ್ಭ ಲಾಕ್‌ಡೌನ್ ಬಗ್ಗೆ ನಿರ್ಧಾರ ಆಗುವ ಸಾಧ್ಯತೆ ಇದೆ. ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸೂಕ್ತ ಎಂಬುದು ತಾಂತ್ರಿಕ ಸಮಿತಿಯ ಅಭಿಪ್ರಾಯ. ಇತ್ತೀಚೆಗಷ್ಟೇ ರಾಜ್ಯಪಾಲರ ನೇತೃತ್ವದಲ್ಲಿ ನಡೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕೆ. ಲಾಕ್ ಡೌನ್ ಜಾರಿಗೊಳಿಸುವಂತೆ ಸಲಹೆ ನೀಡಿದ್ದರು. ತಾಂತ್ರಿಕ ಸಮಿತಿ ಸಲಹೆ ಆಧರಿಸಿ ಕ್ರಮ ಕೈಗೊಳ್ಳಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಇವೆಲ್ಲವೂ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
Related Articles
- ವಾರಾಂತ್ಯ ಕರ್ಫ್ಯೂ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆದಿಲ್ಲ. ಸದ್ಯಕ್ಕೆ ಯಥಾಸ್ಥಿತಿ ಮುಂದುವರಿಯಲಿದೆ. ವಾರದ ದಿನಗಳಿಗೂ ವಿಸ್ತರಿಸುವ ಊಹಾಪೋಹಗಳ ಕುರಿತು ವ್ಯಾಖ್ಯಾನ ಮಾಡುವುದಿಲ್ಲ.
– ಬಸವರಾಜ ಬೊಮ್ಮಾಯಿ, ಗೃಹ ಸಚಿವ
Advertisement
- ಬೆಂಗಳೂರಿಗೆ ಲಾಕ್‌ಡೌನ್ ಅಗತ್ಯ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಬೆಂಗಳೂರಿನ ಪರಿಸ್ಥಿತಿ ಗಂಭೀರವಾಗಿದೆ. ಇಡೀ ರಾಜ್ಯಕ್ಕೆ ಒಂದೇ ರೀತಿಯ ನಿಯಮ ಜಾರಿಗೊಳಿಸುವ ಬದಲು ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ನಿಯಮ ಜಾರಿಗೊಳಿಸಬೇಕು.– ಲಕ್ಷ್ಮಣ ಸವದಿ, ಡಿಸಿಎಂ - ಜನರು ನಾವು ನಿರೀಕ್ಷಿಸಿದಷ್ಟು ಸಹಕಾರ ನೀಡುತ್ತಿಲ್ಲ. ಹೀಗಾಗಿ ಇನ್ನಷ್ಟು ಕಠಿನ ನಿಯಮ ಜಾರಿಯಾಗಬೇಕು. ಸೋಂಕು ಹಳ್ಳಿಗಳಿಗೆ ಹರಡಿದರೆ ಕಷ್ಟವಾಗಬಹುದು. ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಬಾರದು. ಆಯಾ ದಿನವೇ ದುಡಿದು ತಿನ್ನುವ ಜನರಿದ್ದಾರೆ.
– ಗೋವಿಂದ ಕಾರಜೋಳ, ಡಿಸಿಎಂ - ಕೊರೊನಾ ಸರಪಣಿಯನ್ನು 14 ದಿನ ತುಂಡರಿಸಬೇಕಾಗಿದೆ. ಸೋಮವಾರದಿಂದ ವಾರದ ಇತರ ದಿನಗಳ ಮಾರ್ಗಸೂಚಿ ಜಾರಿಯಲ್ಲಿರುತ್ತದೆ. ಬೆಂಗಳೂರಿಗೆ ಪ್ರತ್ಯೇಕ ನಿಯಮದ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನವಾಗಲಿದೆ. ಸಿಎಂ ತೀರ್ಮಾನ ಅಂತಿಮ.
– ಆರ್. ಅಶೋಕ್, ಕಂದಾಯ ಸಚಿವ - ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಿ ಅಪಾಯದ ಪರಿಸ್ಥಿತಿ ತಲುಪಿದ್ದೇವೋ ಅಲ್ಲಿ ಜನರ ಸಂಪರ್ಕ ಕಡಿತ ಮಾಡುವ ದೃಷ್ಟಿಯಿಂದ ಲಾಕ್‌ಡೌನ್ ಘೋಷಣೆಯ ಬಗ್ಗೆ ಪರಿಶೀಲನೆ ಮಾಡಬಹುದು.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ - ಸಂಪೂರ್ಣ ಲಾಕ್‌ಡೌನ್ ಮಾಡಿದರೆ ಆರ್ಥಿಕ ಚಟುವಟಿಕೆಗೆ ಕಷ್ಟವಾಗುತ್ತದೆ. ಕಾರ್ಮಿಕರ ಬದುಕು ದುಸ್ತರವಾಗುತ್ತದೆ. ಇರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಪೂರ್ಣ ಲಾಕ್‌ಡೌನ್ ಮಾಡುವುದರಿಂದ ಆರ್ಥಿಕ ಚಟುವಟಿಕೆ ಇಲ್ಲದೆ ಜನರು ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ.
– ಜಗದೀಶ್ ಶೆಟ್ಟರ್, ಬೃಹತ್ ಕೈಗಾರಿಕಾ ಸಚಿವ - ನಾನು ವೈಯಕ್ತಿಕವಾಗಿ ಲಾಕ್‌ಡೌನ್ ಬೇಕು -ಬೇಡ ಎಂದರೆ ನಡೆಯುವುದಿಲ್ಲ. ಸಾಂಘಿಕ ನಿರ್ಧಾರ ಆಗಬೇಕು. ಸಿಎಂ ನೇತೃತ್ವದ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳುತ್ತೇವೆ.
– ವಿ. ಸೋಮಣ್ಣ, ವಸತಿ ಸಚಿವ - ಬೆಂಗಳೂರಿನಲ್ಲಿ ಲಾಕ್‌ಡೌನ್ ಆಗುವ ಭಯದಿಂದ ಜನರು ಹಳ್ಳಿಗಳಿಗೆ ತೆರಳಿದ್ದಾರೆ. ಅಲ್ಲಿ ಸರಿಯಾದ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರುವ ಮೂಲಕ ನಿಯಂತ್ರಣ ಮಾಡಬಹುದು.
– ಬಿ.ಸಿ. ಪಾಟೀಲ್, ಕೃಷಿ ಸಚಿವ - ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಇನ್ನೂ ಕಠಿನ ನಿಯಮ ಅಗತ್ಯವಿದೆ. ಬೇರೆ ಕಂಪೆನಿಗಳೂ ಸಾಧ್ಯವಾದಷ್ಟು ವರ್ಕ್ ಫ್ರಂ ಹೋಮ್ ಮಾಡಬೇಕು.
– ಅರವಿಂದ ಲಿಂಬಾವಳಿ, ಕನ್ನಡ ಮತ್ತು ಸಂಸ್ಕೃತಿ ಸಚಿವ - ಸಂಪೂರ್ಣ ಲಾಕ್ ಡೌನ್ ಬದಲು ಆರ್ಥಿಕ ಚಟುವಟಿಕೆ ನಿಲ್ಲಿಸದೆ, ಬಿಗಿ ಕ್ರಮ ಕೈಗೊಂಡು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಬೇಕು.
– ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ - ತಾಂತ್ರಿಕ ಸಮಿತಿ ಕೆಲವು ಶಿಫಾರಸು ಮಾಡಿದೆ. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸಂಪುಟದಲ್ಲಿ ಚರ್ಚಿಸಿ ಲಾಕ್‌ಡೌನ್ ಬಗ್ಗೆ ತೀರ್ಮಾನಿಸಲಾಗುವುದು.
– ಎಸ್.ಟಿ. ಸೋಮಶೇಖರ್, ಸಹಕಾರ ಸಚಿವ - ರಾತ್ರಿ, ವಾರಾಂತ್ಯ ಕರ್ಫ್ಯೂಗೆ ಜನತೆ ಸಹಕಾರ ನೀಡಿದ್ದಾರೆ. ಇದು ಮುಂದುವರಿದರೆ ನಾವು ಕೊರೊನಾ ವಿರುದ್ಧ ಸಮರದಲ್ಲಿ ಯಶಸ್ವಿಯಾಗುತ್ತೇವೆ.
– ಸುರೇಶ್ ಕುಮಾರ್, ಶಿಕ್ಷಣ ಸಚಿವ - ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ. ಸದ್ಯದ ಪರಿಸ್ಥಿಯಲ್ಲಿ ಕೋವಿಡ್ ಚೈನ್ ಬ್ರೇಕ್ ಮಾಡಲು ಇನ್ನೂ ಕಠಿನ ನಿಯಮ ಜಾರಿ ಮತ್ತು ಲಾಕ್‌ಡೌನ್ ಅನಿವಾರ್ಯ ಆಗಬಹುದು.
– ಪ್ರಭು ಚೌವ್ಹಾಣ್, ಪಶು ಸಂಗೋಪನ ಸಚಿವ - ವಾರಾಂತ್ಯ ಕರ್ಫ್ಯೂ ಯಶಸ್ವಿಯಾಗಿದೆ. ಇದನ್ನು ಮುಂದಿನ ವಾರಾಂತ್ಯವೂ ಮುಂದುವರಿಸುವ ಬಗ್ಗೆ ಸಿಎಂ ಮತ್ತವರ ಸಂಪುಟ ಸದಸ್ಯರು ನಿರ್ಧರಿಸುತ್ತಾರೆ.
– ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ