Advertisement

ಜಿಲ್ಲೆಯಲ್ಲಿ ಲಾಕ್‌ಡೌನ್‌ ಸ್ವಲ್ಪ ಸಡಿಲಿಕೆ; ಡಿಸಿ ಎಚ್ಚರಿಕೆ

06:25 PM May 04, 2020 | Suhan S |

ಮೈಸೂರು: ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಲಾಕ್‌ ಡೌನ್‌ ಸಡಿಲಗೊಳಿಸಲಾಗಿದ್ದು, ಸಾರ್ವಜನಿಕರು ಎಂದಿನಂತೆ ಎಚ್ಚರಿಕೆಯಿಂದ ಹಾಗೂ ಅಗತ್ಯವಿದ್ದರೆ ಮಾತ್ರ ಹೊರಗೆ ಬಂದು ವ್ಯವಹರಿಸಬೇಕು ಎಂದು ಡೀಸಿ ಅಭಿರಾಮ್‌ ಜಿ. ಶಂಕರ್‌ ಹೇಳಿದರು.

Advertisement

ಏ. 4 ರಿಂದ ಈಗ ಇರುವ ಅಗತ್ಯ ವಸ್ತುಗಳ ಸೇವೆ ಜೊತೆಗೆ ಹೆಚ್ಚುವರಿ ನಗರ ವ್ಯಾಪ್ತಿಯಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ವಸ್ತು ಉತ್ಪಾದಿಸುವ ಕೈಗಾರಿಕೆ ಆರಂಭಿಸಬಹುದು. ನಂಜನಗೂಡಿನ ಜ್ಯುಬಿಲಿಯಂಟ್‌ ಲೇಔಟ್‌, ದೇವಿರಮ್ಮನಹಳ್ಳಿ ಬಡವಾಣೆ, ಪ್ರಭಾಕರ ಲೇಔಟ್‌, ರಾಮಸ್ವಾಮಿ ಲೇಔಟ್‌ ಮುಂತಾದ ಕಡೆಯಿಂದ ಬರುವ ಕಾರ್ಮಿಕರನ್ನು ಹೊರತುಪಡಿಸಿ ಬೇರೆ ಕಾರ್ಮಿಕರನ್ನು ಬಳಸಿಕೊಳ್ಳಬಹುದು. ಈ ಎಲ್ಲಾ ಕಾರ್ಖಾನೆಯಲ್ಲಿಯೂ 3ನೇ ಒಂದರಷ್ಟು ಕಾರ್ಮಿಕರು ಮಾತ್ರ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಕಲ್ಲು, ಜಲ್ಲಿ, ಕಬ್ಬಿಣ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ನಗರ ಪ್ರದೇಶದಲ್ಲಿ ಮಾರುಕಟ್ಟೆ ಅಥವಾ ಕಾಂಪ್ಲೆಕ್ಸ್ ನಂತಹ ಮಳಿಗೆಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ. ಉಳಿದಂತೆ ಇತರೆ ಬಡಾವಣೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಎಲ್ಲಾ ರೀತಿಯ ಅಂಗಡಿ ತೆರೆಯಬಹುದು. ಮದುವೆ ಮಾಡುವವರು 50 ಮಂದಿ ಮೀರದಂತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ಮಂದಿ ಸೇರಬಾರದು. ಫೇಸ್‌ ಮಾಸ್ಕ್ ಬಳಸುವುದು ಕಡ್ಡಾಯೆ. ಗ್ರಾಮಾಂತರ ಪ್ರದೇಶದಲ್ಲಿ ಪಿಡಿಒ, ನಗರ ಪ್ರದೇಶದಲ್ಲಿ ಪೊಲೀಸರಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಂತವರನ್ನು ಪರಿಶೀಲಿಸಿ 2 ವಾರ ಕ್ವಾರಂಟೈನ್‌ ನಲ್ಲಿ ಕಡ್ಡಾಯವಾಗಿ ಇರಿಸಲಾಗುತ್ತದೆ ಎಂದರು.

ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ನಗರದಲ್ಲಿ 91 ರಸ್ತೆಗಳನ್ನು ವಾಣಿಜ್ಯ ರಸ್ತೆ ಎಂದು ಗುರುತಿಸಲಾಗಿದ್ದು, ಅಗತ್ಯ ವಸ್ತು ಹೊರತುಪಡಿಸಿ ಬೇರೆ ಯಾವ ಮಳಿಗೆ ತೆರೆಯಲು ಅವಕಾಶವಿಲ್ಲ ಎಂದು ತಿಳಿಸಿದರು. ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, 24 ಗಂಟೆ ಅವಧಿಯನ್ನು 3 ಹಂತದಲ್ಲಿ ವಿಭಾಗಿಸಲಾಗಿದೆ. ಬೆಳಗ್ಗೆ 7 ರಿಂದ 12 ರವರೆಗೆ ಸಾಧ್ಯವಾದಷ್ಟು 2 ಕಿ.ಮೀ. ವ್ಯಾಪ್ತಿಯಲ್ಲಿಯೇ ಅಗತ್ಯ ವಸ್ತು ಖರೀದಿಸಬೇಕು. ಲಾಕ್‌ ಡೌನ್‌ ಸಡಿಲ ಎಂದು ನಿರ್ಲಕ್ಷ್ಯ ಬೇಡ ಎಂದರು. ಗುಂಪು ಗೂಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌, ಬೇರೆ ಜಿಲ್ಲೆಗೆ ತೆರಳುವವರಿಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಮಾಹಿತಿ ಕಲೆಹಾಕಿ ಡಿಸಿ ಕಚೇರಿ ಮೂಲಕ ಪಾಸ್‌ ನೀಡುತ್ತಾರೆ. ಬೇರೆ ರಾಜ್ಯಕ್ಕೆ ಹೋಗುವುದಿದ್ದರೆ ಆನ್‌ ಲೈನ್‌ ಅಪ್ಲೇ ಮಾಡಬೇಕಾಗುತ್ತದೆ. ಗುಂಡ್ಲು ಪೇಟೆಯಿಂದ ಬರಬೇಕಾದರೆ, ಚಾಮರಾಜನಗರ, ಸಂತೆ ಮರಹಳ್ಳಿ, ಮೂಗೂರು ಕಡೆಯಿಂದ ಮೈಸೂರಿಗೆ ಬರಬೇಕು. ಅಲ್ಲಿ ಪರೀಕ್ಷಿಸಿ ಕ್ವಾರಂಟೈನ್‌ ಮಾಡಲಾಗುತ್ತದೆ. ಮಡಿಕೇರಿ, ಕುಟ್ಟ, ವಿರಾಜಪೇಟೆ, ನಾಪೋಕ್ಲು ಸೂಳ್ಯ ಕಡೆಯಿಂದ ಬರುವವರು ಕೊಪ್ಪ ಮಾರ್ಗ ದಲ್ಲಿಯೇ ಬರಬೇಕು. ಹಾಸನದವರು ದೊಡ್ಡಹಳ್ಳಿ ಮಾರ್ಗದಲ್ಲಿಯೇ ಬರಬೇಕು ಎಂದು ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next