ಬೀಜಿಂಗ್: ಕೋವಿಡ್ 19 ಸೋಂಕು ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಳವಾದ ಪರಿಣಾಮ ಉತ್ತರ ನಗರವಾದ ಕ್ಸಿಯಾನ್ ನಲ್ಲಿ ಚೀನಾ ಕಠಿಣ ಲಾಕ್ ಡೌನ್ ಜಾರಿಗೊಳಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಗಂಧದಗುಡಿಯ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ
ಕೋವಿಡ್ ಪ್ರಕರಣ ನಿಯಂತ್ರಿಸಲು ಕ್ಸಿಯಾನ್ ನಗರದ 13 ಮಿಲಿಯನ್ ನಷ್ಟು ನಿವಾಸಿಗಳು ಲಾಕ್ ಡೌನ್ ಅನುಭವಿಸುವಂತಾಗಿದೆ. ಡಿಸೆಂಬರ್ 17ರಿಂದ ಸತತ ಆರು ದಿನಗಳಿಂದ ಕ್ಸಿಯಾನ್ ನಿವಾಸಿಗಳಲ್ಲಿ ಕೋವಿಡ್ ಸೋಂಕು ಪ್ರಕರಣ ದೃಢಪಡುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ವರದಿ ವಿವರಿಸಿದೆ.
ಚೀನಾದ ಹೊರವಲಯದಲ್ಲಿಯೂ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಆದರೆ ಕ್ಸಿಯಾನ್ ನಗರದಲ್ಲಿ ಒಮಿಕ್ರಾನ್ ಸೋಂಕು ಪ್ರಕರಣ ಈವರೆಗೂ ಪತ್ತೆಯಾಗಿಲ್ಲ ಎಂದು ಚೀನಾ ಸರ್ಕಾರ ತಿಳಿಸಿದೆ.
ತುರ್ತು ಪ್ರಕರಣಗಳನ್ನು ಹೊರತುಪಡಿಸಿ ಕ್ಸಿಯಾನ್ ನಗರವಾಸಿಗಳು ಯಾವುದೇ ಕಾರಣಕ್ಕೂ ಮನೆಯಿಂದ ಹೊರಹೋಗುವಂತಿಲ್ಲ. ಅಲ್ಲದೇ ಎಲ್ಲಾ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿ ಎರಡು ದಿನಕ್ಕೊಮ್ಮೆ ಮನೆಯ ಒಬ್ಬ ಸದಸ್ಯರು ದಿನನಿತ್ಯದ ದಿನಸಿ ಸಾಮಾನು ತರಲು ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಚೀನಾದಲ್ಲಿ ಈವರೆಗೆ ಏಳು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ ಗುಯಾಂಗ್ ಜುಹೂ ನಲ್ಲಿ ನಾಲ್ಕು ಪ್ರಕರಣ ಹಾಗು ದಕ್ಷಿಣ ನಗರವಾದ ಚಾಂಗ್ಶಾ ದಲ್ಲಿ ಎರಡು ಹಾಗೂ ಟಿಯಾನ್ ಜಿನ್ ಪ್ರದೇಶದಲ್ಲಿ ಒಂದು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.