ಮಹಾನಗರ, ಜ. 3: ಒಂದೊಮ್ಮೆ ಕರಾವಳಿಯ ಲ್ಲಿದ್ದ ಥಿಯೇಟರ್‌ಗಳ ಸಂಖ್ಯೆ 30ಕ್ಕೂ ಅಧಿಕ. ಆದರೆ ಈಗ ಕರಾವಳಿಯಲ್ಲಿರುವ ಸಿಂಗಲ್ ಥಿಯೇಟರ್‌ಗಳ ಸಂಖ್ಯೆ ಕೇವಲ 19. ಇಷ್ಟೂ ಸಿನೆಮಾ ಮಂದಿರದಲ್ಲಿ 9 ತಿಂಗಳುಗಳಿಂದ ಚಲನಚಿತ್ರಗಳೇ ಪ್ರದರ್ಶನವಾಗುತ್ತಿಲ್ಲ; ಪರಿಣಾಮವಾಗಿ ಮತ್ತಷ್ಟು ಸಿನೆಮಾ ಮಂದಿರಗಳು ಮುಚ್ಚುವ ಆತಂಕದಲ್ಲಿದೆ!
ಕರಾವಳಿಯಲ್ಲಿ ಸಿನೆಮಾ ನೋಡುವವರ ಸಂಖ್ಯೆ ಸಾಕಷ್ಟಿದೆ. ಇದೇ ಕಾರಣದಿಂದ ಸಿಂಗಲ್ ಥಿಯೇಟರ್‌ಗಳು ಕೂಡ ಜಾಸ್ತಿ ಇತ್ತು. ಜತೆಗೆ ಮಲ್ಟಿಫ್ಲೆಕ್ಸ್‌ಗಳು ಕೂಡ ಪ್ರವೇಶ ಪಡೆಯಿತು. ಆದರೆ ಬಹು ನಿರೀಕ್ಷೆಯಿಂದ ಆರಂಭವಾದ ಸಿಂಗಲ್ ಥಿಯೇಟರ್‌ಗಳು ಒಂದೊಂ ದಾಗಿ ಬಾಗಿಲು ಹಾಕುತ್ತ ಬಂದಿದ್ದು, ಇದೀಗ 19ಕ್ಕೆ ಸೀಮಿತವಾಗಿದೆ. ಆದರೆ, ಸದ್ಯದ ಕೊರೊನಾ ಆಘಾತದಿಂದ ಇನ್ನೆಷ್ಟು ಥಿಯೇಟರ್‌ಗಳು ಬಾಗಿಲು ಹಾಕಲಿದೆಯೇ? ಎಂಬ ಆತಂಕವೂ ಎದುರಾಗಿದೆ.
ಕೋವಿಡ್ ಆರಂಭಕ್ಕೂ ಮುನ್ನ ಈ ಎಲ್ಲ ಥಿಯೇಟರ್‌ಗಳಲ್ಲಿ ತುಳು ಸಹಿತ ಬೇರೆ ಭಾಷೆಯ ಸಿನೆಮಾಗಳು ಪ್ರದರ್ಶನವಾಗುತ್ತಿದ್ದವು. ಆದರೆ ಕೋವಿಡ್ ಹೊಡೆತ ಎದುರಾದ ತತ್‌ಕ್ಷಣವೇ ಈ ಥಿಯೇಟರ್‌ಗಳಿಗೆ ಬಹುದೊಡ್ಡ ನಷ್ಟ ಎದುರಾಯಿತು. ಬಂದ್ ಆದ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಮಧ್ಯಮವರ್ಗದ ಜನರು, ಶ್ರಮಿಕ ವರ್ಗ ಸಿನೆಮಾ ಇಲ್ಲದೆ ಬೇಸರಗೊಂಡಿದ್ದಾರೆ. ಮಲ್ಟಿಫ್ಲೆಕ್ಸ್‌ಗಳಿಗೆ ಸಿನೆಮಾ ದೊರಕಿದರೂ ಸಿಂಗಲ್ ಥಿಯೇಟರ್‌ಗೆ ಹೊಸ ಸಿನೆಮಾ ಬರುತ್ತಿಲ್ಲ; ಹಳೆ ಸಿನೆಮಾ ಹಾಕಿದರೆ ಜನ ಬರುತ್ತಿಲ್ಲ. ಹೀಗಾಗಿ ಆದಾಯಕ್ಕೆ ಹೊಡೆತ ಬಿದ್ದಂತಾಗಿದೆ. ಮುಂದೆ ತುಳು ಸಿನೆಮಾಗಳಿಗೆ ಏನಾಗಬಹುದು ಎಂಬ ಆತಂಕ ಎದುರಾಗಿದೆ.
ಮಂಗಳೂರಿನಲ್ಲಿ 3-4 ಕಿ.ಮೀ. ವ್ಯಾಪ್ತಿಯ ಒಳಗಡೆ ಸುಮಾರು 10 ಥಿಯೇಟರ್‌ಗಳಿತ್ತು. ಈಗ ಅಮೃತ್, ಪ್ಲಾಟಿನಂ, ನ್ಯೂಚಿತ್ರಾ ಥಿಯೇಟರ್‌ಗಳು ಈಗಾಗಲೇ ಬಾಗಿಲು ಹಾಕಿದ್ದರೆ, ಸೆಂಟ್ರಲ್ ಟಾಕೀಸ್ ಇತ್ತೀಚೆಗೆ ಪ್ರದರ್ಶನ ಸ್ಥಗಿತಗೊಳಿಸಿದೆ. ಜ್ಯೋತಿ ಥಿಯೇಟರ್ ಕೆಲವೇ ದಿನದಲ್ಲಿ ಮಲ್ಟಿಫ್ಲೆಕ್ಸ್ ರೂಪಕ್ಕೆ ಬದಲಾ ವಣೆಗೊಳ್ಳಲು ಸಿದ್ಧತೆ ನಡೆಯುತ್ತಿದೆ. ಉಳಿದಂತೆ, ಸುಚಿತ್ರಾ, ಪ್ರಭಾತ್, ರಾಮಕಾಂತಿ, ರೂಪವಾಣಿ, ಬಾಲಾಜಿ ಥಿಯೇಟರ್ ಮಾತ್ರ ಇದೆ. ಕೊರೊನಾ ಬಳಿಕ ಇಲ್ಲಿ ಒಂದು ಸಿನೆಮಾ ಪ್ರದರ್ಶನವಾಗಿಲ್ಲ. ಉಡುಪಿಯಲ್ಲಿ ಕಲ್ಪನಾ, ಅಲಂಕಾರ್, ಆಶೀರ್ವಾದ್, ಡಯಾನ, ಕಾರ್ಕಳದ ರಾಧಿಕ, ಪ್ಲಾನೆಟ್, ಕುಂದಾಪುರ ವಿನಾಯಕ, ಬೈಂದೂರು ಶಂಕರ್, ಸುರತ್ಕಲ್‌ನ ನಟರಾಜ್, ಮೂಡುಬಿದಿರೆ ಅಮರಶ್ರೀ, ಪುತ್ತೂರು ಅರುಣಾ, ಬೆಳ್ತಂಗಡಿ ಭಾರತ್, ಸುಳ್ಯ ಸಂತೋಷ್ ಸಿನೆಮಾ ಮಂದಿರವಿದ್ದು, ಕೊರೊನಾ ಬಳಿಕ ಇಲ್ಲಿ ಸಿನೆಮಾ ಪ್ರದರ್ಶನ ನಡೆದಿಲ್ಲ. ಈ ಮಧ್ಯೆ ರಾಮಕಾಂತಿ, ಡಯಾನದಲ್ಲಿ ಕೊಂಚ ದಿನ ಪ್ರದರ್ಶನ ಮಾಡಿತಾದರೂ ಜನರ ಸಂಖ್ಯೆ ಕಡಿಮೆಯಿದೆ.
ಕರಾವಳಿಯ ಬಹುತೇಕ ಸಿಂಗಲ್ ಥಿಯೇಟರ್‌ಗಳಲ್ಲಿ ವಾರದ ಬಾಡಿಗೆ ಆಧಾರದಲ್ಲಿ ಸಿನೆಮಾ ಪ್ರದರ್ಶನ ಮಾಡಲಾಗುತ್ತದೆ. ಚಿತ್ರ ನಿರ್ಮಾಪಕ ಗರಿಷ್ಠ 1.20 ಲಕ್ಷ ರೂ. (ಕಡಿಮೆಯೂ ಇದೆ) ವಾರಕ್ಕೆ ಪಾವತಿಸಿ ಪ್ರದರ್ಶನ ಮಾಡಲು ಅವಕಾಶವಿದೆ. ವಿದ್ಯುತ್, ಸಂಬಳ ಸಹಿತ ಒಟ್ಟು ನಿರ್ವಹಣೆಗೆ ಆ ಥಿಯೇಟರ್‌ಗೆ ಪ್ರತೀ ದಿನಕ್ಕೆ ಕನಿಷ್ಠ 20 ಸಾವಿರ ರೂ. ಖರ್ಚಾಗುತ್ತದೆ. ಕೊರೊನಾಕ್ಕಿಂತ ಮೊದಲು ಸಾಮಾನ್ಯವಾಗಿ ಶೇ.60ರಷ್ಟು ಸೀಟುಗಳು ಭರ್ತಿಯಾಗುತ್ತಿತ್ತು. ಹಲವು ಸಿಂಗಲ್ ಥಿಯೇಟರ್ ಇದೀಗ ಮಲ್ಟಿಫ್ಲೆಕ್ಸ್ ರೂಪಕ್ಕೆ ಬದಲಾಗಲು ಅಣಿಯಾಗುತ್ತಿವೆ.
ಬಾಗಿಲು ಹಾಕಿದ ಥಿಯೇಟರ್‌ಗಳೇ ಅಧಿಕ! :
ಕಡಬದಲ್ಲಿ ಜಾನ್ಸನ್, ಉಪ್ಪಿನಂಗಡಿಯಲ್ಲಿ ಪ್ರೀತಂ, ಪುತ್ತೂರಿನಲ್ಲಿ ನವರಂಗ್, ಸಂಗೀತಾ, ಬೆಳ್ಳಾರೆಯ ಜುಪಿಟರ್, ಸುಳ್ಯದಲ್ಲಿ ಪ್ರಕಾಶ್, ವಿಟ್ಲದಲ್ಲಿ ಕವಿತಾ ಟಾಕೀಸ್ ಇತ್ತು. ಅದಕ್ಕಿಂತಲೂ ಮೊದಲು ರಾಜಹಂಸ, ಪುತ್ತೂರಿನಲ್ಲಿ ಮಯಾರ ಟಾಕೀಸ್ ಇತ್ತು. ಉಜಿರೆಯಲ್ಲಿ ಸಂಧ್ಯಾ, ಬಂಟ್ವಾಳದಲ್ಲಿ ವಿನಾಯಕ, ವಿಜಯಲಕ್ಷ್ಮೀ, ಕಲ್ಲಡ್ಕದಲ್ಲಿ ಮಾರುತಿ, ಪಾಣೆಮಂಗಳೂರು ಟಾಕೀಸ್, ನೆಲ್ಯಾಡಿ, ಮೂಡುಬಿದಿರೆಯಲ್ಲಿ ವಿಜಯ ಟಾಕೀಸ್, ಕೈಕಂಬದಲ್ಲಿ ಮಂಜುನಾಥ ಟಾಕೀಸ್, ಕಾರ್ಕಳದಲ್ಲಿ ಸನ್ಮಾನ ಟಾಕೀಸ್, ಕಿನ್ನಿಗೋಳಿಯಲ್ಲಿ ಅಶೋಕ ಟಾಕೀಸ್, ಮೂಲ್ಕಿಯಲ್ಲಿ ಭವಾನಿ ಶಂಕರ್, ಸುರತ್ಕಲ್‌ನಲ್ಲಿ ನವರಂಗ್, ಪಡುಬಿದ್ರಿಯಲ್ಲಿ ಗುರುದೇವ, ಕಾಪುವಿನಲ್ಲಿ ವೆಂಕಟೇಶ್ ಟಾಕೀಸ್, ಬ್ರಹ್ಮಾವರದಲ್ಲಿ ಜಯಭಾರತ್ ಟಾಕೀಸ್, ಸಾಸ್ತಾನದಲ್ಲಿ ನಂದಾ ಟಾಕೀಸ್, ಸಿದ್ಧಾಪುರ, ಬಸೂÅರು, ಹೆಬ್ರಿ, ಕೋಟೇಶ್ವರದಲ್ಲಿ ಟೂರಿಂಗ್ ಟಾಕೀಸ್, ಗಂಗೊಳ್ಳಿ, ಉಪ್ಪುಂದ, ತೊಕ್ಕೊಟ್ಟು ಶ್ರೀಕೃಷ್ಣಾ, ಉಳ್ಳಾಲ ಶಾಂತಿ ಥಿಯೇಟರ್, ಕುಂದಾಪುರ ಹಾಗೂ ಉಡುಪಿಯಲ್ಲಿದ್ದ ಗೀತಾಂಜಲಿ, ಕುಂದಾಪುರದಲ್ಲಿ ಪೂರ್ಣಿಮಾ, ಬಿ.ಸಿ.ರೋಡ್‌ನ ನಕ್ಷತ್ರ ಥಿಯೇಟರ್ ಈಗ ಬಾಗಿಲು ಹಾಕಿದೆ.
ಜನವರಿ ವೇಳೆಗೆ ನಿರೀಕ್ಷೆ :
ಕೋವಿಡ್ ಬಳಿಕ ಕರಾವಳಿಯ ಸಿಂಗಲ್ ಥಿಯೇಟರ್‌ಗಳಲ್ಲಿ ಸಿನೆಮಾ ಪ್ರದರ್ಶನ ಆರಂಭವಾಗಿಲ್ಲ. ಹೊಸ ಸಿನೆಮಾ ಬಿಡುಗಡೆ ಆಗದ ಕಾರಣ, ಹಳೆಯ ಸಿನೆಮಾಗಳಿಗೆ ಜನರು ಹೆಚ್ಚು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸಿಂಗಲ್ ಥಿಯೇಟರ್‌ಗಳು ಇನ್ನೂ ಆರಂಭವಾಗಿಲ್ಲ. ಆದರೆ ಶೀಘ್ರದಲ್ಲಿ ಹೊಸ ಸಿನೆಮಾ ಬರುವ ಮೂಲಕ ಥಿಯೇಟರ್ ತೆರೆಯುವ ನಿರೀಕ್ಷೆಯಿದೆ.
-ಬಾಲಕೃಷ್ಣ ಶೆಟ್ಟಿ ಪುತ್ತೂರು, ಚಿತ್ರ ಹಂಚಿಕೆದಾರರು
– ದಿನೇಶ್ ಇರಾ