ಬೆಂಗಳೂರು: ಲಾಕ್‌ಡೌನ್ ಅವಧಿ ಮುಗಿಯುತ್ತಿದ್ದಂತೆ ಹೇರ್‌ಕಟ್ ಮಾಡಿಸಿಕೊಳ್ಳುವುದು, ನೂಕುನುಗ್ಗಲಿನಲ್ಲಿ ನುಸುಳಿ ಊರು ಸೇರುವುದು ಒಳಗೊಂಡಂತೆ ಹಲವು ಲೆಕ್ಕಾಚಾರಗಳು ಈಗಿನಿಂದಲೇ ನಿಮ್ಮ ಮನಸ್ಸಿನಲ್ಲಿ ಸುಳಿದಾಡುತ್ತಿರಬಹುದು. ಇವುಗಳ ಪಟ್ಟಿಗೆ ಇನ್ನೂ ಒಂದು ಆದ್ಯತೆ ಮೇರೆಗೆ ಸೇರಿಸಿಕೊಳ್ಳಬೇಕಾದ ಅಂಶವವಿದೆ. ಅದು- ಲಾಕ್‌ಡೌನ್ ಮುಗಿಯುತ್ತಿದ್ದಂತೆ ಒಳ ಉಡುಪುಗಳ ಖರೀದಿ!
ಏಕೆಂದರೆ, ದಕ್ಷಿಣ ಭಾರತದ ಪ್ರಮುಖ ಮತ್ತು ಏಕೈಕ ಎಂದೂ ಕರೆಯಲಾಗುವ ಒಳ ಉಡುಪುಗಳ ಉತ್ಪಾದನಾ ಕೇಂದ್ರವಾದ ತಮಿಳುನಾಡಿನ ತಿರುಪುರ, ಸುತ್ತಲಿನ ಪ್ರದೇಶಗಳಲ್ಲಿ ಅತಿ ಹೆಚ್ಚು ಸುಮಾರು 108 ಉತ್ಪಾದನಾ ಕೇಂದ್ರಗಳು ಕೋವಿಡ್ ಸೋಂಕಿತ ಪ್ರಕರಣಗಳಿಂದ ನರಳುತ್ತಿದೆ. ತಿಂಗಳಿಂದ ಇಡೀ ಕೈಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಈಗಿನಿಂದಲೇ ಉತ್ಪಾದನೆ ಕಾರ್ಯ ಪುನಾರಂಭಗೊಂಡರೂ ಸಹಜ ಪೂರೈಕೆಗೆ ಕನಿಷ್ಠ 3 ತಿಂಗಳು ಬೇಕಾಗುತ್ತದೆ. ಹೀಗಾಗಿ ನಿರೀಕ್ಷಿತ ಪ್ರಮಾಣದ ಲಭ್ಯತೆ ಅನುಮಾನ. ಹಾಗೊಂದು ವೇಳೆ ಈ ಲಾಕ್‌ಡೌನ್ ಇನ್ನಷ್ಟು ದಿನ ಮುಂದುವರಿದರೆ, ಕೊರತೆ ಬಿಸಿ ತುಸು ತೀವ್ರವಾಗಿ ತಟ್ಟಲಿದೆ.
ಕಚ್ಚಾ ವಸ್ತು ಇದ್ರೂ; ಕಾರ್ಮಿಕರಿಲ್ಲ!: ದಕ್ಷಿಣದಲ್ಲಿ ತಿರುಪುರ ಮತ್ತು ಉತ್ತರದಲ್ಲಿ ಲುಧಿಯಾನ ಧೋತಿ, ಒಳ ಉಡುಪು ಸೇರಿದಂತೆ ಹೆಣೆದ ಉಡುಪು ಪೂರೈಕೆ ಕೇಂದ್ರಗಳಾಗಿವೆ. ಇದರಲ್ಲಿ ನಿತ್ಯ ನೀವು ಧರಿಸುವ ಡಿಕ್ಸಿ, ವಿಐಪಿ, ರೂಪಾ, ವಿದೇಶಗಳಲ್ಲಿ ಸಿಗುವ ಪೋಲೊ ಮತ್ತಿತರ ಪ್ರಸಿದ್ಧ ಬ್ರ್ಯಾಂಡ್‌ಗಳ ಒಳ ಉಡುಪುಗಳು ಇದೇ ತಿರುಪುರದಲ್ಲಿ ತಯಾರಾಗುತ್ತದೆ. ಈ ಜಿಲ್ಲೆಯೊಂದರಲ್ಲೇ ಸುಮಾರು 4ಸಾವಿರ ಕೈಗಾರಿಕಾ ಘಟಕಗಳಿದ್ದು, ನೇರ ಮತ್ತು ಪರೋಕ್ಷವಾಗಿ ಸುಮಾರು 6 ಲಕ್ಷ ಜನ ಈ ಕೈಗಾರಿಕೆಗಳನ್ನು ಅವಲಂಬಿಸಿದ್ದಾರೆ. ಇಲ್ಲಿ ತಯಾರಾದ ಉತ್ಪನ್ನ ಕರ್ನಾಟಕ, ಕೇರಳ, ಆಂಧ್ರ ಸೇರಿ ಯೂರೋಪಿಯನ್ ದೇಶಗಳಿಗೂ ರಫ್ತಾಗುತ್ತದೆ. ಈ ಪೈಕಿ ರಫ್ತಿನ ಪಾಲು ವಾರ್ಷಿಕ 25 ಸಾವಿರ ಕೋಟಿ ರೂ. ಒಂದು ವೇಳೆ ಇದೇ ಸ್ಥಿತಿ ಮುಂದುವರಿದರೆ, ಸಮಸ್ಯೆ ಖಚಿತ ಎಂದು ಉದ್ಯಮಿಗಳು ತಿಳಿಸುತ್ತಾರೆ.
ಕಚ್ಚಾ ವಸ್ತುಗಳು ದಾಸ್ತಾನು ಇದ್ದರೂ, ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದಾರೆ. ಅವರೆಲ್ಲರನ್ನೂ ವಾಪಸ್ ಕರೆತರುವುದು ದೊಡ್ಡ ಸವಾಲು. ಈ ಮಧ್ಯೆ ಯೂರೋಪಿಯನ್ ದೇಶಗಳಲ್ಲಿ ಕೋವಿಡ್ ಹಾವಳಿ ವಿಪರೀತವಾಗಿದೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಹಲವು ತಿಂಗಳೇ ಬೇಕಾಗುತ್ತದೆ. ಇದೆಲ್ಲದರಿಂದ ಮಾರುಕಟ್ಟೆಯಲ್ಲಿ ಹೆಣೆದ ಉಡುಪು (ನಿಟ್‌ವೇರ್)ಗಳ ಪೂರೈಕೆಯಲ್ಲಿ ತುಸು ವ್ಯತ್ಯಯ ಆಗುವ ಸಾಧ್ಯತೆ ಇದೆ ಎಂದು ದಕ್ಷಿಣ ಭಾರತದ ಕೈಗಾರಿಕೆಗಳ ಸಂಘ (ದಿ ಸದರ್ನ್ ಇಂಡಿಯಾ ಮಿಲ್ಸ್ ಅಸೋಸಿಯೇಷನ್-ಸಿಮಾ) ಕಾರ್ಯದರ್ಶಿ ಕೆ.ಸೆಲ್ವರಾಜು “ಉದಯವಾಣಿ’ಗೆ ತಿಳಿಸಿದರು.
ಮರು ಪೂರೈಕೆಗೆ 3 ತಿಂಗಳು ಬೇಕು: ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 2 ತಿಂಗಳ ದಾಸ್ತಾನು ಇರುತ್ತದೆ. ಹೀಗಾಗಿ ಲಾಕ್ ಡೌನ್ ತೆರವಾಗುತ್ತಿದ್ದಂತೆ ಸಮಸ್ಯೆ ಆಗದಿದ್ದರೂ, ನಂತರದ ಒಂದೆರಡು ತಿಂಗಳ ಅವಧಿಯಲ್ಲಿ ಪೂರೈಕೆಯಲ್ಲಿ ಸಮಸ್ಯೆ ಆಗಬಹುದು. ಏಕೆಂದರೆ, ಈ ಕ್ಷೇತ್ರ ನೂಲು, ಬಟ್ಟೆ, ಡೈಯಿಂಗ್, ಪ್ರಿಂಟಿಂಗ್, ಪ್ಯಾಕಿಂಗ್, ಡೆಲಿವರಿ, ಗುಣಮಟ್ಟ ಮಾಪನ ಹೀಗೆ ಒಂದಕ್ಕೊಂದು “ಲಿಂಕ್’ ಆಗಿವೆ. ಇದೆಲ್ಲದರ ಜತೆಗೆ ಕಾರ್ಮಿಕರು ಸಿಗಬೇಕು. ಸಕಾಲದಲ್ಲೇ ಸಿಕ್ಕರೂ ಮಾರುಕಟ್ಟೆಗೆ ಉತ್ಪಾದನೆ ಬರಬೇಕಾದರೆ, ಕನಿಷ್ಠ 3 ತಿಂಗಳು ಹಿಡಿಯುತ್ತದೆ. ಈ ಮಧ್ಯೆ ಲಾಕ್ ಡೌನ್ ಮತ್ತಷ್ಟು ದಿನ ಮುಂದುವರಿದರೆ, ಕೊರತೆ ತೀವ್ರವಾಗಿ ಕಾಡುವ ಸಾಧ್ಯತೆ ಇದೆ ಎಂದು ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಘ (ಬಿಸಿಐಸಿ) ಮಾಜಿ ಅಧ್ಯಕ್ಷ ಹಾಗೂ ವಲ್ಲಿಯಪ್ಪ ಗ್ರೂಪ್ ಅಧ್ಯಕ್ಷ ತ್ಯಾಗುವಲ್ಲಿಯಪ್ಪ ಅಭಿಪ್ರಾಯಪಡುತ್ತಾರೆ.
ವಿದೇಶಗಳಿಗೆ ಸುಮಾರು 25 ಸಾವಿರ ಕೋಟಿಯಷ್ಟು ಪೂರೈಕೆ ತಿರುಪುರವೊಂದರಿಂದಲೇ ಆಗುತ್ತದೆ. ಆದರೆ, ಎಲ್ಲವೂ ಈಗ ಸ್ಥಗಿತಗೊಂಡಿದೆ. ಆರ್ಡರ್‌ಗಳೆಲ್ಲವೂ ರದ್ದಾಗಿವೆ. ದೇಶೀಯ ಗ್ರಾಹಕರಿಗೆ “ನಿಟ್ ವೇರ್’ ಖರೀದಿ ಆದ್ಯತೆ ಅಲ್ಲ. ಹೀಗಾಗಿ, ಒಂದೆರಡು ತಿಂಗಳು ಮುಂದೆ ಹಾಕುತ್ತಾರೆ. ತದ ನಂತರವೂ ಇದೇ ಸ್ಥಿತಿ ಇದ್ದರೆ,
ಸಮಸ್ಯೆ ಆಗಲಿದೆ ಎಂದು ಉದ್ಯಮಿ ಸತ್ಯವೇಲು ತಿಳಿಸಿದರು.
ತಮಿಳುನಾಡಿನ ತಿರುಪುರ, ಸುತ್ತಲಿನ ಪ್ರದೇಶ ಒಳ ಉಡುಪುಗಳ ಉತ್ಪಾದನಾ ಕೇಂದ್ರ
ಸದ್ಯ 108 ಕೇಂದ್ರಗಳು ಕೋವಿಡ್ ಪೀಡಿತ
ಪುನಾರಂಭಗೊಂಡರೂ ಕಾರ್ಮಿಕರು ಊರಿಗೆ ಹೋಗಿದ್ದು ಮತ್ತೆ ಆಗಮಿಸಬೇಕು
ಲಾಕ್‌ಡೌನ್ ಮುಂದುವರಿದರೆ ತೀವ್ರ ಕೊರತೆ
ವಿಜಯಕುಮಾರ್ ಚಂದರಗಿ