Advertisement

ಲಾಕ್‌ಡೌನ್‌ ಪರಿಣಾಮ; ಮಾಸ್ಕ್, ಸ್ಯಾನಿಟೈಸರ್‌ಗೆ ಹೆಚ್ಚಿನ ಬೇಡಿಕೆ

09:39 PM Mar 28, 2020 | Sriram |

ಉಡುಪಿ: ಕೋವಿಡ್‌- 19 ಭೀತಿ ಆರಂಭವಾದೊಡನೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳಿಗೆ ಅತೀ ಹೆಚ್ಚು ಬೇಡಿಕೆ ಬಂದಿದೆ. ಸದ್ಯ ಮೆಡಿಕಲ್‌ ಶಾಪ್‌ ಗಳಲ್ಲಿ ಯಾವ ವಿಧದ ಮಾಸ್ಕ್ ಗಳೂ ಸಾಕಷ್ಟು ಲಭ್ಯವಾಗುತ್ತಿಲ್ಲ. ಕೆಲವು ಮೆಡಿಕಲ್‌ ಶಾಪ್‌ ಗಳಲ್ಲಿ ದಿನವಿಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತರೂ ಮಾಸ್ಕ್, ಸ್ಯಾನಿಟೈಸರ್‌ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು. ಜಿಲ್ಲೆಯಲ್ಲಿ 320ಕ್ಕೂ ಅಧಿಕ ಮೆಡಿಕಲ್‌ ಶಾಪ್‌, 100 ಹೋಲ್‌ಸೇಲ್‌ ಮೆಡಿಕಲ್‌ ಶಾಪ್‌ಗ್ಳಿವೆ. ಅಧಿಕಾರಿಗಳು ಹೇಳುವ ಪ್ರಕಾರ ಕೆಲವು ಮೆಡಿಕಲ್‌ ಶಾಪ್‌ ಗಳಲ್ಲಿ ಇನ್ನೊಂದು ವಾರಕ್ಕೆ ಬೇಕಾಗುವಷ್ಟು ಮಾಸ್ಕ್ ಇದೆ ಎನ್ನುತ್ತಾರೆ.

Advertisement

ಉಡುಪಿ ಜಿಲ್ಲೆಗೆ ಸ್ಯಾನಿಟರಿ ಉತ್ಪಾದಿಸುವ ಫ್ಯಾಕ್ಟರಿಗಳು ಲಾಕ್‌ಡೌನ್‌ ಪರಿಣಾಮ ಮುಚ್ಚಲ್ಪಟ್ಟಿವೆ. ಫ್ಯಾಕ್ಟರಿ ತೆರೆದು ಕಾರ್ಯನಿರ್ವಹಿಸಲು ಸರಕಾರ ಅನುವು ಮಾಡಿಕೊಟ್ಟರೂ ಕೋವಿಡ್‌- 19 ಭೀತಿಯಿಂದಾಗಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಇದರಿಂದಾಗಿ ಎಲ್ಲ ಫ್ಯಾಕ್ಟರಿಗಳು ಕೆಲಸ ನಿಲ್ಲಿಸಿಬಿಟ್ಟಿದೆ ಎನ್ನುತ್ತಾರೆ ಅಧಿಕಾರಿಗಳು.

ಮನೆಯಲ್ಲಿ ತಯಾರಿಸಬಹುದು
ಮಾಸ್ಕನ್ನು ಮನೆಯಲ್ಲೇ ತಯಾರಿಸಬಹುದು. ಅನಾರೋಗ್ಯವಿಲ್ಲ ದವರೂ ಮನೆಯಲ್ಲಿರುವ ಕಾಟನ್‌ ಬಟ್ಟೆಯನ್ನೇ ಮಾಸ್ಕ್ ಮಾಡಿ ಬಳಕೆ ಮಾಡಬಹುದು ಎಂದು ಸಲಹೆ ನೀಡುತ್ತಾರೆ ಆರೋಗ್ಯ ಇಲಾಖೆಯ ವೈದ್ಯರು. ಕಾಟನ್‌ ಬಟ್ಟೆಯನ್ನು ಚೆನ್ನಾಗಿ ಡಿಟರ್ಜೆಂಟ್‌ ಅಥವಾ ಡೆಟಾಲ್‌ ಬಳಸಿ ಬಿಸಿನೀರಲ್ಲಿ ವಾಶ್‌ ಮಾಡಬೇಕು. ಅನಂತರ ಅದನ್ನು ಮಾಸ್ಕ್ನಂತೆ ಹ್ಯಾಂಡ್‌ ಸ್ಟಿಚ್‌ ಮಾಡಿ ಬಳಕೆ ಮಾಡಬಹುದು. ಪ್ರತೀ ದಿನ ಸಾಯಂಕಾಲ ಉಪಯೋಗಿಸಿದ ಅನಂತರ ಅದನ್ನು ವಾಶ್‌ ಮಾಡಿ, ಮರುದಿನ ಐರನ್‌ ಮಾಡಿ ಉಪಯೋಗಿಸಬಹುದು ಎಂದು ಸಲಹೆ ನೀಡಿದ್ದಾರೆ. ಟ್ರಿಪಲ್‌ಲೇಯರ್‌ ಮಾಸ್ಕ್ 8 ಗಂಟೆ ಬಳಕೆ ಮಾಡಬಹುದು. ಎನ್‌-95 ಮಾಸ್ಕ್ 6 ಗಂಟೆ ಬಳಕೆಗೆ ಯೋಗ್ಯವಾಗಿರುತ್ತದೆ. ಕೆಲವರು ಇದನ್ನೇ ಎರಡು, ಮೂರು ವಾರಗಟ್ಟಲೆ ಹಾಕಿ ತಿರುಗಾಡುತ್ತಾರೆ. ಹೀಗೆ ಮಾಡುವುದು ಸುರಕ್ಷಿತವಲ್ಲ. ಇದನ್ನು ವಾಶ್‌ ಮಾಡಲು ಸಾಧ್ಯವಿಲ್ಲ. ಶೀತ, ಕೆಮ್ಮು ಇರುವವರು ಇದನ್ನು ಬಳಕೆ ಮಾಡಬಹುದು. ಆದರೆ ಸಾಮಾನ್ಯ ಜನರಿಗೆ ಇದರ ಅಗತ್ಯವಿಲ್ಲ. ಇದರಿಂದ ಪ್ರತೀದಿನ ಮಾಸ್ಕ್ ಬದಲಾಯಿಸುವ ಆವಶಕ್ಯತೆಯು ಬರುವುದಿಲ್ಲ. ತ್ಯಾಜ್ಯ ಸಮಸ್ಯೆಯೂ ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯರು.

ಸೂಕ್ತ ಕ್ರಮ ಅಗತ್ಯ
ಉತ್ಪಾದನೆ ಸ್ಥಗಿತವಾಗಿ, ಪೂರೈಕೆ ಇಲ್ಲವಾದ್ದರಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ ಒಂದು ವಾರಕ್ಕೆ ಬೇಕಾಗುವಷ್ಟು ಮಾಸ್ಕ್ ಗಳು ಮೆಡಿಕಲ್‌ ಶಾಪ್‌ ಗಳಲ್ಲಿ ಲಭ್ಯವಿದೆ. ಜನರಿಗೆ ಎಲ್ಲ ಮೆಡಿಕಲ್‌ ಶಾಪ್‌ ಗಳಲ್ಲಿ ಮಾಸ್ಕ್ ದೊರೆಯುವಂತಾಗಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
-ಕೆ.ವಿ. ವೆಂಕಟೇಶ್‌,
ಸಹಾಯಕ ಔಷಧ ನಿಯಂತ್ರಕ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next