Advertisement

ಲಾಕ್ ಡೌನ್ ಕಾಲದಲ್ಲೇ ಕೆಟ್ಟು ಕುಳಿತಿವೆ ಮೊಬೈಲ್, ಫ್ರಿಡ್ಜ್, ವಾಷಿಂಗ್ ಮೆಷಿನ್ ಗಳು

07:24 PM Apr 17, 2020 | Hari Prasad |

ಮೊನ್ನೆ ಸರೋಜಮ್ಮನವರ ಫ್ರಿಜ್ಜು ಕೆಟ್ಟು ಕೈಕೊಟ್ಟಿತು. ಅದಾಗಿ ಎರಡೇ ದಿನಕ್ಕೆ, ಫ್ರಿಜ್ಜಿಗಾದ್ರೆ ಕೆಲಸ ಕೊಡಲ್ಲ, ನಾನ್ಯಾಕೆ ಕೆಲಸ ಮಾಡ್ಲಿ ಎನ್ನುವಂತೆ ವಾಷಿಂಗ್‌ ಮಷೀನು ಕೂಡ ಮುನಿಸಿಕೊಂಡು ಕೆಲಸ ನಿಲ್ಲಿಸಿ ಮೂಲೆಯಲ್ಲಿ ಕುಂತಿತು.

Advertisement

ಹೋಗ್ಲಿ ರಿಪೇರಿ ಮಾಡೋ ಆಲ್‌-ಇನ್‌-ಒನ್‌ ರಂಗಣ್ಣನನ್ನ ಕರೆಸೋಣ ಎಂದು ಮೊಬೆ„ಲ್‌ ಕೈಗೆತ್ತಿಕೊಂಡ್ರೆ ಅದು ಆನೇ ಆಗ್ಲಿಲ್ಲ…! ಹೆಂಗೋ ಪತಿದೇವರ ಫೋನ್‌ ತಗೋಂಡು ರಂಗಣ್ಣನಿಗೆ ಕಾಲ್‌ ಮಾಡಿದರೆ ಆಯಪ್ಪ ರಿಪೇರಿಗೆ ಬರೋದಿಲ್ಲ ಅನ್ನೋದೇ..!!

ಇದು ಒಂದು ಮನೆ ಕತೆಯಲ್ಲ. ಇಡೀ ದೇಶದ ಬಹುತೇಕ ಮನೆಗಳಲ್ಲಿನ ವ್ಯಥೆ. ಕೋವಿಡ್ ವೈರಸ್‌ ಸೋಂಕಿನಿಂದಾಗಿ ದೇಶ ಲಾಕ್‌ಡೌನ್‌ ಆಗಿರುವಾಗಲೇ ಭಾರತದಾದ್ಯಂತ ಮೊಬೆ„ಲ್‌ ಫೋನ್‌ಗಳು, ರೆಫ್ರಿ ಜರೇಟರ್‌, ವಾಷಿಂಗ್‌ ಮಷೀನ್‌, ಟಿ.ವಿ, ಏರ್‌ ಕೂಲರ್‌ ರೀತಿಯ ಒಂದೂವರೆ ಲಕ್ಷಕ್ಕೂ ಅಧಿಕ ಗ್ಯಾಜೆಟ್‌ಗಳು ಕೆಟ್ಟು ಕುಳಿತಿವೆ. ಆದರೆ ಇವುಗಳನ್ನು ರಿಪೇರಿ ಮಾಡೋರು ದಿಕ್ಕಿಲ್ಲ.

ಜನತಾ ಕರ್ಫ್ಯೂ ಜಾರಿಯಾದ ಮಾ.22ರಿಂದ ಎ.13ರವರೆಗೆ ಭಾರತದಾದ್ಯಂತ ಸುಮಾರು ಐದು ಮಿಲಿಯನ್‌ ಮೊಬೈಲ್‌ ಫೋನ್‌ಗಳು, 70,000 ರೆಫ್ರಿಜರೇಟರ್‌ಗಳು ಹಾಗೂ 50,000ಕ್ಕೂ ಅಧಿಕ ಟೆಲಿವಿಷನ್‌ ಸೆಟ್‌ಗಳು ಕೆಟ್ಟು, ರಿಪೇರಿ ಭಾಗ್ಯವಿಲ್ಲದೇ ಕುಳಿತಿವೆ. ಜತೆಗೆ 30,000ಕ್ಕೂ ಹೆಚ್ಚು ಮೈಕ್ರೋವೇವ್‌ ಓವೆನ್‌ಗಳು, ಏರ್‌ ಕೂಲರ್‌ಗಳು ಮತ್ತು ವಾಷಿಂಗ್‌ ಮಷೀನ್‌ಗಳು ಕೆಲಸ ಮಾಡಲಾಗದೆ ತುರ್ತು ರಿಪೇರಿಗಾಗಿ ಕಾದು ಕುಳಿತಿವೆ.

ಇಂಡಿಯನ್‌ ಸೆಲ್ಯುಲಾರ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಅಸೋಸಿಯೇಷನ್‌ (ಐಸಿಇಎ) ಮತ್ತು ಗ್ರಾಹಕರ ಎಲೆಕ್ಟ್ರಾನಿಕ್ಸ್‌ ಹಾಗೂ ಉಪಕರಣಗಳ ತಯಾರಕರ ಸಂಘ (ಸಿಇಎಎಂಎ) ಈ ಅಂಕಿ-ಅಂಶಗಳನ್ನು ನೀಡಿವೆ. ‘ಕೆಟ್ಟು ಹೋಗಿರುವ ಲಕ್ಷಾಂತರ ಗ್ಯಾಜೆಟ್‌ಗಳಿಗೆ ತುರ್ತು ಸರ್ವಿಸ್‌ ಅಗತ್ಯವಿದೆ.

Advertisement

ಇತ್ತ 70 ಸಾವಿರಕ್ಕೂ ಅನೇಕ ರೆಫ್ರಿಜರೇಟರ್‌ಗಳು ಕೆಟ್ಟು ಹೋಗಿವೆ. ಅತ್ತ ಹಣ್ಣು, ತರಕಾರಿ ಪ್ರತಿ ದಿನ ಸಿಗುತ್ತಿಲ್ಲ. ಹೀಗಾಗಿ ಅಗತ್ಯ ಆಹಾರ ಸಾಮಗ್ರಿ ಮತ್ತು ಔಷಧಗಳನ್ನು ಸಂಗ್ರಹಿಸಿಡುವುದೇ ನಾಗರಿಕರಿಗೆ ದೊಡ್ಡ ಸವಾಲಾಗಿದೆ’ ಎಂದು ಸಿಇಎಎಂಎ ಅಧ್ಯಕ್ಷ ಕಮಲ್‌ ನಂದಿ ಹೇಳುತ್ತಾರೆ.

ಆನ್‌ಲೈನ್‌ ಸಲಹೆ: ಎಲೆಕ್ಟ್ರಾನಿಕ್‌ ಸಾಧನಗಳು ಕೆಟ್ಟು ಹೋಗಿರುವ ಬಗ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಅವುಗಳನ್ನು ಪರಿಹರಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲು ಬಹುತೇಕ ಕಂಪೆನಿಗಳು ಆನ್‌ಲೈನ್‌ ಮತ್ತು ಆನ್‌ ಫೋನ್‌ ಮೊರೆ ಹೋಗಿವೆ.

ಜತೆಗೆ ಗ್ರಾಹಕರ ಅನುಕೂಲಕ್ಕಾಗಿ ‘ನೀವೇ ಸ್ವತಃ ರಿಪೇರಿ ಮಾಡಿಕೊಳ್ಳಿ’ (ಡೂ ಇಟ್‌ ಯುವರ್‌ ಸೆಲ್ಫ್ ) ವಿಡಿಯೋಗಳನ್ನು ಅಂತರ್ಜಾಲದಲ್ಲಿ ಅಪ್‌ಲೋಡ್‌ ಮಾಡಿವೆ.

ದೇಶದ ಮೂರು ಪ್ರಮುಖ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ಪ್ರತಿ ನಿತ್ಯ ಸರ್ವಿಸ್‌ಗೆ ಸಂಬಂಧಿಸಿದ 11,000 ದೂರುಗಳು ಬರುತ್ತಿವೆ. ಹೀಗಾಗಿ ಎಲೆಕ್ಟ್ರಾನಿಕ್‌ ಸಾಧನಗಳ ರಿಪೇರಿಯನ್ನೂ ಅಗತ್ಯ ಸೇವೆ ಎಂದು ಪರಿಗಣಿಸಿ ಸರಕಾರ ಅವಕಾಶ ಮಾಡಿಕೊಟ್ಟರೆ ಗ್ರಾಹರಿಗೆ ಸೇವೆ ಒದಗಿಸುವುದಾಗಿ ಸಂಘಟನೆಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next