Advertisement

ಮಾಡದ ತಪ್ಪಿಗೆ ಕೂಲಿ ಕಾರ್ಮಿಕರು ಬಂಧಿ

01:47 PM Apr 09, 2020 | Suhan S |

ಬೆಂಗಳೂರು: ಕೋವಿಡ್ 19 ನಿಯಂತ್ರಿಸಲು ದೇಶಾದ್ಯಂತ ಲಾಕ್‌ ಡೌನ್‌ ಘೋಷಣೆ ಮಾಡಿರುವುದರಿಂದ ಅತ್ಯಂತ ಸಂಕಷ್ಟಕ್ಕೆ ಸಿಲುಕಿರುವವರು ಕೂಲಿ ಹಾಗೂ ವಲಸೆ ಕಾರ್ಮಿಕರು.

Advertisement

ಮಾ.23 ರಂದು ಕೇಂದ್ರ ಸರ್ಕಾರ ಲಾಕ್‌ ಡೌನ್‌ ಘೋಷಣೆ ಮಾಡಿರುವುದರಿಂದ. ಬೆಂಗಳೂರು, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್‌ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ಮಹಾನಗರಗಳಿಗೆ ಕೂಲಿ ಕೆಲಸಕ್ಕೆ ಹೋಗಿದ್ದ ಕಟ್ಟಡ ಹಾಗೂ ಇತರೆ ಕಾರ್ಮಿಕರು ಮಕ್ಕಳು, ವಯಸ್ಸಾದವರು, ಮಹಿಳೆಯರು ಸೇರಿದಂತೆ ಎಲ್ಲರೂ ತಮ್ಮ ಊರಿಗೆ ತೆರಳಲು ರಾತ್ರೋ ರಾತ್ರಿ ಗಂಟು ಮೂಟೆ ಕಟ್ಟಿಕೊಂಡು ಹೊರಟವರನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಆಯಾ ಜಿಲ್ಲಾ ಗಡಿ ಭಾಗದಲ್ಲಿಯೇ ಅವರನ್ನು ತಡೆದು ಕಲ್ಯಾಣ ಮಂಟಪ, ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ವಸತಿ ಗೃಹಗಳಲ್ಲಿ ಇರಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ 19  ವೈರಸ್‌ ಹರಡುತ್ತಿರುವ ಪ್ರಮಾಣ ಗಮನಿಸಿದರೆ, ಏ.14 ರ ನಂತರವೂ ಲಾಕ್‌ಡೌನ್‌ ಸಡಿಲಗೊಳಿಸುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.

ಆತಂಕದಲ್ಲಿ ಕಾರ್ಮಿಕರು: ತಮ್ಮದಲ್ಲದ ತಪ್ಪಿಗೆ ತೊಂದರೆಗೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ಹೊರ ರಾಜ್ಯಗಳ ಗಡಿ ಭಾಗದ ಜಿಲ್ಲೆಗಳಲ್ಲೂ ಸಾಕಷ್ಟು ಜನರಿದ್ದಾರೆ. ಕೇರಳದ ಕಾಸರಗೋಡು, ಗೋವಾ ಗಡಿ ಭಾಗ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಗಳ ಗಡಿ ಭಾಗದಲ್ಲಿ ರಾಜ್ಯದ ಲಕ್ಷಾಂತರ ಕಾರ್ಮಿ ಕರು ಅಸಹಾಯಕರಾಗಿ ಅನ್ಯ ರಾಜ್ಯಗಳ ಆಡಳಿತ ವ್ಯಾಪ್ತಿಯಲ್ಲಿ ಸಿಲುಕಿಕೊಂಡಿದ್ದು ರಾಜ್ಯ ಗಡಿ ಪ್ರವೇಶಕ್ಕೆ ಅವರಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಬೇರೆ ಬೇರೆ ಜಿಲ್ಲೆಗಳ ಗಡಿ ಭಾಗದಲ್ಲಿಯೂ ತಡೆ ಹಿಡಿಯಲಾಗಿದೆ.

ಈಗಾಗಲೇ ಲಕ್ಷಾಂತರ ಕಾರ್ಮಿಕರು ಸರಿಯಾಗಿ ಊಟ, ವಸತಿ, ನಿದ್ರೆಯಿಲ್ಲದೆ 15 ದಿನಗಳನ್ನು ಸರ್ಕಾರದ ಅನಧಿಕೃತ ಬಂಧನದಲ್ಲಿ ದಿನ ಕಳೆದಿದ್ದಾರೆ. ಈಗ ಏ.14ರ ನಂತರವಾದರೂ ಸರ್ಕಾರ ತಮ್ಮನ್ನು ತಮ್ಮ ಊರುಗಳಿಗೆ ಕಳುಹಿಸುತ್ತದೆಯೋ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ. ಊರಿಗೆ ಕಳುಹಿಸಲು ಸಲಹೆ: ಕೂಲಿ ಕಾರ್ಮಿಕರು ಯಾವುದೇ ಸೋಂಕು ಇಲ್ಲದಿದ್ದರೂ ಗಡಿ ಭಾಗಗಳಲ್ಲಿ ಅಸಹಾಯಕತೆಯಿಂದ ಸರ್ಕಾರ ನೀಡುವ ಆಹಾರಕ್ಕಾಗಿ ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನ ಗಳಲ್ಲಿ ಕೂಡಿ ಹಾಕಿರುವ ಕಾರ್ಮಿಕರನ್ನು ತಪಾಸಣೆ ಮಾಡಿ ಅವರ ಊರುಗಳಿಗೆ ಸರ್ಕಾರವೇ ಸಾರಿಗೆ ವ್ಯವಸ್ಥೆ ಮಾಡಿ ತಲುಪಿಸುವ ಕೆಲಸ ಮಾಡಬೇಕೆಂಬ ಸಲಹೆ ವ್ಯಕ್ತವಾಗಿದೆ.

ಪ್ರತಿಪಕ್ಷಗಳು ಮುಖ್ಯಮಂತ್ರಿಗಳು ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಈ ಸಲಹೆ ನೀಡಿದ್ದವು ಎಂದು ತಿಳಿದು ಬಂದಿದೆ. ಇದರಿಂದ ಅತಂತ್ರದ ಭಯದಿಂದ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ತಮ್ಮ ಊರು ಹಾಗೂ ಮನೆಗಳಲ್ಲೇ ಇದ್ದೇವೆ ಎಂಬ ಧೈರ್ಯ ಬರುತ್ತದೆ. ಅಲ್ಲದೇ ಸರ್ಕಾರಕ್ಕೂ ಇದರಿಂದ ಆರ್ಥಿಕ ನಷ್ಟ ತಪ್ಪಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪಡಿತರವೂ ಇಲ್ಲ: ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಕಾರ್ಮಿಕರು ಬೆಂಗಳೂರು ಹಾಗೂ ಹೊರ ರಾಜ್ಯಗಳಿಗೆ ಕೂಲಿಗೆ ತೆರಳಿದ್ದವರು ಈಗ ಸರ್ಕಾರದ ನಿಯಂತ್ರಣಾ ಕೇಂದ್ರಗಳಲ್ಲಿ ಬಂಧಿಯಾಗಿದ್ದಾರೆ.

Advertisement

ಹೀಗಾಗಿ ಅವರಿಗೆ ಸರ್ಕಾರದಿಂದ ಸಿಗುವ ಪಡಿತರವೂ ಸಿಗದಂತಾಗಿದೆ. ಸರ್ಕಾರ ಅವರನ್ನು ಸ್ವಂತ ಊರುಗಳಿಗೆ ಸ್ಥಳಾಂತರಿಸಿ, ಅವರ ಮನೆಗಳಿಗೆ ಪಡಿತರ ವಿತರಿಸಿ, ಸರ್ಕಾರ ಅನುಮತಿ ನೀಡುವವರೆಗೂ ಹೊರಗಡೆ ತಿರುಗಾಡದಂತೆ ಹೋಮ್‌ ಕ್ವಾರಂಟೈನ್‌ ಮಾಡಬಹುದು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಇನ್ನೂ ನಿರ್ಧರಿಸದ ಸರ್ಕಾರ :  ಸರ್ಕಾರದ ನಿಯಂತ್ರಣದಲ್ಲಿಟ್ಟುಕೊಂಡಿರುವ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ಬಗ್ಗೆ ಸರ್ಕಾರ ಯಾವುದೇ ರೀತಿಯ ಆಲೋಚನೆ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸರ್ಕಾರ ಲಾಕ್‌ ಡೌನ್‌ ಸಡಿಲಗೊಳಿಸುವ ಬಗ್ಗೆ ನಿರ್ದೇಶನ ನೀಡುವವರೆಗೂ ರಾಜ್ಯ ಸರ್ಕಾರ ಯಥಾಸ್ಥಿತಿ ಕಾಯ್ದುಕೊಂಡು ಹೋಗುವ ಆಲೋಚನೆ ಯಲ್ಲಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಏ.14 ರ ನಂತರವೂ ಕೂಲಿ ಕಾರ್ಮಿಕರು ತವರು ಸೇರುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬೇರೆ ರಾಜ್ಯ ಹಾಗೂ ಜಿಲ್ಲೆಗಳ ಗಡಿಗಳಲ್ಲಿ ಸಿಲುಕಿಕೊಂಡಿರುವ ಕೂಲಿ ಕಾರ್ಮಿಕರನ್ನು ತಪಾಸಣೆ ಮಾಡಿ, ಅವರಿಗೆ ಯಾವುದೇ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿ ಕೊಂಡು, ಅವರ ಊರುಗಳಿಗೆ ಕಳುಹಿಸಿಕೊಡಲು ಸರ್ಕಾರ ವ್ಯವಸ್ಥೆ ಮಾಡಬೇಕು. ಈ ಕುರಿತು ಮುಖ್ಯಕಾರ್ಯದರ್ಶಿಯೊಂದಿಗೂ ಮಾತನಾಡಿದ್ದೇನೆ. ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ

ಸರ್ಕಾರ ಗುರುತಿಸಿರುವ ನಿಯಂತ್ರಣ ಕೇಂದ್ರಗಳಲ್ಲಿ ವಾಸವಿರುವ ಕೂಲಿ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ನಿರ್ಧಾರವಾಗಿಲ್ಲ. ಮೌನೀಶ್‌ ಮುದ್ಗಿಲ್‌, ಕೋವಿಡ್ 19  ನಿಯಂತ್ರಣ ನೋಡಲ್‌ ಅಧಿಕಾರಿ

 

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next