ಪಣಜಿ: ಗೋವಾ ರಾಜ್ಯ ಸರ್ಕಾರ ಸೋಮವಾರದಿಂದ ಲಾಕ್‍ಡೌನ್ ತೆರವುಗೊಳಿಸಿದ್ದರೂ ವಿವಿಧ ಪಂಚಾಯತಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮೇ 10 ರವರೆಗೆ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಿವೆ. ಇದರಿಂದಾಗಿ ರಾಜ್ಯ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಮತ್ತು ಲಾಕ್‍ಡೌನ್ ತೆರವಿಗೆ ಯಾವುದೇ ಕಿಮ್ಮತ್ತು ಇಲ್ಲ ಎಂಬಂತಾಗಿದೆ.
ರಾಜದ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್ ವ್ಯವಸ್ಥೆ ಮತ್ತು ಸೂಕ್ತ ಚಿಕಿತ್ಸೆ ಲಭಿಸದೆಯೇ ಪರದಾಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಲಾಕ್‍ಡೌನ್ ತೆರವಿನಿಂದಾಗಿ ಸೋಂಕು ಹರಡುವುದನ್ನು ನಿಯಂತ್ರಿಸಲು ಅಸಾಧ್ಯ ಎಂದು ಪರಿಗಣಿಸಿ ರಾಜ್ಯದಲ್ಲಿನ ಹಲವು ಪಂಚಾಯತಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮೇ 10 ರ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಕೇವಲ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಪಂಚಾಯತಿಗಳು ಅವಕಾಶ ಕಲ್ಪಿಸಿವೆ.
ವೈಯಕ್ತಿಕ ಲಾಕ್‍ಡೌನ್ ಅಗತ್ಯವಿಲ್ಲ-ಸಿಎಂ ಸಾವಂತ್ :
ವೈಯಕ್ತಿಕವಾಗಿ ಪಂಚಾಯತಿಗಳು ಲಾಕ್‍ಡೌನ್ ಜಾರಿಗೊಳಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕೂಲಿ ಕಾರ್ಮಿಕರು ವಲಸೆ ಹೋಗುವಂತೆ ಮಾಡುತ್ತದೆ. ಪಂಚಾಯತಿಗಳು ಅಗತ್ಯ ಸೇವೆಯನ್ನು ಸ್ಥಗಿತಗೊಳಿಸಿದರೆ ಜನರಲ್ಲಿ ಭೀತಿ ಉಂಟಾಗುತ್ತದೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಯಾವುದೇ ಪಂಚಾಯತಿಗಳು ಬಂದ್ ಮಾಡಿಸಬಾರದು. ವೈಯಕ್ತಿಕ ಲಾಕ್‍ಡೌನ್ ಅಗತ್ಯವಿಲ್ಲ, ಎಲ್ಲರೂ ಕೂಡ ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಮುಖ್ಯಮಂತ್ರಿ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.
ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಾವಂತ್- ರಾಜ್ಯದ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ರೆಸ್ಟೊಂರೆಂಟ್ ಸೇರಿದಂತೆ ಅನಿವಾರ್ಯವಲ್ಲದ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿ ನೀಡಿದರು.