Advertisement
ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾದ ಕೂಡಲೇ ಎಲ್ಲ ನಿರಾಶ್ರಿತರ ಕೇಂದ್ರಗಳನ್ನು ಮುಚ್ಚಿ ಕೇಂದ್ರಗಳಿಗೆ ಸೇರ್ಪಡೆ, ಕೇಂದ್ರಗಳಿಂದ ಬಿಡುಗಡೆಯನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಪರಿಣಾಮವಾಗಿ ನೂರಾರು ಮಂದಿ ಇಂತಹ ಕೇಂದ್ರಗಳಲ್ಲೇ ಉಳಿದುಕೊಳ್ಳುವುದು ಅನಿವಾರ್ಯವಾಗಿದೆ.
ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕೇಂದ್ರ ಪರಿಹಾರ ಸಮಿತಿಯ ಆಶ್ರಯದಲ್ಲಿ 14 ನಿರಾಶ್ರಿತರ ಕೇಂದ್ರಗಳಿದ್ದು 2,700ಕ್ಕೂ ಅಧಿಕ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಅವರಲ್ಲಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡು ಇಲಾಖೆ
ಯಿಂದ ರಕ್ಷಿಸಲ್ಪಟ್ಟು ಅನಂತರ ಮನೆ ವಿಳಾಸ ಪತ್ತೆಯಾಗಿ ಮನೆಗೆ ತೆರಳಲು ಸಿದ್ಧವಾಗಿರುವವರು ಶೇ. 50ಕ್ಕೂ ಅಧಿಕ ಮಂದಿ. ವಿಳಾಸ ಇಲ್ಲದವರ ವಿಳಾಸ ಪತ್ತೆಹಚ್ಚಿ ಮನೆಯವರನ್ನು ಸಂಪರ್ಕಿಸಲಾಗಿದ್ದು ಮನೆಯವರು ಕೂಡ ವರ್ಷಗಟ್ಟಲೆ ತಮ್ಮಿಂದ ದೂರವಾಗಿರುವ ಬಂಧುಗಳನ್ನು ಬರಮಾಡಿಕೊಳ್ಳುವ ತವಕದಲ್ಲಿದ್ದಾರೆ. ಅವರಲ್ಲಿ ಹೊರ ರಾಜ್ಯದವರೂ ಇದ್ದಾರೆ. ಆದರೆ ಕೊರೊನಾ ಇದಕ್ಕೆ ತಡೆಯಾಗಿದೆ. ನ್ಯಾಯಾಲಯ ಅನುಮತಿ
ಎಪ್ರಿಲ್ ಅನಂತರ ನಿರಾಶ್ರಿತರ ಕೇಂದ್ರಗಳಿಂದ ಯಾರನ್ನೂ ಮನೆಗೆ ಕಳುಹಿಸಿಲ್ಲ. ಸಾಮಾನ್ಯವಾಗಿ ಒಂದು ವರ್ಷ ಅಥವಾ ಮೂರು ವರ್ಷಗಳ ಅವಧಿಯವರೆಗೆ ಇಂತಹ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಒದಗಿಸಲಾಗುತ್ತದೆ. ಈಗಾಗಲೇ ನಿಗದಿತ ಅವಧಿ ಮುಗಿದವರು ಅನೇಕ ಮಂದಿ ಇದ್ದಾರೆ. ಅಂತಹ ನಿರಾಶ್ರಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕೊರೊನಾ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಅನುಮತಿ ಪಡೆದು ಅವರ ಆಶ್ರಯದ ಅವಧಿ ವಿಸ್ತರಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಸಾಮಾನ್ಯವಾಗಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುವವರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಒದಗಿಸಲಾಗುತ್ತದೆ. ಭಿಕ್ಷಾಟನೆ ನಿಷೇಧ ಕಾಯಿದೆಯಡಿ ಅವರನ್ನು ವಶಕ್ಕೆ ಪಡೆದು ಇಲಾಖೆಯ ಸುಪರ್ದಿಯಲ್ಲಿಡಲಾಗುತ್ತದೆ. ಅವರಿಗೆ ಕೌನ್ಸೆಲಿಂಗ್ ಸೇರಿದಂತೆ ಚಿಕಿತ್ಸೆಯನ್ನು ಕೂಡ ನೀಡಲಾಗುತ್ತದೆ. ಅವರ ಮನೆಯ ವಿಳಾಸವಿದ್ದರೆ ಅದನ್ನು ಪತ್ತೆಹಚ್ಚಿ ಮನೆಯವರನ್ನು ಸಂಪರ್ಕಿಸಿ ಮನೆಗೆ ಕಳುಹಿಸಿಕೊಡಲಾಗುತ್ತದೆ. ನಿರಾಶ್ರಿತರ ಕೇಂದ್ರಗಳಿಂದ ತೆರಳಿದವರ ಪೈಕಿ ಭಿಕ್ಷಾಟನೆ ಬಿಟ್ಟು ಹೊಸ ಬದುಕು ಕಟ್ಟಿಕೊಂಡಿರುವವರೇ ಹೆಚ್ಚು ಎನ್ನುತ್ತಾರೆ ನಿರಾಶ್ರಿತ ಕೇಂದ್ರಗಳ ನಿರ್ವಾಹಕರು.
Advertisement
ಸದ್ಯ ಬಿಡುಗಡೆ ಇಲ್ಲನಿರಾಶ್ರಿತರ ಕೇಂದ್ರಗಳಲ್ಲಿ ಇರುವವರ ಆರೋಗ್ಯ ಇತರರಿಗಿಂತ ಸೂಕ್ಷ್ಮ. ಕೇಂದ್ರದ ಒಬ್ಬರಿಗೆ ಸೋಂಕು ಬಂದರೆ ಉಳಿದವರಿಗೆ ಬೇಗನೆ ಹರಡುವ ಸಾಧ್ಯತೆ ಅಧಿಕ. ಕೇಂದ್ರಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಿರುವುದರಿಂದ ಯಾವುದೇ ಕೇಂದ್ರದಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಈಗ ಅವರನ್ನು ಮನೆಗೆ ಕಳುಹಿಸಿದರೆ ಅವರಿಗೆ ಮಾತ್ರವಲ್ಲದೆ ಮನೆಯವರಿಗೂ ಅಪಾಯ. ಹಾಗಾಗಿ ಸದ್ಯಕ್ಕೆ ಬಿಡುಗಡೆ ಇಲ್ಲ.
– ಯು. ಚಂದ್ರ ನಾಯಕ್, ಕಾರ್ಯದರ್ಶಿ ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು