Advertisement
ಅನ್ಯ ರಾಜ್ಯಗಳಿಗೆ ವಲಸೆ ಹೋದವರು ತಮ್ಮ ತವರು ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಹಿಂದಿರುಗುತ್ತಿರುವುದರ ಜತೆಗೆ, ಕೋವಿಡ್ ಪ್ರಕರಣಗಳ ಸಂಖ್ಯೆಯೂ ಅಧಿಕವಾಗುತ್ತಿದೆ.
Related Articles
ಮೇ 17ರಂದು ಭಾರತ ನಿಧಾನಕ್ಕೆ ನಿರ್ಬಂಧಗಳನ್ನು ಸಡಿಲಗೊಳಿಸುವ ವೇಳೆಯಲ್ಲಿ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 90,927 ಇದ್ದರೆ, 2,872 ಮಂದಿ ಮೃತಪಟ್ಟಿದ್ದರು. ಇದಾದ ಹತ್ತು ದಿನಗಳ ನಂತರ, ಅಂದರೆ ಮೇ 27ಕ್ಕೆ ದೇಶದಲ್ಲಿ 1,51,767 ಪ್ರಕರಣಗಳು ಹಾಗೂ 4,337 ಸಾವುಗಳು ದಾಖಲಾಗಿವೆ.
Advertisement
ಅದರಲ್ಲೂ ಮೇ 18ರಿಂದ ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಮಾಣವು ದ್ವಿಗುಣಗೊಳ್ಳುವ ದರವೂ ವೇಗ ಪಡೆದಿದ್ದು, ಅಸ್ಸಾಂ, ಉತ್ತರಾಖಂಡ, ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಬಹುಬೇಗನೇ ದ್ವಿಗುಣಗೊಳ್ಳುತ್ತಿದೆ.
ಮೇ ಎರಡನೇ ವಾರದವರೆಗೂ ಈ ನಾಲ್ಕೂ ರಾಜ್ಯಗಳ ಅನೇಕ ಜಿಲ್ಲೆಗಳು ಹಸುರುಪಟ್ಟಿಯಲ್ಲಿದ್ದವು. ಮೇ 3ರ ವೇಳೆಗೆ ಅಸ್ಸಾಂನ 64 ಪ್ರತಿಶತ ಜಿಲ್ಲೆಗಳು, ಉತ್ತರಾಖಂಡದ 62 ಪ್ರತಿಶತ ಜಿಲ್ಲೆಗಳು, ಛತ್ತೀಸ್‌ಗಢದ 86 ಪ್ರತಿಶತ ಹಾಗೂ ಹಿಮಾಚಲ ಪ್ರದೇಶದ 58 ಪ್ರತಿಶತ ಜಿಲ್ಲೆಗಳು ಹಸುರುಪಟ್ಟಿಯಲ್ಲಿದ್ದವು. ಈಗ ಈ ರಾಜ್ಯಗಳ ಅನೇಕ ಜಿಲ್ಲೆಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.
ಅಸ್ಸಾಂಲಾಕ್ಡೌನ್ 4.0 ಅನಂತರದಿಂದ ಅಸ್ಸಾಂನಲ್ಲಿ ಪ್ರತಿ 3.45 ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಮೇ 17ರಂದು ಅಸ್ಸಾಂನಲ್ಲಿ ಕೇವಲ 92 ಪ್ರಕರಣಗಳು ದಾಖಲಾಗಿದ್ದವು, ಮೇ 27ರ ವೇಳೆಗೆ ಆ ಪುಟ್ಟ ರಾಜ್ಯದಲ್ಲಿ 616 ಕೋವಿಡ್ ಪೀಡಿತರು ಪತ್ತೆಯಾದರು. ಇದರಲ್ಲಿ 400 ಪ್ರಕರಣಗಳು ಕಳೆದ ಮೂರು ವಾರಗಳಲ್ಲಿ ರೈಲು, ರಸ್ತೆಯ ಮೂಲಕ ಹಿಂದಿರುಗಿದವರಲ್ಲಿ ಪತ್ತೆಯಾಗಿವೆ. ಮೇ 24ರ ವೇಳೆಗೆ ಆ ರಾಜ್ಯಕ್ಕೆ 60 ಸಾವಿರಕ್ಕೂ ಹೆಚ್ಚು ಜನರು ಹಿಂದಿರುಗಿದ್ದಾರೆ. ಸೋಮವಾರ ವಿಮಾನ ಸಂಚಾರವೂ ಆರಂಭವಾಗಿರುವುದರಿಂದ, ಅಸ್ಸಾಂ ಸರಕಾರಕ್ಕೆ ಹೊಸ ತಲೆನೋವು ಶುರುವಾಗಿದ್ದು, ವಿಮಾನದಿಂದ ಬಂದಿಳಿಯುವವರಿಗೆ ಅದು ಕ್ವಾರಂಟೈನ್ ಸೌಲಭ್ಯ ಕಲ್ಪಿಸಲಾರಂಭಿಸಿದೆ. ಉತ್ತರಾಖಂಡ
ಉತ್ತರಾಖಂಡದಲ್ಲಿ ಕೋವಿಡ್ ಪ್ರಕರಣಗಳು 4.2 ದಿನಕ್ಕೆ ದ್ವಿಗುಣಗೊಳ್ಳುತ್ತಿವೆ. ಮೇ 17ರಂದು ಉತ್ತರಾಖಂಡದಲ್ಲಿ 88 ಪ್ರಕರಣಗಳು ದಾಖಲಾಗಿದ್ದವು. ಇದಾದ ಕೇವಲ ಹತ್ತೇ ದಿನದಲ್ಲಿ ಸೋಂಕಿತರ ಸಂಖ್ಯೆ 469ಕ್ಕೆ ಏರಿದೆ. ಅಸ್ಸಾಂನಂತೆಯೇ ಉತ್ತರಾಖಂಡದಲ್ಲೂ ಅನ್ಯ ರಾಜ್ಯಗಳಿಂದ, ಅದರಲ್ಲೂ ಮಹಾರಾಷ್ಟ್ರ ಹಾಗೂ ದಿಲ್ಲಿಯಿಂದ ಹಿಂದಿರುಗಿದವರಲ್ಲೇ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಿಂದ ನೈನಿತಾಲ್‌ಗೆ ಬಂದಿಳಿದ 59 ಜನರಲ್ಲಿ 32 ಸೋಂಕಿತರು ಪತ್ತೆಯಾಗಿದ್ದಾರೆ! ಛತ್ತೀಸ್‌ಗಢ
ಪ್ರಕರಣಗಳು ದ್ವಿಗುಣಗೊಳ್ಳುವ ವೇಗದಲ್ಲಿ ಛತ್ತೀಸ್‌ಗಢವು ಮೂರನೇ ಸ್ಥಾನದಲ್ಲಿದ್ದು ಪ್ರತಿ 4.3 ದಿನಕ್ಕೆ ಅಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು ಮೇ 17ಕ್ಕೆ 67ರಷ್ಟಿದ್ದ ಪ್ರಕರಣಗಳು ಮೇ 27ರ ವೇಳೆಗೆ 361ಕ್ಕೆ ಏರಿವೆ. ಬುಧವಾರ ಒಂದೇ ದಿನ, ಅತಿ ಹೆಚ್ಚು, ಅಂದರೆ 70 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇವರಲ್ಲಿ 58 ಜನ ಮಹಾರಾಷ್ಟ್ರದಿಂದ ಹಿಂದಿರುಗಿದವರೇ ಆಗಿದ್ದಾರೆ. ಛತ್ತೀಸ್‌ಗಢ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿದ್ದು, ಅಪಾಯದ ತೂಗುಗತ್ತಿ ಆ ರಾಜ್ಯದ ಮೇಲೆ ನೇತಾಡುತ್ತಲೇ ಇದೆ. ಹಿಮಾಚಲ ಪ್ರದೇಶ
ಮೇ 18ರಿಂದ ಹಿಮಾಚಲ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಪ್ರತಿ 5.5 ದಿನಕ್ಕೆ ದ್ವಿಗುಣಗೊಳ್ಳುತ್ತಿವೆ. ಮೇ 17ರಂದು ಆ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 78 ಇತ್ತು. ಹತ್ತು ದಿನಗಳಲ್ಲಿ ಅದು 247ಕ್ಕೆ ಏರಿದೆ. ಈ ರಾಜ್ಯದಲ್ಲೂ ಮುಂಬಯಿಯಿಂದ ಬಂದವರಲ್ಲೇ ಸೋಂಕಿತರು ಅಧಿಕವಿದ್ದಾರೆ. ಪ್ರಕರಣಗಳ ದ್ವಿಗುಣ ದರ
ಸೋಂಕಿತರ ಸಂಖ್ಯೆಯು ರಾಷ್ಟ್ರೀಯ ಸ್ತರದಲ್ಲಿ ಸರಾಸರಿ 13.7 ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಆದರೆ ದೇಶದ 12 ರಾಜ್ಯಗಳಲ್ಲಿ ಪ್ರಕರಣಗಳ ದ್ವಿಗುಣಗೊಳ್ಳುವ ದರ ರಾಷ್ಟ್ರೀಯ ಸರಾಸರಿಗಿಂತಲೂ ವೇಗವಾಗಿದ್ದು ಆತಂಕ ಸೃಷ್ಟಿಯಾಗಿದೆ. ಅಸ್ಸಾಂ, ಉತ್ತರಾಖಂಡ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲೂ ಕೋವಿಡ್ ಡಬಲಿಂಗ್ ರೇಟ್, ರಾಷ್ಟ್ರೀಯ ಸರಾಸರಿಗಿಂತಲೂ ವೇಗವಾಗಿದೆ. ರಾಜ್ಯ – ರೋಗ ದ್ವಿಗುಣ ದರ ಬಿಹಾರ 7.25 ದಿನ ಕರ್ನಾಟಕ 9.06 ದಿನ ಝಾರ್ಖಂಡ್ 9.63 ದಿನ ಒಡಿಶಾ 10.3 ದಿನ ಮಹಾರಾಷ್ಟ್ರ 12.35 ದಿನ ಕೇರಳ 13.23 ದಿನ ತಮಿಳುನಾಡು 13.64 ದಿನ (ರಾಷ್ಟ್ರೀಯ ಸರಾಸರಿ 13.7)