Advertisement

ಶಿಕ್ಷಕಿಯರ ತರಬೇತಿ ಕೇಂದ್ರಕ್ಕೆ ಬೀಗ; ಸರ್ಕಾರಿ ಆದೇಶ ಸರಿಯಲ್ಲ

11:17 AM May 05, 2019 | pallavi |

ಧಾರವಾಡ: ಶತಮಾನ ಪೂರೈಸಿದ ಶಿಕ್ಷಕಿಯರ ತರಬೇತಿ ಕೇಂದ್ರಕ್ಕೆ ಬೀಗ ಹಾಕುವಂತೆ ಸರ್ಕಾರ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರದ ಶಿಕ್ಷಕಿಯರ ತರಬೇತಿ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಧಾರವಾಡಿಗರ ಭಾವನೆಯಾಗಿದೆ. ಸಂಖ್ಯೆ ಕಡಿಮೆಯಾಗಿದೆಯೆಂದು ತರಬೇತಿ ಕೇಂದ್ರ ಮುಚ್ಚಲು ಸರ್ಕಾರ ಆದೇಶ ನೀಡಿದ್ದು, ಆದೇಶವನ್ನು ಶೀಘ್ರವೇ ಹಿಂಪಡೆಯುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಲಾಗುವುದು.

ವಿದ್ಯಾಕಾಶಿಯ ಮಹತ್ವದ ತರಬೇತಿ ಸಂಸ್ಥೆ ಇದಾಗಿದ್ದು, 11 ಎಕರೆ ವಿಸ್ತಾರ ಜಾಗ ಹೊಂದಿದೆ. ಮಹಿಳೆಯರ ವಸತಿ ನಿಲಯ, ವಿವಿಧ ರೀತಿಯ ಪರೀಕ್ಷೆ ನಡೆಸಲು ಸಹಾಯಕಾರಿಯಾಗಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಬ್ರಿಟಿಷ್‌ ಕಾಲದಲ್ಲಿ ನಿರ್ಮಿಸಲಾದ ಪಾರಂಪರಿಕವಾದ ಕಟ್ಟಡ ನೋಡಲು ಸಿಗಲ್ಲ. ಇದು ಶಿಕ್ಷಣ ಸಂಸ್ಥೆಗೆ ಸೂಕ್ತವಾದ ಜಾಗವಾಗಿದೆ ಎಂದರು.

ಮಕ್ಕಳು ಕಡಿಮೆಯಾಗಿದ್ದಾರೆಂಬ ಕಾರಣಕ್ಕೆ ಬೀಗ ಹಾಕುವ ನಿರ್ಧಾರಕ್ಕೆ ಬರದೇ ಮಕ್ಕಳನ್ನು ಕೇಂದ್ರದತ್ತ ಸೆಳೆಯಲು ಯೋಜನೆಗಳನ್ನು ರೂಪಿಸಬೇಕು. ಒಂದು ವೇಳೆ ಸರ್ಕಾರ ಮುಚ್ಚಲು ಮುಂದಾದರೆ ಧಾರವಾಡದ ಶಿಕ್ಷಣ ಪ್ರೇಮಿಗಳು ಒಂದಾಗಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ಬರಗಾಲದ ಸಂಕಷ್ಟದ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳು ಹೋಮ, ಹವನವೆಂದು ಸುತ್ತಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, ನಾಲ್ಕೈದು ದಿನಗಳಿಂದ ಆರೋಗ್ಯ ಸರಿ ಇಲ್ಲ ಕಾರಣ ಚಿಕಿತ್ಸೆಗೆಂದು ಹೋಗಿದ್ದಾರೆ. ಆರೋಗ್ಯ ಬಗ್ಗೆ ಗಮನ ಹರಿಸುವುದು ಅತೀ ಮುಖ್ಯ. ಹೀಗಾಗಿ ನಾಳೆ ಬಂದು ಉಳಿದ ಕೆಲಸಗಳಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದರು.

Advertisement

ಮೈತ್ರಿ ಸರ್ಕಾರದಲ್ಲಿರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವ ಮೂಲಕ ಸಮರ್ಥವಾದ ಆಡಳಿತ ನೀಡಿದ್ದೇವೆ. ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡಿದ್ದು, ಅದರಂತೆ ಸ್ಥಳೀಯ ಚುನಾವಣೆಯಲ್ಲೂ ಮುಂದುವರಿಯಲಿ. ಈ ವಿಷಯದಲ್ಲಿ ತಲೆಗೊಬ್ಬರು ಒಂದರಂತೆ ಮಾತನಾಡುವುದು ಸರಿಯಲ್ಲ, ಬಾಯಿಗಳಿಗೆ ಬೀಗ ಹಾಕಿಕೊಂಡು ಕೆಲಸ ಮಾಡಬೇಕು. ಇನ್ನು ಕೋಮುವಾದಿ ಪಕ್ಷ ಆಡಳಿತಕ್ಕೆ ಬರಬಾರದೆನ್ನುವ ದೃಷ್ಟಿಯಿಂದ ಮೈತ್ರಿ ಸರ್ಕಾರ ರಚಿಸಲಾಗಿದ್ದು, ಒಂದು ವೇಳೆ ಮೈತ್ರಿ ಸರ್ಕಾರ ಮುರಿದು ಬಿದ್ದರೆ ನಗೆಪಾಟಲಿಗೆ ಬಲಿಯಾಗಬೇಕಾಗುತ್ತದೆ.
∙ ಬಸವರಾಜ ಹೊರಟ್ಟಿ, ವಿದಾನ ಪರಿಷತ್‌ ಮಾಜಿ ಸಭಾಪತಿ

Advertisement

Udayavani is now on Telegram. Click here to join our channel and stay updated with the latest news.

Next