ಧಾರವಾಡ: ಜಿಲ್ಲೆಯಲ್ಲಿ ಆರಂಭಿಸಿದ್ದ ಎಂಟು ಹೆಸರು ಖರೀದಿ ಕೇಂದ್ರಗಳ ಪೈಕಿ ಎರಡು ಕೇಂದ್ರಗಳಲ್ಲಿ ಅಷ್ಟೇ ಹೆಸರು ಖರೀದಿ ಆಗಿದ್ದು ಬಿಟ್ಟರೇ ಉಳಿದ ಕೇಂದ್ರಗಳಲ್ಲಿ ಹೆಸರು ಖರೀದಿ ಆಗದೇ ಬಾಗಿಲು ಮುಚ್ಚಿವೆ.
ಖರೀದಿ ಪ್ರಕ್ರಿಯೆಗೆ ನೀಡಿದ್ದ ಅವಧಿ ಮುಗಿದ ಬಳಿಕವೂ ಮತ್ತೆ ಒಂದು ತಿಂಗಳ ಅವಧಿ ವಿಸ್ತರಿಸುವುದರ ಜತೆಗೆ ಪ್ರತಿ ರೈತರಿಂದ 4 ಕ್ವಿಂಟಲ್ ಬದಲಿಗೆ 6 ಕ್ವಿಂಟಲ್ ಖರೀದಿಸುವುದಾಗಿ ಪ್ರಮಾಣ ಹೆಚ್ಚಳ ಮಾಡಿದರೂ ಹೆಸರು ಖರೀದಿ ಆಗದೇ ಕೇಂದ್ರಗಳು ಬಾಗಿಲು ಮುಚ್ಚುವಂತಾಗಿವೆ.
ನ.30 ಖರೀದಿಗೆ ಕೊನೆ ದಿನವಾಗಿದ್ದು, ಹುಬ್ಬಳ್ಳಿಯ ಅಮರಗೋಳ ಹಾಗೂ ಕುಂದಗೋಳದ ಯರಗುಪ್ಪಿಯ ಕೇಂದ್ರ ಬಿಟ್ಟರೆ ಉಳಿದ ಕೇಂದ್ರಗಳಿಗೆ ರೈತರು ತಂದಿಟ್ಟ ಹೆಸರಿನ ಗುಣಮಟ್ಟ ಹೊಂದಾಣಿಕೆ ಆಗದೇ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿವೆ. ಹೀಗಾಗಿ ಅಧಿಕೃತವಾಗಿಧಾರವಾಡದ ಹೊಸ ಎಪಿಎಂಸಿಯಲ್ಲಿ ಆರಂಭಿಸಿದ್ದ ಕೇಂದ್ರ ಸೇರಿದಂತೆ 8 ಕೇಂದ್ರಗಳ ಪೈಕಿ 6 ಸಂಪೂರ್ಣ ಬಾಗಿಲು ಹಾಕಿವೆ.
ಗುಣಮಟ್ಟದ ಕೊರತೆ: ಕಳೆದ ಬಾರಿ ಧಾರವಾಡ ಜಿಲ್ಲೆಯಿಂದ 27 ಸಾವಿರ ರೈತರು ತಮ್ಮ ಹೆಸರುಮಾರಾಟಕ್ಕೆ ನೋಂದಣಿ ಮಾಡಿಸಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಉ.ಕ. ಭಾಗದ 8 ಜಿಲ್ಲೆಗಳಿಂದ ನೋಂದಣಿ ಮಾಡಿಸಿದವರ ಸಂಖ್ಯೆ ಕೇವಲ 29,311. ಈ ಪೈಕಿ ಜಿಲ್ಲೆಯ 8 ಖರೀದಿ ಕೇಂದ್ರಗಳಾದ ಹುಬ್ಬಳ್ಳಿಯ ಅಮರಗೋಳ-611, ಹೆಬಸೂರ-857, ಧಾರವಾಡ ಎಪಿಎಂಸಿ-506, ಯರಗುಪ್ಪಿ-449, ಅಣ್ಣಿಗೇರಿ-89, ಮೊರಬ-32, ಕುಂದಗೋಳ-379, ನವಲಗುಂದ-246 ರೈತರು ಸೇರಿದಂತೆ ಒಟ್ಟು 3169 ರೈತರು ನೋಂದಣಿ ಮಾಡಿಸಿದ್ದರು. ಅದರಂತೆ ನೋಂದಣಿ ಮಾಡಿಸಿದ ರೈತರು ತಮ್ಮ ಹೆಸರು ಮಾರಾಟಕ್ಕೆ ಮುಂದಾದರೂಮಳೆಯ ಹೊಡೆತಕ್ಕೆ ಕಾಳಿನಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಎಫ್‌ಕ್ಯೂ ಗುಣಮಟ್ಟದಪರೀಕ್ಷೆಯಲ್ಲಿ ಗುಣಮಟ್ಟ ಕೊರತೆ ಉಂಟಾಗಿ ಖರೀದಿ ಪ್ರಕ್ರಿಯೆ ಸ್ಥಗಿತಕ್ಕೆ ಮೂಲ ಕಾರಣವಾಗಿದೆ.
ನ.30ಕ್ಕೆ ಮುಕ್ತಾಯ: ಅ.2ರಿಂದ ಹೆಸರು ನೋಂದಣಿ ಆರಂಭಗೊಂಡು ಅ.9ರೊಳಗೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ಹೆಸರು ನೋಂದಣಿ ಮಾಡಬೇಕಾದ ಸಾಪ್ಟವೇರ್ ತಡವಾಗಿ ಬಂದಿದ್ದರಿಂದ ಅ.8ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಂಡಿತ್ತು. ಹೀಗಾಗಿ ಅ.19 ರವೆರೆಗೆ ನೋಂದಣಿಗೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಆ.20 ರಿಂದ ನ.2ರವರೆಗೆ ಖರೀದಿ ಪ್ರಕ್ರಿಯೆಗೆ ಅವಕಾಶ ನೀಡಲಾಗಿತ್ತು. ಆದರೆ ರೈತರಿಂದ ಉತ್ತಮ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ನ.30ರವರೆಗೆ ಅವಧಿ ವಿಸ್ತರಿಸಲಾಗಿದೆ. ಈ ಅವಧಿ ಮುಗಿಯಲು ಒಂದೇ ದಿನ ಬಾಕಿ ಉಳಿದಿದ್ದು, ಆದರೆ 8 ಕೇಂದ್ರಗಳಲ್ಲಿ ಪೈಕಿ 2 ಹೊರತು ಪಡಿಸಿ ಉಳಿದಕೇಂದ್ರಗಳಲ್ಲಿ ಖರೀದಿ ಆಗದೇ ಅವಧಿ ಮುನ್ನವೇ ಅಧಿಕೃತವಾಗಿ ಬಾಗಿಲು ಹಾಕುವಂತಾಗಿದೆ.
ಗುಣಮಟ್ಟದ ಕೊರತೆ: ಹುಬ್ಬಳ್ಳಿಯ ಅಮರಗೋಳ ಕೇಂದ್ರದಲ್ಲಿ 222 ಹಾಗೂ ಯರಗುಪ್ಪಿಯಲ್ಲಿ 100 ಕ್ವಿಂಟಲ್‌ನಷ್ಟುಹೆಸರು ಖರೀದಿಸಲಾಗಿದ್ದು, ಬಿಟ್ಟರೆ ಉಳಿದಯಾವ ಕೇಂದ್ರಗಳಲ್ಲೂ ಖರೀದಿಯೇ ಆಗಿಲ್ಲ. ನೆರೆಯಿಂದ ಬೆಳೆಯ ಪ್ರಮಾಣ ಕುಸಿತದ ಜತೆಗೆ ಮಳೆಯ ಹೊಡೆತಕ್ಕೆ ಹೆಸರು ಕಾಳಿನ ಗುಣಮಟ್ಟದ ಕೊರತೆಯೇ ಇದಕ್ಕೆ ಮೂಲ ಕಾರಣ. ಇದರೊಂದಿಗೆ ಬೆಂಬಲ ಬೆಲೆಗಿಂತ ಹೊರಗಡೆಯೇ ಹೆಚ್ಚು ಬೆಲೆ ಲಭಿಸಿರುವ ಕಾರಣವೂ ಈ ಗುಣಮಟ್ಟದ ಜಂಜಾಟವೇ ಬೇಡವೆಂದು ರೈತರು ಹೆಸರನ್ನು ಹೊರಗಡೆಯೇ ಮಾರಾಟ ಮಾಡಿದ್ದಾರೆ.
-ಶಶಿಧರ್ ಬುದ್ನಿ