ಮ್ಯಾಡ್ರಿಡ್: ಕೋವಿಡ್ 19 ಸೋಂಕು ವ್ಯಾಪಿಸಿ ಕೊಳ್ಳುತ್ತಿರುವ ಸಂದರ್ಭದಲ್ಲಿ ನಿಧಾನವಾಗಿ ಸಾವಿನ ಸುರಂಗವನ್ನು ಹೊಕ್ಕು ಹೊರಬಂದಿರುವ ರಾಷ್ಟ್ರಗಳೆಲ್ಲ ಲಾಕ್‌ಡೌನ್ ಪೊರೆಯಿಂದ ಹೊರಗೆ ಕಳಚಿಕೊಳ್ಳಲು ಸಿದ್ಧವಾಗಿವೆ.
ಈ ನಿಟ್ಟಿನಲ್ಲಿ ಈಗಾಗಲೇ ಆಸ್ಟ್ರಿಯಾ ಸಜ್ಜಾಗಿದೆ. ಚೀನ ಮೊನ್ನೆಯಷ್ಟೇ ವುಹಾನ್ ಸೇರಿದಂತೆ ಎಲ್ಲ ನಗರಗಳಲ್ಲೂ ಕೆಲವು ನಿರ್ಬಂಧಗಳನ್ನು ಸಡಿಲಿಸಿದೆ. ಇದೇ ಸಾಲಿಗೆ ಈಗ ಸ್ಪೇನ್ ಸದ್ಯವೇ ಸೇರಲಿದೆ. ಈಗಾಗಲೇ ಈ ಸಂಬಂಧ ಪೂರ್ವ ಸಿದ್ಧತೆ ಆರಂಭಿಸಿರುವ ಸ್ಪೇನ್ ಸರಕಾರವು, ಕೆಲವು ನಿರ್ಬಂಧಗಳನ್ನು ಸಡಿಲಿಸಿ ತೀರಾ ಅಗತ್ಯವಿಲ್ಲದ ವಲಯಗಳ ನೌಕರರೂ ಕೆಲಸಕ್ಕೆ ತೆರಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತಿದೆ. ಈ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಸೋಮವಾರದಿಂದ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳ್ಳಲಿದೆ.
ಹೊಸ ನಿಯಮಗಳ ಪ್ರಕಾರ ಕಾರ್ಖಾನೆ ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಈ ಕ್ಷೇತ್ರಗಳು ಮತ್ತೆ ಕಾರ್ಯಾರಂಭ ಮಾಡಬಹುದು. ಈ ಮೂಲ ಎರಡು ವಾರಗಳಿಂದ ನಿಂತಿದ್ದ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭಗೊಳ್ಳಲಿವೆ. ಬಹಳ ವಿಶೇಷವಾಗಿ ಕಟ್ಟಡ ನಿರ್ಮಾಣ ಕ್ಷೇತ್ರ ಕಾರ್ಯಾರಂಭ ಮಾಡಿದರೆ ಸ್ಥಳೀಯ ಆರ್ಥಿಕತೆಗೆ ಅನುಕೂಲವಾಗಲಿದೆ. ಆದರೆ ಬೇರೆ ಯಾವ ಅಂಗಡಿಗಳು, ಸೂಪರ್ ಮಾಲ್‌ಗಳು, ಕಚೇರಿಗಳು ಎಂದಿನಂತೆ ಮುಚ್ಚಿರಲಿವೆ. ಕಚೇರಿಗಳು ಮನೆಯಿಂದಲೇ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ.
ಸ್ಪೇನ್‌ನ ಆರೋಗ್ಯ ಸಚಿವ ಸಲ್ವಾದೊರ್ ಇಲಾ ಈ ಮಾಹಿತಿಯನ್ನು ನೀಡಿದ್ದು, ಎಪ್ರಿಲ್ 26ರ ವರೆಗೂ ಲಾಕ್ ಡೌನ್ ಮುಂದುವರಿಯಲಿದೆ. ಆದರೆ ಕೆಲವು ನಿರ್ದಿಷ್ಟ ಕ್ಷೇತ್ರಗಳಿಗೆ ಕೊಂಚ ಸಡಿಲಿಕೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ಮೂರ್‍ನಾಲ್ಕು ದಿನಗಳಿಂದ ಸ್ಪೇನ್ ನಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದ್ದು, ಸೋಂಕು ಪತ್ತೆಯಾಗುವ ಪ್ರಕರಣಗಳ ಸಂಖ್ಯೆಯೂ ಆರಂಭದಷ್ಟಿಲ್ಲ. ಮಾರ್ಚ್ ತಿಂಗಳಿನಲ್ಲಿ ಸೋಂಕು ಪ್ರಕರಣ ಶೇ. 20 ರಷ್ಟು ಹೆಚ್ಚಾಗಿತ್ತು. ಈಗ ಶೇ.3ಕ್ಕೆ ಇಳಿದಿದೆ. ಇದುವರೆಗೆ 1,57,022 ಪ್ರಕರಣಗಳು ಪತ್ತೆಯಾಗಿದ್ದು, 15, 843 ಮಂದಿ ಮರಣಕ್ಕೀಡಾಗಿದ್ದಾರೆ.