ದಾವಣಗೆರೆ: ಜಿಲ್ಲೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ವಿಮಾನನಿಲ್ದಾಣದ ಸಂಬಂಧ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ಗುರುವಾರ ಜಿಲ್ಲೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಕೇಂದ್ರ ವಿಮಾನಯಾನ ಸಚಿವಾಲಯದಿಂದ ಜಿಲ್ಲಾಡಳಿತಕ್ಕೆ ಬರೆದಿರುವ ಪತ್ರದಲ್ಲಿ ಕೇಳಲಾಗಿರುವ ಸ್ಪಷ್ಟನೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿ ಜಿಲ್ಲೆಗೆ ಭೇಟಿ ನೀಡಿ ಎರಡೂ¾ರು ಕಡೆಗಳಲ್ಲಿ ಸ್ಥಳ ಪರಿಶೀಲಿಸಿದರು. ಬಳಿಕ ಜಿಲ್ಲಾಡಳಿತ ಭವನದಲ್ಲಿ ಸಂಸದರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದಅವರು, ಈಗಾಗಲೇ ಗುರುತಿಸಿರುವ ಸ್ಥಳಗಳು ಏರ್‌ಫೋರ್ಟ್‌ಗೆ ಸೂಕ್ತವಾಗಿದ್ದು, ಕನಿಷ್ಠ 2.5 ಕಿಮೀ ಸ್ಥಳ ಬೇಕಾಗಲಿದೆ. ಇದಕ್ಕೆ ಸಂಬಂಧಿಸಿ ಕೆಲ ಅಂಕಿ ಅಂಶಗಳ ಅಗತ್ಯವಿದೆ. ಏರ್ ಬಸ್ ನಿಲ್ದಾಣ ಮಾಡುವುದಾದರೆ 500 ಎಕರೆ ಜಾಗ ಬೇಕಾಗಬಹುದು ಹಾಗೂ ಇದರಲ್ಲಿ ಎಷ್ಟು ಸರ್ಕಾರಿ ಜಾಗ ಇದೆಯೆಂದು ಪರಿಶೀಲಿಸಬೇಕು.
ಮುಖ್ಯವಾಗಿ ಈ ಭಾಗದಲ್ಲಿ ರೈತರ ಉತ್ಪಾದನೆಗಳು ಹೆಚ್ಚಿರುವುದರಿಂದ ಕಾರ್ಗೊ ನಿಲ್ದಾಣ ಮಾಡುವುದಾದರೆ ಹೆಚ್ಚು ಅನುಕೂಲವಾಗಲಿದೆ. ಕಾರ್ಗೊ ನಿಲ್ದಾಣಕ್ಕೆ 600ಎಕರೆ ಜಾಗ ಬೇಕಾಗುವುದು ಹಾಗಾಗಿ ಏರ್ ಬಸ್ ಬಗ್ಗೆ ಚಿಂತಿಸಬೇಕಾಗುತ್ತದೆ ಎಂದರು. ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ್ ಮಾತನಾಡಿ, ಕೇಂದ್ರ ವಿಮಾನಯಾನ ಪ್ರಾಧಿಕಾರದವರು ಜಿಲ್ಲೆಯಲ್ಲಿ ಏರ್‌ಫೋರ್ಟ್ ಮಾಡುವ ಸ್ಥಳದಿಂದ ಸುತ್ತಲಿನ ಏರ್‌ಫೋರ್ಟ್‌ಗಳ ಬಗೆಗೆ ಮಾಹಿತಿ ಕೋರಿದ ಹಿನ್ನೆಲೆಯಲ್ಲಿ ಮ್ಯಾಪ್ ಹಾಕಿ ನೋಡಿದಾಗ ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿ ನಿಲ್ದಾಣಗಳು ಕಂಡು ಬರುತ್ತವೆ. ಈ ಹಿಂದೆ ನೀಡಿರುವ ವರದಿಯಂತೆ ಈ ಸ್ಥಳ ಎಟಿಆರ್ 72 ಮಾದರಿ ಏರ್‌ಪೋರ್ಟ್ ನಿರ್ಮಿಸಲು ಸೂಕ್ತವಾಗಿದ್ದು 340 ಎಕರೆ ಭೂಮಿ ಗುರುತಿಸಲಾಗಿದೆ.
ಒಂದು ವೇಳೆ ಏರ್‌ಬಸ್ ನಿರ್ಮಿಸುವುದಾದರೆ ಕನಿಷ್ಠ 500 ಎಕರೆ ಜಾಗ ಬೇಕಾಗುತ್ತದೆ. ಅಗತ್ಯ ಭೂಮಿ ಒದಗಿಸಿದರೆ ನೀಲನಕ್ಷೆ ತಯಾರಿಸಲಾಗುವುದು, ಈ ಭಾಗದಲ್ಲಿ ಕೆಲ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಉದಾಹರಣೆಗೆ ಮಣ್ಣಿನ ರಚನೆ ವಾತವರಣ ಮುಂತಾದವುಗಳನ್ನು ಅಭ್ಯಸಿಸಿ ವರದಿ ನೀಡಲಾಗುವುದು. ಅಷ್ಟರೊಳಗೆ ಯಾವ ಮಾದರಿ ನಿಲ್ದಾಣ ಬೇಕು ಎಂಬುದು ನಿರ್ಧಾರವಾಗಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಡಾ| ಜಿ.ಎಂ ಸಿದ್ದೇಶ್ವರ, ಈಗಾಗಲೇ ವರದಿ ನೀಡಿರುವಂತೆ ಎಟಿಆರ್ 72 ಏರ್‌ಫೋರ್ಟ್ ಬಗ್ಗೆ ಸಿದ್ಧತೆ ಮಾಡಿಕೊಳ್ಳಿ.
ಮುಂದೆ ಏರ್ ಬಸ್ ನಿಲ್ದಾಣಕ್ಕೆ ಅನುಕೂಲವಾಗುವಂತೆ ಭೂಮಿ ಗುರುತಿಸೋಣ ಎಂದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ತಾಂತ್ರಿಕ ಪರಿಣಿತರಾದ ಪೂರ್ವಿಮಠ, ಪೈಲಟ್ ಶಮನ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಯಶವಂತರಾವ್ ಜಾಧವ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ತಹಶೀಲ್ದಾರ್ ಗಿರೀಶ್ ಇತರರು ಸಭೆಯಲ್ಲಿ ಭಾಗವಹಿಸಿದ್ದರು.