ಯಲಬುರ್ಗಾ: ಪಟ್ಟಣದ ಖಾದಿ ಗ್ರಾಮೋದ್ಯೋಗ ಹಿಂಭಾಗದ ಖಾಲಿ ಜಾಗದಲ್ಲಿ ಸಾರ್ವಜನಿಕರು ಕಸ, ಕಡ್ಡಿ, ಬಹಿರ್ದೆಸೆ ಮಾಡುವ ಮೂಲಕ ಹಂದಿ, ನಾಯಿಗಳ ತಾಣವಾಗಿ ಮಾರ್ಪಟ್ಟು ದುರ್ನಾತ ಬೀರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ಪಪಂ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಇದರ ಪಕ್ಕದಲ್ಲೇ ಬಸ್ ನಿಲ್ದಾಣವಿದ್ದು ಪ್ರಯಾಣಕರು, ಅಕ್ಕಪಕ್ಕದ ಮನೆಗಳ ನಿವಾಸಿಗಳು ಇದರ ದುರ್ವಾಸನೆಯಿಂದ ಬೇಸತ್ತು ಹೋಗಿದ್ದಾರೆ. ಇದನ್ನು ಸ್ವಚ್ಛಗೊಳಿಸಿ ಉತ್ತಮ ವಾತಾವರಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಬಳಿಕ ಪಪಂ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಮಾತನಾಡಿ, ಸಾರ್ವಜನಿಕರು ಈ ಜಾಗದಲ್ಲಿ ಯಾವುದೇ ತ್ಯಾಜ್ಯ ಎಸೆಯುವುದಾಗಲಿ, ಬಹಿರ್ದೆಸೆಗೆ ಬಳಕೆ ಮಾಡಿಕೊಂಡರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಇದನ್ನು ನಮ್ಮ ಪೌರಕಾರ್ಮಿಕರಿಂದ ಸ್ವತ್ಛಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಪಪಂನ ಆದ್ಯ ಕರ್ತವ್ಯವಾಗಿದೆ. ಎಲ್ಲ ವಾರ್ಡ್‌ಗಳಲ್ಲಿ ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ. ಪಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಗೊಳಿಸಲಾಗಿದೆ. ವ್ಯಾಪಾರಸ್ಥರು ಪ್ಲಾಸ್ಟಿಕ್ ವಸ್ತುಗಳಲ್ಲಿ ವ್ಯಾಪಾರ ವಹಿವಾಟು ಮಾಡಬಾರದು. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಎಲ್ಲ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿವೆ. ಪಟ್ಟಣದ ನಾಗರಿಕರು ಕಡ್ಡಾಯವಾಗಿ ತಮ್ಮ ಬಾಕಿ ತೆರಿಗೆ ಪಾವತಿಗೆ ಮುಂದಾಗಬೇಕು. ಪಟ್ಟಣ ವ್ಯಾಪ್ತಿಯ ಗಾಂವಠಾಣಾ ಜಾಗವನ್ನು ಪಪಂ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ ಎಂದರು.
ಪಪಂ ಸಿಬ್ಬಂದಿ ಸುಭಾಷ ಭಾವಿಮನಿ, ನಿವಾಸಿಗಳಾದ ವಿಜಯ ಜಕ್ಕಲಿ, ಕಲ್ಲೇಶ, ಮಹಾಂತೇಶ, ಮಂಜುನಾಥ, ಶಿವಕುಮಾರ ಇತರರು ಇದ್ದರು.